ಲಂಬಾಣಿ ಯುವತಿಯರಿಂದ ಮೇರಾ ಆಚರಣೆ

| Published : Nov 04 2024, 12:22 AM IST

ಸಾರಾಂಶ

ಹಳೆಯ ಸಂಸ್ಕೃತಿ ಮರೆಯುತ್ತಿರುವ ಈಗಿನ ಕಾಲದಲ್ಲಿ ಲಂಬಾಣಿ ಜನಾಂಗದವರು ತಮ್ಮ ಹಳೆಯ ಸಂಪ್ರದಾಯ ಮತ್ತು ನಂಬಿಕೆ ಮುಂದುವರಿಸಿಕೊಂಡು ದೀಪಾವಳಿ ಅಂಗವಾಗಿ ಮೇರಾ ಆಚರಿಸಿದರು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಹಳೆಯ ಸಂಸ್ಕೃತಿ ಮರೆಯುತ್ತಿರುವ ಈಗಿನ ಕಾಲದಲ್ಲಿ ಲಂಬಾಣಿ ಜನಾಂಗದವರು ತಮ್ಮ ಹಳೆಯ ಸಂಪ್ರದಾಯ ಮತ್ತು ನಂಬಿಕೆ ಮುಂದುವರಿಸಿಕೊಂಡು ದೀಪಾವಳಿ ಅಂಗವಾಗಿ ಮೇರಾ ಆಚರಿಸಿದರು. ತಾಲೂಕಿನ ತೊನಸಿಹಾಳ ತಾಂಡಾ, ಬೋದೂರು ತಾಂಡಾ, ಮೆಣಸಗೇರಿ, ನಡುವಲಕೊಪ್ಪ ಸೇರಿದಂತೆ ತಾಲೂಕಿನ ವಿವಿಧ ತಾಂಡಾಗಳಲ್ಲಿ ಲಂಬಾಣಿ ಸಮುದಾಯದ ಉಡುಗೆಗಳನ್ನು ಧರಿಸಿ ಹೆಜ್ಜೆ ಹಾಕುವ ಬಾಲೆಯರು, ಸಾಂಪ್ರದಾಯಿಕವಾಗಿ ಬಂಜಾರ ಸಮುದಾಯದ ದೇವರಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.ಹಳೆಯ ಪದ್ಧತಿ, ಸಂಸ್ಕೃತಿ ಹೊಂದಿರುವ ವೇಷಭೂಷಣ ತೊಟ್ಟು ಲಂಬಾಣಿ ಭಾಷೆ ಹಾಡಿನೊಂದಿಗೆ ನೃತ್ಯ ಮಾಡುತ್ತಾ ತಾಂಡಾದಲ್ಲಿನ ಗಣ್ಯ ವ್ಯಕ್ತಿಗಳು ಹಾಗೂ ಹಿರಿಯರ ಮನೆಗೆ ಭೇಟಿ ನೀಡಿ ಆರತಿ ಬೆಳಗುವ ಮೂಲಕ ಮನೆ ಮಂದಿಗೆಲ್ಲರಿಗೂ ಸುಖ, ಶಾಂತಿ, ಸಂತೋಷ ತರಲಿ, ನೆಮ್ಮದಿ ಸಿಗಲಿ ಎಂದು ಶುಭ ಹಾರೈಸಿದರು.

ಈ ಲಂಬಾಣಿಯ ಸಮುದಾಯಕ್ಕೆ ದೀಪಾವಳಿ ಹಬ್ಬವೂ ವಿಶಿಷ್ಟ ಹಬ್ಬವಾಗಿದ್ದು, ಎಲ್ಲ ಲಂಬಾಣಿ ಜನಾಂಗದ ತಾಂಡಾಗಳಲ್ಲಿ ಮೇರಾ ಆಚರಣೆ ಸಂಪ್ರದಾಯ ಇನ್ನೂ ಜೀವಂತವಾಗಿದೆ. ಮೇರಾ ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಬರುವ ಪ್ರಕ್ರಿಯೆ ಎಂದು ಬಂಜಾರ ಸಮುದಾಯದ ಹಿರಿಯರು ಹೇಳುತ್ತಾರೆ. ವಿಶೇಷವೆಂದರೆ ಈ ಸಂಪ್ರದಾಯ ಕೇವಲ ಬಂಜಾರ ಸಮುದಾಯದಲ್ಲಿದೆ.

ಇಂದಿನ ದಿನಮಾನಗಳಲ್ಲಿ ಆಧುನಿಕತೆಗೆ ಮಾರುರೆ ಹೋಗಿ ಸಂಸ್ಕೃತಿ ಮರೆಯುವಂತಹ ದಿನಮಾನಗಳಲ್ಲಿ ಈ ಸಮುದಾಯದವರು ಪುರಾತನ ಕಾಲದಿಂದಲೂ ಇರುವ ಸಂಪ್ರದಾಯ ಉಳಿಸಿಕೊಂಡು, ಬೆಳೆಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ.

ಕೋಟ್

ನಮ್ಮ ತಾಂಡಾದ ಯುವತಿಯರು ಮೇರಾ ಸಂಪ್ರದಾಯವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ರಾತ್ರಿಯ ಸಮಯದಲ್ಲಿ ಯುವತಿಯರು ತಾಂಡಾದ ಎಲ್ಲ ಮನೆಗಳಿಗೆ ಹೋಗಿ ದೀಪ ಬೆಳಗುತ್ತಾರೆ. ಉಡುಗೆ ತೋಡುಗೆಗಳೋಂದಿಗೆ ಪದ ಹಾಡುವ ಮೂಲಕ ಆಚರಣೆ ಮಾಡುತ್ತಾರೆ.

ಮಹಾಂತೇಶ ನಾಯಕ ವಕೀಲ ತೊನಸಿಹಾಳ ತಾಂಡಾ

3ಕೆಎಸಟಿ4: ಕುಷ್ಟಗಿ ತಾಲೂಕಿನ ತೊನಸಿಹಾಳ ತಾಂಡಾದಲ್ಲಿ ಯುವತಿಯರು ಮೇರಾ ಆಚರಣೆ ಮಾಡಿದರು.