ಸಾರಾಂಶ
ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ಒಮ್ಮೆ ಬಳಸಿ ಬಿಸಾಡುವ ಸ್ಯಾನಿಟರಿ ಪ್ಯಾಡ್‌ಗಳು ಹಾನಿಕರವಾಗಿದ್ದು ತೆರೆದ ಜಾಗಗಳಲ್ಲಿ ಇವುಗಳನ್ನು ಹಾಕುವುದರಿಂದ ಇವುಗಳು ಕೊಳೆಯದೇ ಹಾಗೇ ಉಳಿದು ಸೋಂಕುಗಳನ್ನು ಮತ್ತು ಖಾಯಿಲೆಗಳನ್ನು ಹರಡಿ ಮನುಷ್ಯ ಹಾಗು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಹಿಳೆಯರಿಗೆ ನೈಸರ್ಗಿಕ ಕ್ರಿಯೆಗಳಲ್ಲಿ ಒಂದಾದ ಮುಟ್ಟಿನ ವಿಷಯದಲ್ಲಿ ಮುಕ್ತವಾಗಿ ಚರ್ಚಿಸುವುದು ಅದರ ಬಗ್ಗೆ ಜ್ಞಾನ ತಿಳಿದುಕೊಳ್ಳುವಲ್ಲಿ ಇಂದಿಗೂ ಮುಜುಗರ ಪಟ್ಟುಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಮುಟ್ಟಿನ ನೈರ್ಮಲ್ಯ ಮತ್ತು ಋತುಚಕ್ರ ನಿರ್ವಹಣೆ ಬಗ್ಗೆ ಅರಿವು ತುಂಬಾ ಅವಶ್ಯಕ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಹಸಿರು ದಳ ಸಂಸ್ಥೆ ಸಹಯೋಗದಲ್ಲಿ ಗುರುವಾರ ಜಿಲ್ಲೆಯ ಮಹಿಳಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಘನತ್ಯಾಜ್ಯ ನಿರ್ವಹಣೆ ಮತ್ತು ಋತುಚಕ್ರ ನಿರ್ವಹಣೆ ಕುರಿತು ಆಯೋಜಿಸಿದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮೈಸೂರಿನ ಬುಗುರಿ ಕಾರ್ಯಕ್ರಮದ ಮಕ್ಕಳ ಸಂಯೋಜಕರು ಹಾಗೂ ತರಬೇತುದಾರರಾದ ಶ್ರೀದೇವಿ ಮಾತನಾಡಿ, ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ಒಮ್ಮೆ ಬಳಸಿ ಬಿಸಾಡುವ ಸ್ಯಾನಿಟರಿ ಪ್ಯಾಡ್‌ಗಳು ಹಾನಿಕರವಾಗಿದ್ದು ತೆರೆದ ಜಾಗಗಳಲ್ಲಿ ಇವುಗಳನ್ನು ಹಾಕುವುದರಿಂದ ಇವುಗಳು ಕೊಳೆಯದೇ ಹಾಗೇ ಉಳಿದು ಸೋಂಕುಗಳನ್ನು ಮತ್ತು ಖಾಯಿಲೆಗಳನ್ನು ಹರಡಿ ಮನುಷ್ಯ ಹಾಗು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಈ ಸ್ಯಾನಿಟರಿ ಪ್ಯಾಡ್ ಗಳ ಸಂಸ್ಕರಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವುದು ಬಹಳ ಕಷ್ಟಕರವಾದ್ದರಿಂದ ಇವುಗಳ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹಸಿರುದಳ ಸಂಸ್ಥೆಯು ಮುಟ್ಟಿನ ನೈರ್ಮಲ್ಯ ಮತ್ತು ಮರುಬಳಕೆಯ ಮುಟ್ಟಿನ ಆಯ್ಕೆಗಳ ತರಬೇತಿಗಳನ್ನು ನಗರ ಮತ್ತು ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ ನೀಡುತ್ತಿದೆ ಎಂದು ಹೇಳಿದರು.ಕಾರ್ಯಾಗಾರದಲ್ಲಿ ಮೈಸೂರಿನ ಹಸಿರುದಳ ಸಂಸ್ಥೆಯ ಸಮುದಾಯ ಸಂಘಟಕರಾದ ನೂರ್ ಜಹಾನ್, ಚೈತ್ರಾ, ಕಾರ್ಯಕ್ರಮ ವ್ಯವಸ್ಥಾಪಕ ಎಚ್.ಎ.ಗುರುರಾಜ್, ಜಿಲ್ಲೆಯ ಮಹಿಳಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು. ಬೆಂಗಳೂರಿನ ಸ್ತ್ರೀ ರೋಗ ತಜ್ಞೆ ಡಾ.ಮೀನಾಕ್ಷಿ ವರ್ಚುವಲ್ ಮೀಟಿಂಗ್ ಮೂಲಕ ಈ ಕುರಿತು ಮಾಹಿತಿ ನೀಡಿದರು.