ಮನೆ ಮನೆಗೆ ತೆರಳಿ ಮೀಟರ್ ರೀಡರ್‌ಗಳಿಂದ ಸ್ಟಿಕ್ಕರ್‌ ಅಳವಡಿಕೆ

| Published : Sep 06 2025, 01:01 AM IST

ಮನೆ ಮನೆಗೆ ತೆರಳಿ ಮೀಟರ್ ರೀಡರ್‌ಗಳಿಂದ ಸ್ಟಿಕ್ಕರ್‌ ಅಳವಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮೀಟರ್ ಸ್ಕ್ಯಾನ್‌ ಮಾಡಿ ಸ್ಟಿಕ್ಕರ್ ಮೇಲೆ ಯುಎಚ್‌ಐಡಿ ಸಂಖ್ಯೆ ಬರೆದು ಮನೆಗಳಿಗೆ ಅಂಟಿಸುತ್ತಿದ್ದಾರೆ.

ರಾಘು ಕಾಕರಮಠ

ಅಂಕೋಲಾ: ಯಾವೊಂದು ಕುಟುಂಬವೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಹೊರಗೆ ಉಳಿಯಬಾರದು ಎನ್ನುವ ಉದ್ದೇಶದಿಂದ ಹಿಂದುಳಿದ ವರ್ಗಗಳ ಆಯೋಗ ಇ-ಆಡಳಿತ ಮತ್ತು ಇಂಧನ ಇಲಾಖೆಗಳ ಸಹಯೋಗದೊಂದಿಗೆ ಮೀಟರ್ ರೀಡರ್‌ಗಳಿಂದ ಸಮೀಕ್ಷೆ ನಡೆಸುತ್ತಿದೆ.

ಅಂಕೋಲಾ ತಾಲೂಕಿನಲ್ಲಿ ೩೨ ಸಾವಿರ ಮನೆಗಳಿದ್ದು ವಿದ್ಯುತ್ ಮೀಟರ್ ರೀಡರ್‌ಗಳು ಮೀಟರ್ ಸ್ಕ್ಯಾನ್‌ ಮಾಡಿ ಸ್ಟಿಕ್ಕರ್ ಮೇಲೆ ಯುಎಚ್‌ಐಡಿ ಸಂಖ್ಯೆ ಬರೆದು ಮನೆಗಳಿಗೆ ಅಂಟಿಸುತ್ತಿದ್ದಾರೆ. ಆ.೨೬ರಿಂದ ಮೀಟರ್ ರೀಡರ್‌ಗಳು ಸಮೀಕ್ಷೆ ಕೈಗೊಂಡಿದ್ದಾರೆ. ಅಂಕೊಲಾದಲ್ಲಿ ೨೩ ಮೀಟರ್ ರೀಡರ್‌ಗಳಿದ್ದು, ಈಗಾಗಲೇ ೬೫೦೦ ಮನೆಗಳ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ.

ವೈಜ್ಞಾನಿಕವಾಗಿ ಸಮೀಕ್ಷೆಗೆ ಕ್ರಮ:

೧೦ ವರ್ಷಗಳ ಹಿಂದೆ ಆಯೋಗ ನಡೆಸಿದ್ದ ಸಮೀಕ್ಷಾ ವರದಿ ನಾನಾ ಟೀಕೆಗಳಿಗೆ ಗುರಿಯಾಗಿತ್ತು. ವೈಜ್ಞಾನಿಕವಾಗಿ ಪರಿಪೂರ್ಣವಾಗಿ ನಡೆದಿಲ್ಲ. ನಮ್ಮ ಮನೆಗೆ ಸಮೀಕ್ಷೆಗೆ ಯಾರೂ ಬಂದಿಲ್ಲ ಎಂಬ ಅಪವಾದಗಳನ್ನು ಎದುರಿಸಿತ್ತು. ಇದೀಗ ಹಿಂದುಳಿದ ವರ್ಗಗಳ ಆಯೋಗ ಮತ್ತೊಮ್ಮೆ ಸಮೀಕ್ಷೆ ನಡೆಸುತ್ತಿದ್ದು, ಎಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಳ್ಳುತ್ತಿದೆ. ಯಾವುದೇ ಮನೆ ಕುಟುಂಬ ಹಾಗೂ ವ್ಯಕ್ತಿ ಸಮೀಕ್ಷೆಯಿಂದ ಹೊರಗೆ ಉಳಿಯದಂತೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲು ಮನೆಗಳಿಗೆ ಪಡೆದ ವಿದ್ಯುತ್ ಮೀಟರ್ ಆಧಾರದ ಮೇಲೆ ಸಮಿಕ್ಷೆ ನಡೆಸಲು ಮುಂದಾಗಿದೆ.

ಮೊದಲ ಹಂತದಲ್ಲಿ ಎಲ್ಲ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕವಿರುವುದರಿಂದ ವಾಸದ ಮನೆಗಳ ಆರ್.ಆರ್. ಸಂಖ್ಯೆ ಆಧಾರದ ಮೇಲೆ ಮನೆಗಳನ್ನು ಗುರುತಿಸಿ ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗುವುದಿಲ್ಲ ಎಂಬುಂದು ಆಯೋಗದ ನಿಲುವಾಗಿದೆ.

ಆ್ಯಪ್‌ ಮೂಲಕ ಜಿಯೋ ಟ್ಯಾಗಿಂಗ್:

ಇ-ಆಡಳಿತ ಮತ್ತು ಇಂಧನ ಇಲಾಖೆಗಳು ವಿದ್ಯುಚ್ಛಕ್ತಿ ಮೀಟರ್ ಸಂಪರ್ಕದ ಆಧಾರದ ಮೇಲೆ ವಿನ್ಯಾಸಗೊಳಿಸಿದ ನೂತನ ಆ್ಯಪ್‌ನ್ನು ಸಿದ್ಧಪಡಿಸಲಾಗಿದೆ.

ಮನೆ ಬಳಿ ಬರುವ ಬರುವ ವಿದ್ಯುತ್ ಮೀಟರ್ ರೀಡರ್‌ಗಳು ಮನೆಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸುತ್ತಿದ್ದಾರೆ. ಅವುಗಳನ್ನು ಯಾರೂ ಕೀಳಬಾರದು. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು. ನಮ್ಮ ಸಿಬ್ಬಂದಿ ತ್ವರಿತ ಗತಿಯಲ್ಲಿ ಮೀಟರ್ ರೀಡಿಂಗ್ ಜೊತೆಗೆ, ಸಮೀಕ್ಷಾ ಕಾರ್ಯ ಕೈಗೊಂಡಿದ್ದಾರೆ ಎನ್ನುತ್ತಾರೆ ಎಇಇ ಹೆಸ್ಕಾಂ ಅಂಕೋಲಾ ಪ್ರವೀಣ ನಾಯ್ಕ.

ಪ್ರತಿ ಮನೆಗಳಿಗೆ ವಿಶಿಷ್ಟ ಯುಎಚ್‌ಐಡಿ ಸಂಖ್ಯೆ ನೀಡಲಾಗುತ್ತದೆ. ಮೀಟರ್ ರೀಡರ್‌ಗಳು ಸೆರೆ ಹಿಡಿದ ಮನೆ ಪಟ್ಟಿ ಡೇಟಾ ಸರ್ವರ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಸಿಕ್ಕ ಎಲ್ಲ ದತ್ತಾಂಶವನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ನೀಡಲಾಗುವುದು ಎನ್ನುತ್ತಾರೆ ಸಹಾಯಕ ಲೆಕ್ಕಾಧಿಕಾರಿ ಹೆಸ್ಕಾಂ ನಾಗರಾಜ್ ನಾಯ್ಕ.