ದೇಶದಲ್ಲಿ ಶೇ.೧೦ರಷ್ಟು ಜನ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ : ಹನುಮಂತು

| Published : Oct 13 2024, 01:09 AM IST / Updated: Oct 13 2024, 01:22 PM IST

ದೇಶದಲ್ಲಿ ಶೇ.೧೦ರಷ್ಟು ಜನ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ : ಹನುಮಂತು
Share this Article
  • FB
  • TW
  • Linkdin
  • Email

ಸಾರಾಂಶ

ಶೇ.೧ರಷ್ಟು ಮಂದಿ ತೀವ್ರತರವಾಗಿ ನರಳುತ್ತಿದ್ದಾರೆ, ೧.೫ ಕೋಟಿ ಮಂದಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ೧೦೦ ಮಂದಿ ಮಾನಸಿಕ ರೋಗಿಗಳಲ್ಲಿ ಶೇ.೩೦ರಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, ಶೇ.೭೦ರಷ್ಟು ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ.  

  ಮಂಡ್ಯ : ದೇಶದಲ್ಲಿ ಶೇ.೧೦ರಷ್ಟು ಜನ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಸುಮಾರು ೧೫ ಕೋಟಿಯಷ್ಟು ಜನರು ಮಾನಸಿಕ ಕಾಯಿಲೆಗೆ ಒಳಗಾಗಿದ್ದಾರೆ ಎಂದು ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿರುವ ಸೇವಾ ಕಿರಣ ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಅಲೆಯನ್ಸ್ ಸಂಸ್ಥೆ ಇಂಟರ್ ನ್ಯಾಷನಲ್ ಹಾಗೂ ಪರಿಸರ ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶೇ.೧ರಷ್ಟು ಮಂದಿ ತೀವ್ರತರವಾಗಿ ನರಳುತ್ತಿದ್ದಾರೆ, ೧.೫ ಕೋಟಿ ಮಂದಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ೧೦೦ ಮಂದಿ ಮಾನಸಿಕ ರೋಗಿಗಳಲ್ಲಿ ಶೇ.೩೦ರಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, ಶೇ.೭೦ರಷ್ಟು ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ವೈದ್ಯರ ಮಾರ್ಗದರ್ಶನ, ಸಲಹೆ ಪಡೆಯದೆ ಬಳಲುತ್ತಿದ್ದಾರೆ ಎಂದು ಎಚ್ಚರಿಸಿದರು.

ಮಾನಸಿಕ ಆರೋಗ್ಯ ಹದಗೆಟ್ಟರೆ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಆದಷ್ಟು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.

ಮಿಮ್ಸ್ ಮಾನಸಿಕ ರೋಗಗಳ ವಿಭಾಗದ ವೈದ್ಯೆ ಡಾ.ಜೆ.ಬಿಂದ್ಯಾ, ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಅಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ, ಉತ್ತಮ ಹವ್ಯಾಸ, ಅಭ್ಯಾಸಗಳು ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿ ಇರಿಸುತ್ತವೆ ಎಂದು ತಿಳಿಸಿದರು.

ಅತಿಯಾದ ಬೇಜಾರು, ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸುವುದು, ಅತಿಯಾದ ಕೆಲಸದ ಒತ್ತಡ, ನಿದ್ರಾಹೀನತೆ, ಅನಗತ್ಯ ಚಿಂತೆಗಳು, ವಿಪರೀತ ತಲೆನೋವು ಇಂತಹವು ಮಾನಸಿಕ ಕಾಯಿಲೆಗಳಾಗಿ ತುಂಬಾ ಪರಿಣಾಮ ಬೀರುತ್ತವೆ ಎಂದು ನುಡಿದರು.

ಸಮತೋಲನ ಅಹಾರ, ಸಮತೋಲನ ನಿದ್ರೆ, ಉಲ್ಲಾಸದಿಂದ ಇರುವುದು, ವ್ಯಾಯಾಮ, ಪ್ರಾಣಾಯಾಮ, ಧ್ಯಾನ, ಓದುವುದು ಇಂತಹ ಅಭ್ಯಾಸಗಳು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತವೆ. ಇವುಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಗಾಯಕರಿಂದ ವಿವಿಧ ಗಾಯನ ಕಾರ್ಯಕ್ರಮ ನಡೆಯಿತು. ಸೇವಾಕಿರಣ ಚಾರಿಟೇಬಲ್ ಟಸ್ಟ್ ಕಾರ್ಯದರ್ಶಿ ಜಿ.ವಿ. ನಾಗರಾಜ್, ಹಿರಿಯ ಪತ್ರಕರ್ತ ದೇವರಾಜ್ ಕೊಪ್ಪ, ಅಲಯನ್ಸ್ ಸಂಸ್ಥೆ ಜಿಲ್ಲಾ ಉಪ ರಾಜ್ಯಪಾಲ ಶಶಿಧರ ಈಚಗೆರೆ, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಮಂಜುನಾಥ, ಜಿಲ್ಲಾ ಸಚಿವ ಸಂಪುಟದ ಕಾರ್ಯದರ್ಶಿ ಚಂದ್ರಶೇಖರ್, ಡಾ. ಶಿವಕುಮಾರ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ. ಡೇವಿಡ್ ಇತರರಿದ್ದರು.