ತಂದೆ-ತಾಯಿಗಳ ಸೇವೆಯಿಂದ ಪುಣ್ಯ ಪ್ರಾಪ್ತಿ

| Published : Mar 20 2024, 01:20 AM IST

ಸಾರಾಂಶ

ಅಥಣಿ: ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಲು ತಂದೆ-ತಾಯಿಗಳ ಪಾತ್ರ ತುಂಬಾ ಮುಖ್ಯವಾಗಿರುತ್ತದೆ. ಯಾರು ತಂದೆ-ತಾಯಿಗಳ ಸೇವೆಯನ್ನು ಭಕ್ತಿ ಭಾವದಿಂದ ಮಾಡುತ್ತಾರೋ ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂದಗಾವ ಭೂಕೈಲಾಸ ಮಂದಿರದ ಮಹಾದೇವ ಮಹಾರಾಜರು ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿಮಕ್ಕಳು ಸಂಸ್ಕಾರವಂತರಾಗಿ ಬೆಳೆಯಲು ತಂದೆ-ತಾಯಿಗಳ ಪಾತ್ರ ತುಂಬಾ ಮುಖ್ಯವಾಗಿರುತ್ತದೆ. ಯಾರು ತಂದೆ-ತಾಯಿಗಳ ಸೇವೆಯನ್ನು ಭಕ್ತಿ ಭಾವದಿಂದ ಮಾಡುತ್ತಾರೋ ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂದಗಾವ ಭೂಕೈಲಾಸ ಮಂದಿರದ ಮಹಾದೇವ ಮಹಾರಾಜರು ಹೇಳಿದರು.

ತಾಲೂಕಿನ ಸಂಕೋನಟ್ಟಿ ಗ್ರಾಮದ ನಂದೀಶ ವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಾನುಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳು ಆದರ್ಶಮಯವಾಗಿ ಬೆಳೆಯಬೇಕಾದರೇ ತಂದೆ-ತಾಯಿ ಕೂಡ ಆದರ್ಶವಂತರಾಗಿ ಅವರಿಗೆ ಮಾರ್ಗದರ್ಶನ ಮಾಡಬೇಕು. ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗುವ ನಿಟ್ಟಿನಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಸಂಸ್ಕೃತಿ ಕಲಿಸಬೇಕು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದ ಮಕ್ಕಳು ತಂದೆ-ತಾಯಿಗಳ ಬಗ್ಗೆ ವಿಶೇಷ ಗೌರವ ಹೊಂದಿರುತ್ತಾರೆ. ತಂದೆ, ತಾಯಿಗಳ ಕಷ್ಟ ಮಕ್ಕಳಿಗೆ ಅರ್ಥವಾಗಬೇಕು. ತಾವು ಉಪವಾಸವಿದ್ದು ಮಕ್ಕಳ ಉದರ ತುಂಬಿಸುವ ತಂದೆ ತಾಯಿ ಮಕ್ಕಳಿಗೆ ನಿಜವಾದ ದೇವರಾಗಿದ್ದಾರೆ ಎಂದು ವಿವರಿಸಿದರು.ಸಾಹಿತಿ ಡಾ.ವಿ.ಎಸ್.ಮಾಳಿ ಮಾತನಾಡಿ, ತಂದೆ-ತಾಯಿಗಳಲ್ಲಿ ಗುರು ಹಿರಿಯರಲ್ಲಿ ದೇವರನ್ನು ಕಾಣಬೇಕು. ಒಬ್ಬ ವ್ಯಕ್ತಿ ಎಷ್ಟು ದಿನ ಬದುಕಿದ್ದ ಎಂಬುವುದಕ್ಕಿಂತ ಹೇಗೆ ಬದುಕಿದ್ದ ಎಂಬುವುದು ಮುಖ್ಯವಾಗುತ್ತದೆ. ಪ್ರತಿಯೊಬ್ಬರ ಬದುಕು ಮುಂದಿನ ಪೀಳಿಗೆಗೆ ಆದರ್ಶವಾಗಿರುವಂತೆ ಬದುಕಬೇಕು. ಸಂಸ್ಕಾರ, ಸಂಸ್ಕೃತಿ ಇರದೇ ಇದ್ದರೇ ಎಷ್ಟೇ ಉನ್ನತ ಅಧ್ಯಯನ ಮಾಡಿದರೂ ಅದು ವ್ಯರ್ಥವಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅಥಣಿ ಶೆಟ್ಟರ ಮಠದ ಮರಳುಸಿದ್ದ ಸ್ವಾಮೀಜಿ, ಶೇಗುಣಿಸಿಯ ಹನುಮಂತ ಮಹಾರಾಜರು, ಹೊನವಾಡದ ಬಾಬುರಾವ ಮಹಾರಾಜರು, ಸಿ.ಬಿ.ಪಡನಾಡ ಮಾತನಾಡಿದರು. ದಾಸಬೋಧನೆ ಹಾಗೂ ಪುಷ್ಪವೃಷ್ಟಿ ಕಾರ್ಯಕ್ರಮ ಜರುಗಿತು. ಅಭಿಯಂತ ರಾಜಶೇಖರ ಟೋಪಗಿ, ನಾಗಪ್ಪ ಬಿಸ್ವಾಗರ, ನಿಂಗನಗೌಡ ಪಾಟೀಲ, ಸಂಜೀವ ಬಡಿಗೇರ, ಪ್ರಕಾಶ ಮಹಾರಾಜರು, ದಿಗ್ವಿಜಯ ಪವಾರದೇಸಾಯಿ, ಸಂಗಮೇಶ ಧರಿಗೌಡ, ಶ್ರೀಶೈಲ ನಾರಗೊಂಡ, ಮುರುಗೇಶ ಕುಮಠಳ್ಳಿ, ರಮೇಶಗೌಡ ಪಾಟೀಲ, ಸುಭಾಷ ನಾಯಕ, ಡಿ.ಸಿ. ನಾಯಕ, ಅಶೋಕ ಕೌಜಲಗಿ, ಕೆ.ಎಸ್.ಹಾಲಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಂಕೋನಟ್ಟಿಯ ಮಾಧವಾನಂದ ಭಜನಾ ಮಂಡಳಿ ಸಂಗೀತ ಸೇವೆ ಸಲ್ಲಿಸಿದರು. ರಾಜಶೇಖರ ಟೋಪಗಿ ಸ್ವಾಗತಿಸಿದರು. ಕೆ.ಎಸ್.ಹಾಲಳ್ಳಿ ನಿರೂಪಿಸಿದರು. ನಮೃತಾ ಟೋಪಗಿ ವಂದಿಸಿದರು.