ಸಾರಾಂಶ
ಗೋಕರ್ಣ:
ಇಲ್ಲಿನ ತಾರಮಕ್ಕಿಯ ಕೇತಕಿ ವಿನಾಯಕ ಗೆಳೆಯರ ಬಳಗದ ಆಶ್ರಯದಲ್ಲಿ ಜಿಲ್ಲಾಮಟ್ಟದ ಹಾಲಕ್ಕಿ ಒಕ್ಕಲಿಗ ಸಮಾಜದ ಎರಡು ದಿನದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಹಾಲಕ್ಕಿ ಒಕ್ಕಲಿಗ ಸಂಘದ ಹೊನ್ನಾವರ-ಕುಮಟಾ ತಾಲೂಕಾಧ್ಯಕ್ಷ ಗೋವಿಂದ ಗೌಡ, ದೈಹಿಕ, ಮಾನಸಿಕ ದೃಢತೆಗೆ ಕ್ರೀಡೆ ಪೂರಕ ಎಂದರು.ಅಂಕಣ ಉದ್ಘಾಟಿಸಿದ ಪುಣ್ಯಾಶ್ರಮದ ವೇ. ರಾಜಗೋಪಾಲ ಗುರೂಜಿ, ಪರಂಪರಾಗತವಾಗಿ ತನ್ನದೇ ವಿಶಿಷ್ಟ ಜಾನಪದೀಯ ಆಚರಣೆ ಮೂಲಕ ಎಲ್ಲರನ್ನು ಗಮನ ಸೆಳೆಯುತ್ತಿರುವ ಹಾಲಕ್ಕಿ ಸಮಾಜದ ಅಭಿವೃದ್ಧಿಗೆ ಸರ್ಕಾರ ಹಾಲಕ್ಕಿ ಸಮಾಜ ಅಭಿವೃದ್ಧಿ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದ ಅವರು, ಸಮಾಜದ ನೆರವಿಗೆ ಸದಾ ಸಹಾಯ, ಸಹಕಾರವಿದೆ ಎಂದು ತಿಳಿಸಿದರು. ಇಲ್ಲಿ ವಿವಿಧ ಕ್ರೀಡಾಕೂಟಗಳು ನಡೆಯುತ್ತಿದ್ದರು, ಒಂದೇ ಒಂದು ಸುಸಜ್ಜಿತ ಕ್ರೀಡಾಂಗಣವಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಸರ್ಕಾರ ಲಕ್ಷವಹಿಸಿ ಕ್ರೀಡಾಂಗಣ ನಿರ್ಮಿಸಿಕೊಡಬೇಕು. ಈ ಕುರಿತು ಎಲ್ಲರು ಒಂದಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಜನ್ನು, ಅನೇಕ ಸಾಮಾಜಿಕ ಕಾರ್ಯದಲ್ಲಿ ಕೈಜೋಡಿಸುತ್ತಿರುವ ಬಡ ಹಾಲಕ್ಕಿ ಒಕ್ಕಲಿಗರಿಗೆ ಪ್ರವಾಸೋದ್ಯಮ ಬಂದ ನಂತರ ತುಸು ಆರ್ಥಿಕವಾಗಿ ಸದೃಢವಾಗಲು ಪೂರಕವಾಗಿತ್ತು. ಆದರೆ ಹೊರಗಿನಿಂದ ಬಂದ ಉದ್ಯಮಿಗಳು ಕಡಲತೀರದಲ್ಲಿರುವ ಹಾಲಕ್ಕಿ ಸಮಾಜದವರ ಜಾಗವನ್ನೆ ಕೊಂಡುಕೊಳ್ಳುತ್ತಿರುವುದು ಆತಂಕ ತಂದಿದೆ. ಪರಭಾರೆ ಮಾಡದೆ ಸ್ವಂತವಾಗಿ ನೀವೇ ಉದ್ಯಮ ನಡೆಸಿ ಎಂದು ಕರೆ ನೀಡಿದರು. ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ ಪಂದ್ಯಾವಳಿಗೆ ಶುಭಕೋರಿದರು.ಜಿಲ್ಲಾ ಹಾಲಕ್ಕಿ ಒಕ್ಕಿಲಗ ಸಮಾಜದ ಅಧ್ಯಕ್ಷ ಹನುಂತ ಗೌಡ, ಕಾರ್ಯದರ್ಶಿ ಶ್ರೀಧರ ಗೌಡ, ಪತ್ರಕರ್ತ ಗಜಾನನ ನಾಯಕ, ನ್ಯಾಯವಾದಿ ಮಂಗಲಮೂರ್ತಿ ಸಭಾಹಿತ, ಗ್ರಾಪಂ ಸದಸ್ಯ ಸತೀಶ ದೇಶಭಂಡಾರಿ ಮಾತನಾಡಿದರು. ವೇದಿಕೆಯಲ್ಲಿ ಆನಂದ ಗೌಡ, ಗಣಪತಿ ಗೌಡ, ಎಎಸ್‌ಐ ಈರಣ್ಣ ಗೌಡ, ನಾಗೇಶ ಗೌಡ ಉಪಸ್ಥಿತರಿದ್ದರು. ಹುಲಿಯಾ ಗೌಡ ಸ್ವಾಗತಿಸಿದರು. ಮಂಜುನಾಥ ಗೌಡ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಊರಿನವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.