ಕ್ರೀಡೆಯಿಂದ ಮಾನಸಿಕ ನೆಮ್ಮದಿ: ರವೀಂದ್ರ ಶೆಟ್ಟಿ

| Published : Mar 31 2024, 02:03 AM IST

ಸಾರಾಂಶ

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಕಾರ್ಕಳದ ಕುಕ್ಕುಂದೂರು ಗಣಿತ ನಗರ ಜ್ಞಾನಸುಧಾ ಕಾಲೇಜು ಮೈದಾನದಲ್ಲಿ ಪತ್ರಕರ್ತರ ವಾಲಿಬಾಲ್ ಪಂದ್ಯಾಟ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಒತ್ತಡದ ನಡುವೆ ಇರುವ ಪತ್ರಕರ್ತರು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮುಖೇನ ಮಾನಸಿಕ ನೆಮ್ಮದಿಯನ್ನು ಕಾಣಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಕ್ವಾರಿ ಹಾಗೂ ಕ್ರಷರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.

ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಕಾರ್ಕಳದ ಕುಕ್ಕುಂದೂರು ಗಣಿತ ನಗರ ಜ್ಞಾನಸುಧಾ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಲಾದ ಪತ್ರಕರ್ತರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಯಾವುದೇ ಆಗು ಹೋಗುಗಳನ್ನು ಸಮಾಜದ ಮುಂದಿಡುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಸಂವಿಧಾನ ನಾಲ್ಕನೇ ಅಂಗವಾಗಿ ಪತ್ರಿಕಾರಂಗವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಜೆಕಾರು ಪದ್ಮಗೋಪಲ್ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಮಾತನಾಡಿ, ನಿತ್ಯದ ಉತ್ತಮ ಬದುಕಿಗೆ ವ್ಯಾಯಾಮ, ಯೋಗದ ಜೊತೆಗೆ ಕ್ರೀಡೆಯು ‌ಅವಶ್ಯಕವಾಗಿದೆ. ಇದರಿಂದಾಗಿ ನೆಮ್ಮದಿ ಗಳಿಸಲು ಸಾಧ್ಯವಿದೆ ಎಂದರು.ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಪಂದ್ಯಾಟ ಉದ್ಘಾಟಿಸಿ, ಪತ್ರಕರ್ತರ ಜಿಲ್ಲಾ ಮಟ್ಟದ ಕ್ರೀಡೆಯನ್ನು ಸಂಘಟಿಸಿದ ಕಾರ್ಕಳ ತಾಲೂಕು ಪತ್ರಕರ್ತರ ಸಂಘ ಹಾಗೂ ಜ್ಞಾನ ಸುಧಾ ಶಿಕ್ಷಣ ಸಂಸ್ಥೆ ಗಳಿಗೆ ಶುಭಹಾರೈಸಿದರು‌.

ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಣಿಪಾಲ ಕೆ.ಎಂ.ಸಿ. ಸೇಲ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್ ಮೋಹನ್ ಶೆಟ್ಟಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ದಿನೇಶ್ ಕೊಡವೂರು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಳೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಜಿಲ್ಲಾ ಸಂಘದ ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಜಿಲ್ಲಾ ಪ್ರತಿನಿಧಿ ಉದಯ್ ಮುಂಡ್ಕೂರು, ತಾಲೂಕು ಸಂಘದ ಕೋಶಾಧಿಕಾರಿ ಖಲೀಲ್ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು. ಹರೀಶ್ ಸಚ್ಚೇರಿಪೇಟೆ ಕಾರ್ಯಕ್ರಮ ನಿರೂಪಿಸಿದರು. ವಾಸುದೇವ ಭಟ್ ಪ್ರಾರ್ಥಿಸಿದರು. ಕೃಷ್ಣ ನಾಯಕ್ ಸ್ವಾಗತಿಸಿದರು. ಬಾಲಕೃಷ್ಣ ಭೀಮಗುಳಿ ವಂದಿಸಿದರು.