ಸಾರಾಂಶ
ಮನುಷ್ಯನಿಗೆ ಹಣಕ್ಕಿಂತ ನೆಮ್ಮದಿ ಮುಖ್ಯ. ನೆಮ್ಮದಿಯ ಜೀವನ ಇದ್ದಾಗ ಸಾಧನೆ ಮಾಡಲು ಸಾಧ್ಯ. ಮಠ-ಮಂದಿರಗಳಿಗೆ ಪ್ರತಿನಿತ್ಯ ಭೇಟಿ ನೀಡುವುದರಿಂದ ನಮ್ಮಲ್ಲಿ ಬದಲಾವಣೆ ಸಾಧ್ಯ. ನಾವು ಸಂಸ್ಕಾರದಿಂದ ಶ್ರೀಮಂತರಾಗಬೇಕು ಎಂದು ಡಾ. ಮಹಾದೇವ ಸ್ವಾಮೀಜಿ ಹೇಳಿದರು.
ಕೊಪ್ಪಳ:
ಮಠ-ಮಾನ್ಯಗಳಲ್ಲಿ ನಡೆಯುವ ಶಿವಾನುಭವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಡಾ ಮಹಾದೇವ ಸ್ವಾಮೀಜಿ ಹೇಳಿದರು.ತಾಲೂಕಿನ ಬೆಟಗೇರಿ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ 3ನೇ ಮಾಸಿಕ ಶಿವಾನುಭವ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯನಿಗೆ ಹಣಕ್ಕಿಂತ ನೆಮ್ಮದಿ ಮುಖ್ಯ. ನೆಮ್ಮದಿಯ ಜೀವನ ಇದ್ದಾಗ ಸಾಧನೆ ಮಾಡಲು ಸಾಧ್ಯ. ಮಠ-ಮಂದಿರಗಳಿಗೆ ಪ್ರತಿನಿತ್ಯ ಭೇಟಿ ನೀಡುವುದರಿಂದ ನಮ್ಮಲ್ಲಿ ಬದಲಾವಣೆ ಸಾಧ್ಯ. ನಾವು ಸಂಸ್ಕಾರದಿಂದ ಶ್ರೀಮಂತರಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಗುರುಬಸಯ್ಯ ಬೃಹನ್ಮಠ, ಮೊಬೈಲ್, ಕಂಪ್ಯೂಟರ್‌ಗಳಂತಹ ಆಧುನಿಕ ತಂತ್ರಜ್ಞಾನಗಳ ಹಾವಳಿಯಿಂದ ಸಂಸ್ಕಾರ ಹಾಗೂ ಸಂಸ್ಕೃತಿ ಮರೆಯಾಗುತ್ತಿದೆ. ಹೀಗಾಗಿ ಇಂದಿನ ಮಕ್ಕಳಿಗೆ ಸಂಸ್ಕಾರದ ಬಗ್ಗೆ ಪಾಠವಾಗಬೇಕಿದೆ. ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಸ್ವಾಮಿ ವಿವೇಕಾನಂದರು ಜಗತ್ತಿನಾದ್ಯಂತ ಎತ್ತಿ ಹಿಡಿದಿದ್ದಾರೆ. ಅದೇ ರೀತಿ ಯವಜನತೆ ಕೂಡ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಇನ್ನಷ್ಟು ಬೆಳೆಸಬೇಕಾದ ಅಗತ್ಯವಿದೆ ಎಂದರು.
ಶಂಕ್ರಪ್ಪ ಬಡಿಗೇರ ಮಾತನಾಡಿ, ಧರ್ಮ ಅಥವಾ ಸಿದ್ಧಾಂತ ಕೆಲವೊಮ್ಮೆ ಬೇರೆ ಬೇರೆ ರೀತಿಗಳಲ್ಲಿ ಜೀವನದ ಮೌಲ್ಯಗಳನ್ನು ವಿವರಿಸಬಹುದು. ಆದರೆ, ಅವೆಲ್ಲ ತಮ್ಮ ಸಮಾಜವು ಉತ್ತಮವಾಗಬೇಕೆಂಬ ಉದ್ದೇಶವನ್ನು ಇಟ್ಟುಕೊಂಡಿರುತ್ತವೆ. ಒಟ್ಟಿನಲ್ಲಿ ಜೀವನ ಮೌಲ್ಯವನ್ನು ಪೂರ್ಣವಾಗಿ ತ್ಯಜಿಸಿದಲ್ಲಿ ಆ ಸಮಾಜವು ಉಳಿಯಲಾರದು ಎಂಬುದು ಸತ್ಯ ಎಂದರು.ಈ ವೇಳೆ ದಾಸೋಹ ಸೇವೆಯನ್ನ ಅನ್ನಪೂರ್ಣಮ್ಮ ಅರಕೇರಿ, ಸಂಗೀತ ಸೇವೆಯನ್ನು ಮುತ್ತಯ್ಯ ಹಿರೇಮಠ, ಪ್ರಭು ಶಿವಶಿಂಪರ ಮಾಡಿದರು. ಶಂಕ್ರರಪ್ಪ ಮತ್ತೂರು, ಬಸವನಗೌಡ ರೆಡ್ಡಿ, ಮುದಿಯಪ್ಪ, ವೀರೇಶ ಎಲ್ , ರಾಜೇಂದ್ರಪ್ಪ ಕಡಹಳ್ಳಿ, ಶಿವಪ್ಪಜ್ಜ ಬಳಿಗೇರಿ, ಶರಣಪ್ಪ ಯಮನೂರಪ್ಪ ಬೈರಾಪೂರ ಮತ್ತು ಇತರರು ಇದ್ದರು.