ಮುಟ್ಟು, ಗರ್ಭಕೋಶದ ಸಮಸ್ಯೆ ಉದಾಸೀನ ಬೇಡ: ಡಾ.ಯಾಶಿಕಾ

| Published : Jul 28 2025, 12:30 AM IST

ಸಾರಾಂಶ

ಮಹಿಳೆಯರ ಆರೋಗ್ಯದ ಮೇಲೆ ಸಮಾಜದ ಸ್ವಾಸ್ಥ್ಯ ಅಡಗಿದೆ. ಮಹಿಳೆಯರಿಗೆ ಮಾರಕವಾಗಬಲ್ಲ ಗರ್ಭಕಂಠದ ಕ್ಯಾನ್ಸರ್ (ಸೆರ್‌ವಿಕಲ್ ಕ್ಯಾನ್ಸರ್) ಹೆಚ್ಚಿನ ಸಂದರ್ಭದಲ್ಲಿ ತಡೆಗಟ್ಟಬಹುದಾಗಿದೆ. ೩೦ ವರ್ಷದ ಬಳಿಕ ಮೂರು ವರ್ಷಕ್ಕೊಮ್ಮೆ ಪ್ಯಾಪ್‌ಸ್ಮಿಯರ್, ವ್ಯಾಕ್ಸಿನೇಷನ್, ಆರೋಗ್ಯಕರ ಲೈಂಗಿಕ ಕ್ರಿಯೆಯಿಂದ ಅದನ್ನು ತಡೆಯಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಇಂದಿನ ಒತ್ತಡದ ಜೀವನದಲ್ಲಿ ಮುಟ್ಟು, ಗರ್ಭಕೋಶದಂತಹ ಸಮಸ್ಯೆಗಳನ್ನು ಮಹಿಳೆಯರು ಉದಾಸೀನ ಮಾಡಬಾರದು ಎಂದು ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಯಾಶಿಕಾ ಅನಿಲ್ ತಿಳಿಸಿದರು.

ನಗರದ ಗುತ್ತಲು ರಸ್ತೆಯಲ್ಲಿರುವ ಸಫ್ದರಿಯಾಬಾದ್ ಮೊಹಲ್ಲಾದ ಎಚ್.ಎಸ್.ಕಾಂಪ್ಲೆಕ್ಸ್‌ನಲ್ಲಿ ಡಾ.ಅನಿಲ್ ಆನಂದ್ ಡ್ರೀಮ್ ವರ್ಕ್ಸ್ (ಅಳಿಲು ಸೇವೆ) ವತಿಯಿಂದ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಿಳೆಯರ ಆರೋಗ್ಯದ ಮೇಲೆ ಸಮಾಜದ ಸ್ವಾಸ್ಥ್ಯ ಅಡಗಿದೆ. ಮಹಿಳೆಯರಿಗೆ ಮಾರಕವಾಗಬಲ್ಲ ಗರ್ಭಕಂಠದ ಕ್ಯಾನ್ಸರ್ (ಸೆರ್‌ವಿಕಲ್ ಕ್ಯಾನ್ಸರ್) ಹೆಚ್ಚಿನ ಸಂದರ್ಭದಲ್ಲಿ ತಡೆಗಟ್ಟಬಹುದಾಗಿದೆ. ೩೦ ವರ್ಷದ ಬಳಿಕ ಮೂರು ವರ್ಷಕ್ಕೊಮ್ಮೆ ಪ್ಯಾಪ್‌ಸ್ಮಿಯರ್, ವ್ಯಾಕ್ಸಿನೇಷನ್, ಆರೋಗ್ಯಕರ ಲೈಂಗಿಕ ಕ್ರಿಯೆಯಿಂದ ಅದನ್ನು ತಡೆಯಬಹುದು ಎಂದು ನುಡಿದರು.

ಮುಟ್ಟಿನಲ್ಲಿ ವ್ಯತ್ಯಾಸಗಳು ಕಂಡುಬಂದರೂ ಗರ್ಭ ಧರಿಸುವುದಕ್ಕೆ ತೊಂದರೆ ಉಂಟಾಗಲಿದೆ. ಮುಟ್ಟಿನ ಸಮಸ್ಯೆಗಳು, ಗರ್ಭಕೋಶದಲ್ಲಿ ಗಂಟುಗಳು ಕಂಡುಬಂದ ಕೂಡಲೇ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದರು.

ನ್ಯೂರೋ ಸೈಕಿಯಾಟ್ರಿಸ್ಟ್ ಡಾ.ಅನಿಲ್ ಆನಂದ್ ಮಾತನಾಡಿ, ನಿತ್ಯ ಒಂದು ಗಂಟೆ ವಾಕಿಂಗ್ ಅಥವಾ ವ್ಯಾಯಾಮಕ್ಕೆ ಸಮಯವನ್ನು ಮೀಸಲಿಡಬೇಕು. ಧ್ಯಾನ, ಯೋಗದಿಂದಲೂ ಒತ್ತಡದಿಂದ ಪಾರಾಗಬಹುದು. ಮನಸ್ಸಿನ ಮೇಲೆ ಒತ್ತಡ ಬೀಳದಂತೆ ಹಾಗೂ ಆರೋಗ್ಯಕರ ಆಹಾರ ಸೇವಿಸುವುದರಿಂದ ಹೃದಯಾಘಾತಗಳನ್ನು ತಪ್ಪಿಸಬಹುದು ಎಂದರು.

ಜಂಕ್‌ಫುಡ್, ಫಾಸ್ಟ್‌ಫುಡ್‌ನಂತಹ ಆಹಾರ ಸೇವನೆಯಿಂದ ದೂರವಿರಬೇಕು. ಸೊಪ್ಪು, ತರಕಾರಿ, ಮೊಟ್ಟೆ, ಹಣ್ಣುಗಳನ್ನು ಸೇವಿಸುವ ಮೂಲಕ ದೇಹದ ಪೌಷ್ಠಿಕಾಂಶತೆಯನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ಸದಾಕಾಲ ಚಟುವಟಿಕೆಯಿಂದ ಇರುವುದಕ್ಕೆ ಸಾಧ್ಯವಾಗಲಿದೆ ಎಂದು ನುಡಿದರು.

ಆರೋಗ್ಯ ಶಿಬಿರದಲ್ಲಿ ೩೦೦ಕ್ಕೂ ಹೆಚ್ಚು ರೋಗಿಗಳಿಗೆ ತಪಾಸಣೆ ನಡೆಸಲಾಯಿತು. ಉಚಿತವಾಗಿ ರಕ್ತದೊತ್ತಡ, ಮಧುಮೇಹ, ನರ ಸಮಸ್ಯೆಗಳ ತಪಾಸಣೆ ಜೊತೆಗೆ ಉಚಿತ ಔಷಧ ವಿತರಣೆ, ಆಯ್ದ ರೋಗಿಗಳಿಗೆ ಲಕ್ಷ್ಮೀ ಡಯಾಗ್ನೋಸ್ಟಿಕ್ ಸೆಂಟರ್ ವತಿಯಿಂದ ಶೇ.೫೦ ರಿಯಾಯಿತಿ ದರದಲ್ಲಿ ಸ್ಕ್ಯಾನಿಂಗ್ ಮಾಡಿಸಲಾಯಿತು. ಹಲವು ಔಷಧ ಕಂಪನಿಗಳು ಶಿಬಿರಕ್ಕೆ ಸಹಕಾರ ನೀಡಿದ್ದವು.

ನರರೋಗ ಮತ್ತು ನೋವಿನ ಸಮಸ್ಯೆಗಳಿಗೆ ಡಾ.ಅನಿಲ್ ಆನಂದ್‌ಚಿಕಿತ್ಸೆ ನೀಡಿದರು. ಮಕ್ಕಳ ತಜ್ಞೆ ಡಾ.ರಕ್ಷಾ ವಿಭುವಂದನ್ ಭಾಗವಹಿಸಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಶಿಬಿರದಲ್ಲಿ ದರ್ಶನ್, ದೀಪು, ಸೈಯದ್, ವಸೀಮ್, ಭರತ್, ಅನುಷಾ, ಮಂಜು, ಸತೀಶ್, ನಾಗೇಗೌಡ, ವಿನಯ್ ಭಾಗವಹಿಸಿದ್ದರು.