ಮಾದಕ ಪದಾರ್ಥಗಳಿಂದ ಮಾನಸಿಕ ಸಮಸ್ಯೆ ಉದ್ಭವ

| Published : Jun 30 2025, 12:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಸಾಮಾನ್ಯವಾಗಿ ಮಾದಕ ಪದಾರ್ಥಗಳ ಸೇವನೆಯು ಹತ್ತಿರದ ಸ್ನೇಹಿತರ ಒತ್ತಾಯಕ್ಕೋ ಅಥವಾ ಆಮೀಷಕ್ಕೋ ಒಳಗಾಗಿ ಆರಂಭವಾಗಿ ನಂತರ ಚಟವಾಗಿ ಪರಿಣಮಿಸುತ್ತದೆ. ಮುಂದೆ ಮಾದಕ ಪದಾರ್ಥಗಳ ಸೇವನೆಯಿಂದ ಅಲ್ಪಾವಧಿ ಮತ್ತು ದೀರ್ಘಾವಧಿ ಗಂಭೀರ ತೀವ್ರತರವಾದ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ ಎಂದು ತಹಸೀಲ್ದಾರ್‌ ಬಲರಾಮ ಕಟ್ಟಿಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸಾಮಾನ್ಯವಾಗಿ ಮಾದಕ ಪದಾರ್ಥಗಳ ಸೇವನೆಯು ಹತ್ತಿರದ ಸ್ನೇಹಿತರ ಒತ್ತಾಯಕ್ಕೋ ಅಥವಾ ಆಮೀಷಕ್ಕೋ ಒಳಗಾಗಿ ಆರಂಭವಾಗಿ ನಂತರ ಚಟವಾಗಿ ಪರಿಣಮಿಸುತ್ತದೆ. ಮುಂದೆ ಮಾದಕ ಪದಾರ್ಥಗಳ ಸೇವನೆಯಿಂದ ಅಲ್ಪಾವಧಿ ಮತ್ತು ದೀರ್ಘಾವಧಿ ಗಂಭೀರ ತೀವ್ರತರವಾದ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ ಎಂದು ತಹಸೀಲ್ದಾರ್‌ ಬಲರಾಮ ಕಟ್ಟಿಮನಿ ಹೇಳಿದರು.

ತಾಲೂಕಾಡಳಿತ ಹಾಗೂ ಪೊಲೀಸ್‌ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯ, ವಸ್ತುಗಳ ಕುರಿತು ತಹಸೀಲ್ದಾರ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾದಕ ವ್ಯಸನಗಳಿಂದ ಜೀವನ ಪರ್ಯಂತ ಒಂದಿಲ್ಲೊಂದು ರೀತಿಯಲ್ಲಿ ಕೆಟ್ಟವನಾಗಿ ಮನುಷ್ಯ ಗುಣಕ್ಕೆ ಮಾರಕನಾಗಿ ಬದುಕಬೇಕಾದ ಸ್ಥಿತಿ ಎದುರಾಗುತ್ತದೆ. ಮಾದಕ ಸೇವನೆ ಜೀವನಕ್ಕೆ ಮಾರಕವಾಗಲಿದೆ. ಇಂದಿನ ಯುವಕರು ಮಾದಕ ವಸ್ತುಗಳ ಸೇವೆನೆಯಿಂದಾಗಿ ಯುವಕರು ದುಶ್ಚಟಗಳ ದಾಸರಾಗಿ ಜೀವನದ ಜೊತೆಗೆ ತಮ್ಮ ವಯಕ್ತಿಕ ಬದುಕನ್ನೇ ಹಾಳುಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ನಿಟ್ಟಿನಲ್ಲಿ ಯುವಕರು ಜಾಗೃತರಾಗಬೇಕು. ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎಂಬುದದನ್ನು ಅರ್ಥೈಸಿಕೊಳ್ಳಬೇಕು. ಪ್ರತಿಯೊಬ್ಬರು ಮೊದಲು ತಮ್ಮ ಜೀವನವನ್ನು ಆಯ್ದುಕೊಳ್ಳಿ, ಮಾದಕ ಪದಾರ್ಥಗಳನ್ನು ಅಲ್ಲ ಎಂಬುದನ್ನು ಅರಿಯಬೇಕು. ದೇಶದ ಜವಾಬ್ದಾರಿಯುತ ಪ್ರಜೆಗಳಾದ ನಾವುಗಳು ಮಾದಕ ದ್ರವ್ಯ, ವಸ್ತುಗಳ ದುಷ್ಪರಿಣಾಮದ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಎಲ್ಲರೂ ಸಹಕರಿಸುವುದರ ಜತೆಗೆ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

ವೃತ್ತ ನಿರೀಕ್ಷಕ ಮೊಹಮ್ಮದ ಫಸಿಯುದ್ದೀನ್‌ ಮಾತನಾಡಿ, ಮಾದಕ ಪದಾರ್ಥಗಳ ಸೇವನೆಯು ವ್ಯಕ್ತಿಯ ಜೀವನಕ್ಕೆ ಮಾರಕವಾಗಿದೆ. ಕೊಟ್ಪಾ ಕಾಯ್ದೆಯನ್ವಯ ಶೈಕ್ಷಣಿಕ ಸಂಸ್ಥೆಗಳ 100 ವ್ಯಾಸದೊಳಗಿನ ಪ್ರದೇಶದಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನವನ್ನು ಮಾರಾಟ ಮಾಡುವಂತಿಲ್ಲ. ಈ ಕಾಯ್ದೆಗಳ ಮುಖ್ಯ ಉದ್ದೇಶ ಮಕ್ಕಳು ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬಳಸುವುದನ್ನು ನಿಷೇಧಿಸುವಂತೆ ಮಾಡುವುದಾಗಿದೆ. ಈಗಾಗಲೇ ಕಾನೂನು ಬಾಹಿರ ಮಾರಾಟ ಮಾಡುವ ಬಂಧನ ಪ್ರಕರಣ ದಾಖಲಿಸಲಾಗುವುದು. ಈ ಬಗ್ಗೆ ಹೆಚ್ಚು ಯುವಕ-ಯುವತಿಯರು ಜಾಗೃತರಾಗಬೇಕು ಎಂದರು.ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕಂದಾಯ ನಿರೀಕ್ಷಕ ಡಿ.ಎಸ್.ತಳವಾರ, ಶಿಕ್ಷಕ ಟಿ.ಡಿ.ಲಮಾಣಿ, ಬಿಆರ್‌ಸಿ ಗುಂಡು ಲಮಾಣಿ ಸೇರಿದಂತೆ ಪೊಲೀಸ್‌ ಸಿಬ್ಬಂದಿ ವರ್ಗ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.