ಸಾರಾಂಶ
ಜಿಲ್ಲಾಡಳಿದಿಂದ ವಿಶ್ವ ಸ್ಕಿಜೋಫ್ರೇನಿಯಾ ದಿನ ಆಚರಣೆ
ಕನ್ನಡಪ್ರಭ ವಾರ್ತೆ ಹಾಸನಪ್ರತಿ ವ್ಯಕ್ತಿ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ತುಂಬಾ ಅತ್ಯಗತ್ಯ. ಮಾನಸಿಕ ಸಮಸ್ಯೆಯನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಸಮಾಜದಲ್ಲಿ ಅವರೂ ಸಹ ಎಲ್ಲರಂತೆ ಬದುಕಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಶಿವಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಮನೋವೈದ್ಯಕೀಯ ವಿಭಾಗ, ಹಿಮ್ಸ್ ಹಾಗೂ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂ.ಜಿ.ರಸ್ತೆ, ಹಾಸನ ಜಂಟಿಯಾಗಿ ವಿಶ್ವ ಸ್ಕಿಜೋಫ್ರೇನಿಯಾ ದಿನ ಆಚರಿಸಲಾಯಿತು.ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ ನಾಗೇಶ್.ಪಿ ಆರಾಧ್ಯ ಮಾತನಾಡಿ, ‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಮನೋಚೈತನ್ಯ ಕ್ಲಿನಿಕ್‌ನಡಿಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ತಂಡ ನಿರ್ವಹಿಸುತ್ತಿದ್ದು, ಬೇಲೂರು ತಾಲೂಕಿನಲ್ಲಿ ನಿಮ್ಹಾನ್ಸ್, ಬೆಂಗಳೂರು ಜಂಟಿಯಾಗಿ ನಮನ್ (ತಾಲೂಕು ಮಾನಸಿಕ ಕಾರ್ಯಕ್ರಮ) ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ ೧೪೪೧೬ ವಾರದ ೨೪ ಗಂಟೆ ಕೆಲಸ ನಿರ್ವಹಿಸುತ್ತಿದ್ದು ಮಾನಸಿಕ ಆರೋಗ್ಯ ಕುರಿತ ಯಾವುದೇ ವಿಚಾರವನ್ನು ಪರಿಹರಿಸಿಕೊಳ್ಳಬಹುದು’ ಎಂದು ತಿಳಿಸಿದರು.
ಹಿಮ್ಸ್‌ನ ಮನೋರೋಗ ತಜ್ಞೆ ಡಾ ಭಾರತಿ.ಜಿ ಮಾತನಾಡಿ, ಮಾನಸಿಕ ಆರೋಗ್ಯ ಎಂದರೆ ಜೀವನದಲ್ಲಿ ಎದುರಾಗುವಂತೆಹ ತೊಂದರೆಗಳನ್ನು ಧೈರ್ಯದಿಂದ ನಿಭಾಯಿಸುವುದು ಎಂದು ಸ್ಕಿಜೋಫ್ರೇನಿಯಾ ಕಾಯಿಲೆಯ ಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ಧ್ಯಾನ, ಯೋಗ ಹಾಗೂ ವ್ಯಾಯಾಮಗಳಂತಹ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಮಾನಸಿಕ ಸಮತೋಲನೆಯನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.ಜಿಲ್ಲಾ ರೋಗ ವಾಹಕಗಳ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನಾಗಪ್ಪ ಮಾತನಾಡಿ, ದೈಹಿಕ ಆರೋಗ್ಯದಷ್ಠೇ ಮಾನಸಿಕ ಆರೋಗ್ಯವೂ ಮುಖ್ಯವಾಗಿದ್ದು ಅದನ್ನು ಕಡೆಗಣಿಸಬಾರದು. ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮನೆಯ ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆ ಗಮನ ಹರಿಸಲು ತಿಳಿಸಿದರು.
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಲೀಲಾವತಿ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹಲವು ರೀತಿಯ ಒತ್ತಡಗಳನ್ನು ಎದುರಿಸುತ್ತಲಿದ್ದು ಅದನ್ನು ನಿಭಾಯಿಸುವ ಮತ್ತು ಅದರಿಂದ ಹೊರಬರಲು ಅನುಕೂಲವಾಗುವ ಈ ರೀತಿಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಕಾರ್ಯಕ್ರವದ ವಂದನಾರ್ಪಣೆಯನ್ನು ನೆರವೇರಿಸಿದರು. ಪ್ರಾಂಶುಪಾಲೆ ಡಾ.ಕವಿತ ಕೆ.ಜಿ., ಆಪ್ತ ಸಮಾಲೋಚನಾ ಘಟಕದ ಸಂಚಾಲಕಿ ಡಾ.ಮೀನಾಕ್ಷಿ, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಗೊರೂರು, ಜಿಲ್ಲಾ ಮಾನಸಿಕ ಆರೋಗ್ಯ ತಂಡದ ಡಾ.ಪ್ರತೀಕ್ ಶೇಖರ್, ರವೀಂದ್ರ ಕೆ.ಪಿ., ವಿದ್ಯಾ.ಸಿ.ಕೆ, ಕುಮಾರಿ, ರಮೇಶ್ ಇದ್ದರು.