ಶಿವಪೂಜೆ, ಶಿವಧ್ಯಾನದಿಂದ ಮಾನಸಿಕ ಶಾಂತಿ:

| Published : Apr 17 2025, 12:05 AM IST

ಸಾರಾಂಶ

ಗುತ್ತಲ ಪಟ್ಟಣದ ಶ್ರೀಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರರ ನೂತನ ಶಿಲಾ ಮಠದ ಉದ್ಘಾಟನೆ ಹಾಗೂ ಕಳಸಾರೋಹಣ ಅಂಗವಾಗಿ ಬುಧವಾರ ಇಷ್ಟಲಿಂಗ ಮಹಾಪೂಜಾ ಮತ್ತು ಧರ್ಮ ಸಮಾರಂಭ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ನೇತೃತ್ವದಲ್ಲಿ ನಡೆಯಿತು.

ಗುತ್ತಲ: ಆಧುನಿಕ ಕಾಲದಲ್ಲಿ ಸಿರಿ, ಸಂಪತ್ತು ಪ್ರಗತಿಯನ್ನು ಕಂಡರೂ ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲ. ಶಿವಪೂಜೆ, ಶಿವಧ್ಯಾನದಿಂದ ಮಾನಸಿಕ ಶಾಂತಿ ಪ್ರಾಪ್ತವಾಗುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರರ ನೂತನ ಶಿಲಾ ಮಠದ ಉದ್ಘಾಟನೆ ಹಾಗೂ ಕಳಸಾರೋಹಣ ಅಂಗವಾಗಿ ಬುಧವಾರ ಜರುಗಿದ ಇಷ್ಟಲಿಂಗ ಮಹಾಪೂಜಾ ಮತ್ತು ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಭೌತಿಕವಾಗಿ ಬಹಳಷ್ಟು ಸಂಪತ್ತು, ಸಂಪನ್ಮೂಲ ಸಂಪಾದಿಸಿದರೂ ಇರಬೇಕಾದ ಸಂತೃಪ್ತಿ, ಸಮಾಧಾನ ಇಲ್ಲ. ನಾಗರಿಕತೆಯ ನಾಗಾಲೋಟದಲ್ಲಿ ಮನುಷ್ಯ ಸಿಲುಕಿ ತೊಳಲಾಡುತ್ತಿದ್ದಾನೆ. ಗುರು ಕೊಟ್ಟ ಇಷ್ಟಲಿಂಗ ಪೂಜೆಯಿಂದ ಅನಿಷ್ಟಗಳು ದೂರವಾಗಿ ಇಷ್ಟಾರ್ಥಗಳು ಪ್ರಾಪ್ತವಾಗುತ್ತವೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಶಿವಪೂಜೆಯಿಂದ ಪೂರ್ವಜನ್ಮದ ಕರ್ಮಗಳು ಕೂಡ ನಾಶವಾಗುತ್ತವೆ. ಪ್ರತಿಯೊಬ್ಬರೂ ಶಿವನನ್ನು ಪೂಜಿಸಿ, ತಮ್ಮ ಇಷ್ಟಾರ್ಥ ಪದಗಳನ್ನು ಪಡೆದುಕೊಂಡಿದ್ದಾರೆ. ಬ್ರಹ್ಮ, ವಿಷ್ಣು ಸಕಲ ದೇವಾನುದೇವತೆಗಳು ಸಹ ಶಿವನನ್ನು ಪೂಜಿಸಿ ಸತ್ ಫಲಗಳನ್ನು ಪಡೆದಿದ್ದಾರೆ. ಜಗತ್ತನ್ನು ವ್ಯಾಪಿಸಿರುವ ಭಗವಂತ ವೀರಶೈವರ ಕರದಲ್ಲಿ ಕರದಿಷ್ಟ ಲಿಂಗವಾಗಿ ಪೂಜೆಗೊಳ್ಳುತ್ತಿದ್ದಾನೆ ಎಂದು ಹೇಳಿದರು.

ದೇಹವೇ ದೇವಾಲಯ, ಇಷ್ಟಲಿಂಗವೇ ಆರಾಧ್ಯ ದೈವವೆಂದು ಪೂಜಿಸುವ ಸಮುದಾಯ ಯಾವುದಾದರೂ ಇದ್ದರೆ ಅದು ವೀರಶೈವ ಲಿಂಗಾಯತ. ಅಂಗದ ಮೇಲೆ ಲಿಂಗ ಇದ್ದವರೆಲ್ಲರೂ ವೀರಶೈವ ಲಿಂಗಾಯತರು. ಹೆಸರಿಗೆ ಲಿಂಗಾಯಿತರಾದರೆ ಸಾಲದು, ಆಚರಣೆಯೊಂದಿಗೆ ವೀರಶೈವ ಲಿಂಗಾಯಿತ ಆಗಬೇಕು ಎಂಬುದು ಆಚಾರ್ಯರ ಮತ್ತು ಶರಣರ ಸದಾಶಯ ಆಗಿತ್ತು. ವೀರಶೈವ ತತ್ವ-ಸಿದ್ಧಾಂತಗಳಿಗೆ ತಲೆಬಾಗಿ ಬರುವರೆಲ್ಲರೂ ಇಷ್ಟ ಲಿಂಗವನ್ನು ಪೂಜಿಸಬಹುದು ಎಂದು ನಿರೂಪಿಸಿದ್ದಾರೆ ಎಂದರು.

ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು, ಹಂಪಸಾಗರ ನವಲೆ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಅಂಗೂರ ಹಿರೇಮಠದ ಶಿವಯೋಗೀಶ್ವರ ಶ್ರೀಗಳು, ಗುತ್ತಲ- ಅಗಡಿಯ ಗುರುಸಿದ್ಧ ಶ್ರೀಗಳು, ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಸಿ.ಬಿ. ಕುರವತ್ತಿಗೌಡರ, ರುದ್ರಪ್ಪ ಹಾದಿಮನಿ, ಕೊಟ್ರೇಶಪ್ಪ ಅಂಗಡಿ, ಚನ್ನಪ್ಪ ಕಲಾಲ, ಅಜ್ಜಪ್ಪ ತರ್ಲಿ, ಸಂಗಯ್ಯಸ್ವಾಮಿ ಭೂಸನೂರಮಠ, ಶಂಕ್ರಪ್ಪ ಚಂದಾಪುರ, ಪಿ. ಕುಮಾರ, ನಾಗಯ್ಯ ಹೇಮಗಿರಿಮಠ, ಶೇಖರಯ್ಯ ಹೇಮಗಿರಿಮಠ, ಶಂಭುಲಿಂಗಯ್ಯ ಹೇಮಗಿರಿಮಠ, ಮಾರ್ಕಂಡೇಶ ಕಮ್ಮಾರ, ನಾಗಪ್ಪ ರುದ್ರಾಕ್ಷಿ, ಹೇಮಂತ ಗಡ್ಡಿ, ಶಿವಪ್ಪ ಕಾಗಿನೆಲ್ಲಿ, ಶಿವಪ್ಪ ತರ್ಲಿ, ದೇವಿಂದ್ರಪ್ಪ ಗೊರವರ, ಬಸಪ್ಪ ಇಚ್ಚಂಗಿ ಹಾಗೂ ಹೇಮಗಿರಿಮಠದ ವಂಶಸ್ಥರು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಆನಂತರ ಶ್ರೀಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರರ ನೂತನ ಶಿಲಾಮಠದ ಗೋಪುರಗಳ ಕಳಸಾರೋಹಣ ಅತ್ಯಂತ ವೈಭವದಿಂದ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಅಮೃತಹಸ್ತದಿಂದ ನೆರವೇರಿತು. ಕಳಸಾರೋಹಣ ನೆರವೇರುತ್ತಿದ್ದಂತೆಯೇ ಜೈಘೋಷಗಳು ಮುಗಿಲು ಮುಟ್ಟಿದವು. ಆನಂತರ ಅನ್ನದಾಸೋಹ ಜರುಗಿತು.