ಅಬಕಾರಿ ಉಪ ಆಯುಕ್ತರಿಂದ ಮಾನಸಿಕ ಕಿರುಕುಳ : ಕ್ರಮಕ್ಕೆ ಒತ್ತಾಯ

| Published : May 08 2024, 01:03 AM IST

ಅಬಕಾರಿ ಉಪ ಆಯುಕ್ತರಿಂದ ಮಾನಸಿಕ ಕಿರುಕುಳ : ಕ್ರಮಕ್ಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಭ್ರಷ್ಟಚಾರದಲ್ಲಿ ತೊಡಗಿರುವ ಅಬಕಾರಿ ಉಪ ಆಯುಕ್ತರ ಮೇಲೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಸಮ್ಮತವಾಗಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಜಿಲ್ಲಾಡಳಿತವನ್ನು ಮಂಗಳವಾರ ಒತ್ತಾಯಿಸಿದೆ.

ಅಧಿಕಾರ ದುರುಪಯೋಗ, ವರ್ತಕರಿಗೆ ಕಿರುಕುಳ, ಅಂಗಡಿಯ ಪರವಾನಿಗೆ ರದ್ದುಪಡಿಸುವ ಬೆದರಿಕೆ: ಆರೋಪ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭ್ರಷ್ಟಚಾರದಲ್ಲಿ ತೊಡಗಿರುವ ಅಬಕಾರಿ ಉಪ ಆಯುಕ್ತರ ಮೇಲೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಸಮ್ಮತವಾಗಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಜಿಲ್ಲಾಡಳಿತವನ್ನು ಮಂಗಳವಾರ ಒತ್ತಾಯಿಸಿದೆ.ಈ ಸಂಬಂಧ ಶಿರಸ್ತೇದಾರ್ ಹೇಮಂತ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದ ಅಸೋಸಿಯೇಷನ್ ಮುಖಂಡರು ಅಬಕಾರಿ ಉಪ ಆಯಕ್ತರು ಭ್ರಷ್ಟಚಾರದಲ್ಲಿ ತೊಡಗಿದ್ದಾರೆ. ಮಾನಸಿಕ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಬಳಿಕ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಬಿ.ರಾಜಪ್ಪ ಅವರು, ಅಬಕಾರಿ ಇಲಾಖೆ ಉಪ ಆಯುಕ್ತರು ದುರುದ್ದೇಶ ದಿಂದ ಅಧಿಕಾರ ಹಾಗೂ ಸಿಬ್ಬಂದಿಗಳ ದುರುಪಯೋಗಪಡಿಸಿಕೊಂಡು ಸುಳ್ಳು ಪ್ರಕರಣ ದಾಖಲಿಸಿ, ಮದ್ಯದಂಗಡಿಗಳ ಮಾಲೀಕರಿಗೆ ದುಬಾರಿ ದಂಡ ವಿಧಿಸುವುದಾಗಿ ಬೆದರಿಕೆವೊಡ್ಡಿ ಕಡಿಮೆ ದಂಡದ ಮೊತ್ತ ವಿಧಿಸಲು ಲಂಚ ನೀಡಬೇಕೆಂದು ಪೀಡಿಸುತ್ತಿದ್ದಾರೆ ಎಂದರು.ಹಣ ನೀಡಲು ಒಪ್ಪದಿರುವ ಸನ್ನದುದಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಅಂಗಡಿ ಅಮಾನತ್ತುಗೊಳಿಸಲು ಶಿಫಾರಸ್ಸು ಮಾಡುವುದಾಗಿ ಮೇಲಿಂದ ಮೇಲೆ ಬೆದರಿಕೆವೊಡ್ಡಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಅಲ್ಲದೇ ಕಚೇರಿಗೆ ಕರೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಲಾಗುತ್ತಿದೆ ಎಂದು ದೂರಿದರು.ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ಚುನಾವಣಾ ವೀಕ್ಷಕರು, ಪೊಲೀಸ್ ಅಧೀಕ್ಷಕರಿಗೆ ಉಪ ಆಯುಕ್ತರು ದುಬಾರಿ ಮೌಲ್ಯದ ಮದ್ಯದ ಬಾಟಲಿಗಳನ್ನು ನೀಡಬೇಕೆಂದು ಆಗ್ರಹಿಸುವ ಜೊತೆಗೆ ಹಣದ ಬೇಡಿಕೆ ಇಡಲಾಗುತ್ತಿದೆ. ಹಾಗೂ ಉಸ್ತುವಾರಿ ಸಚಿವರ ಪ್ರವಾಸದಲ್ಲಿ ಹಲವಾರು ಖರ್ಚುಗಳಿವೆ ಎಂದು ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಈಚೆಗೆ ಲೋಕಸಭಾ ಚುನಾವಣೆ ಖರ್ಚು ಸಂಬಂಧ ಹಣ ನೀಡಬೇಕೆಂದು ಸನ್ನುದಾರರ ಸಭೆ ಕರೆದು ಹಿಂಸಿಸಲಾಗುತ್ತಿದೆ. ಸಭೆಗೆ ಹಾಜರಾಗದವರ ಮದ್ಯದಂಗಡಿ ಮೇಲೆ ಪ್ರಕರಣ ದಾಖಲಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿ, ಬಳಿಕ ವಿಚಾರಿಸಿದರೆ ಯಾವುದೇ ಆದೇಶ ನೀಡಿಲ್ಲವೆಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ ಎಂದರು.ಹೀಗಾಗಿ ಜಿಲ್ಲಾಡಳಿತ ಅಬಕಾರಿ ಉಪ ಆಯುಕ್ತರ ಮೇಲೆ ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಮದ್ಯದಂಗಡಿ ಮಾಲೀಕರು ನಿರ್ಭೀತಿಯಿಂದ ಹಾಗೂ ನ್ಯಾಯಸಮ್ಮತವಾದ ವ್ಯಾಪಾರ ನಡೆಸಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವಂತೆ ಮಾಡುವ ಜೊತೆಗೆ ನೆಮ್ಮದಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷರಾದ ಓಂಕಾರೇಗೌಡ, ಉದಯ್, ಸಿ.ಎಂ.ಸಿದ್ದು, ವಿನಯ್, ಪ್ರಧಾನ ಕಾರ್ಯದರ್ಶಿ ಮಂಚೇಗೌಡ, ಪಿಂಟೋ, ಸದಸ್ಯರಾದ ವಿನೋದ್, ನಾಸೀರ್, ಮಧು, ಸಚಿನ್, ಜಯವರ್ಧನ್, ಪುನೀತ್, ಶೇಖರ್ ಇದ್ದರು.

ಪೋಟೋ ಪೈಲ್‌ ನೇಮ್‌ 7 ಕೆಸಿಕೆಎಂ 1ಅಬಕಾರಿ ಉಪ ಆಯುಕ್ತರ ಮೇಲೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಸಮ್ಮತವಾಗಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಜಿಲ್ಲಾ ಘಟಕ ಡಿಸಿ ಕಚೇರಿಯ ಶಿರಸ್ತೇದಾರರಾದ ಹೇಮಂತ್‌ಕುಮಾರ್‌ ಅವರಿಗೆ ಮಂಗಳವಾರ ಮನವಿ ಸಲ್ಲಿಸಿತು.