ಎಂಇಎಸ್‌ನವರಿಗೆ ಹೋರಾಡುವ ಹಕ್ಕಿದೆ: ಡಾ. ಅಂಜಲಿ

| Published : Apr 17 2024, 01:16 AM IST

ಸಾರಾಂಶ

ಎಂಇಎಸ್ ನವರು ಬೆಂಬಲ ಕೊಡಬೇಕೆಂದು ನಮ್ಮನ್ನು ಕೇಳಿಲ್ಲ. ಯಾವಾಗ ಕೇಳುತ್ತಾರೆ, ಆವಾಗ ನೋಡೋಣ ಎಂದು ಡಾ. ಅಂಜಲಿ ನಿಂಬಾಳ್ಕರ್ ಉತ್ತರಿಸಿದರು.

ಕಾರವಾರ: ಮಹಾರಾಷ್ಟ್ರ ಏಕೀಕರಣ ಸಮಿತಿ 60 ವರ್ಷದಿಂದ ಕಾರವಾರ, ಬೆಳಗಾವಿ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೋರಾಟ ನಡೆಸುತ್ತಿದೆ. ಬರೀ ಖಾನಾಪುರ ಅಲ್ಲ. ಇಡಿ ಬೆಳಗಾವಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಅನ್ಯಾಯ ಆಗಿದೆ ಎಂದು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಹೋರಾಡುವ ಹಕ್ಕು ಇದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರವಾರ, ಬೆಳಗಾವಿ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಆ ಹೋರಾಟ ಅವರ ಹೋರಾಟ. ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಕಾರ ಎಲ್ಲರಿಗೂ ಹೋರಾಟ ಮಾಡುವ ಹಕ್ಕು ಇದೆ. ಅಧಿಕಾರ ಇದೆ. ನ್ಯಾಯಕ್ಕಾಗಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕು ಇದೆ. ಅದರ ಬಗ್ಗೆ ಯಾರಿಗೆ ತೊಂದರೆ ಇಲ್ಲ. ಯಾರ ಪರ ಎನ್ನುವ ಪ್ರಶ್ನೆ ಇಲ್ಲ. ಅವರು ನ್ಯಾಯ ಕೇಳುತ್ತಿದ್ದಾರೆ.

ಎಂಇಎಸ್ ನವರು ಬೆಂಬಲ ಕೊಡಬೇಕೆಂದು ನಮ್ಮನ್ನು ಕೇಳಿಲ್ಲ. ಯಾವಾಗ ಕೇಳುತ್ತಾರೆ, ಆವಾಗ ನೋಡೋಣ ಎಂದು ಉತ್ತರಿಸಿದರು.ಎಂಇಎಸ್ ಸಂಘಟನೆ ನಿಷೇಧಿಸಲು ಕರವೇ ಆಗ್ರಹ

ಹಳಿಯಾಳ: ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಂಇಎಸ್ ಅಭ್ಯರ್ಥಿ ನಿರಂಜನ್ ದೇಸಾಯಿ ಅವರು ನಾಡಿನ ಭಾಷೆ, ಗಡಿ, ನೆಲ ಮತ್ತು ಜಲ ವಿರುದ್ಧವಾಗಿ ಆಡಿರುವ ನಾಡದ್ರೋಹಿ ಹೇಳಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯು ಖಂಡಿಸಿದ್ದು, ಅಲ್ಲದೇ ರಾಜ್ಯದಲ್ಲಿ ಎಂಇಎಸ್‌ ಸಂಘಟನೆಯನ್ನು ನಿಷೇಧಿಸಬೇಕೆಂದು ತಾಲೂಕು ಕರವೇ ಘಟಕದ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ಆಗ್ರಹಿಸಿದ್ದಾರೆ.ಮಂಗಳವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ನಿರಂಜನ್ ದೇಸಾಯಿ ಅವರು ಹೇಳಿದಂತೆ ಕಾರವಾರ, ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ಹಾಗೂ ಬೆಳಗಾವಿ ಭಾಗದ ಯಾವ ಜನರು ಕೂಡ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹೇಳುತ್ತಿಲ್ಲ. ಈ ಭಾಗದ ಜನರು ಕೂಡ ಕನ್ನಡದ ನೆಲದಲ್ಲಿ ನಿಷ್ಠೆಯಿಂದ ಅತ್ಯಂತ ಅಭಿಮಾನದಿಂದ ಬಾಳುತ್ತಿದ್ದಾರೆ.

ಹೀಗಿರುವಾಗ ಚುನಾವಣೆಯ ಸಮಯದಲ್ಲಿ ನಾಮಪತ್ರ ಸಲ್ಲಿಸುವಾಗ ಭಾವನಾತ್ಮಕ ಸಂಗತಿಯನ್ನು ತಂದು ಜನರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ ಎಂದಿದ್ದಾರೆ.ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಭಾಷೆ, ಗಡಿ, ನೆಲ, ಜಲದ ಬಗ್ಗೆ ಹಾಗೂ ನಾಡಿನ ವಿರುದ್ಧವಾಗಿ ಭಾವನಾತ್ಮಕವಾಗಿ ವಿಚಾರಗಳನ್ನು ಉಲ್ಲೇಖಿಸಬಾರದು ಹಾಗೂ ಬಹಿರಂಗವಾಗಿ ಹೇಳಬಾರದೆಂದು ಚುನಾವಣೆ ನೀತಿ ಇದೆ. ಹಾಗಿದ್ದರೂ ಅಭ್ಯರ್ಥಿಯಾಗಿ ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದಿದ್ದಾರೆ.