ಗಣಿತ ಕಲಿಸುವಲ್ಲಿ ಮೆಟ್ರಿಕ್ ಮೇಳವೊಂದು ಹೊಸ ತಂತ್ರ: ಉಪನ್ಯಾಸಕಿ ಪಾರ್ವತಮ್ಮ

| Published : Jan 31 2025, 12:46 AM IST

ಗಣಿತ ಕಲಿಸುವಲ್ಲಿ ಮೆಟ್ರಿಕ್ ಮೇಳವೊಂದು ಹೊಸ ತಂತ್ರ: ಉಪನ್ಯಾಸಕಿ ಪಾರ್ವತಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಕೇವಲ ಖಾಸಗಿ ಶಾಲೆಗಳಲ್ಲಿ ಮಾತ್ರ ನಡೆಯುವ ಆಹಾರ ಮೇಳ, ಮೆಟ್ರಿಕ್ ಮೇಳ, ಶಾಲಾ ವಾರ್ಷಿಕೋತ್ಸವಗಳು ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಹ ನಡೆಯುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಮಕ್ಕಳು ವಿವಿಧ ದಿನನಿತ್ಯ ಬಳಸುವ ವಸ್ತುಗಳ ಮಾರಾಟ ತೂಕ ಮತ್ತು ಅಳತೆ, ಲೆಕ್ಕಾಚಾರ, ಗ್ರಾಹಕರೊಂದಿಗೆ ವ್ಯವಹರಿಸುವ ರೀತಿ ಮುಂತಾದವುಗಳನ್ನು ಕಲಿಯುತ್ತಾರೆ. ಗಣಿತ ಕಲಿಸುವಲ್ಲಿ ಮೆಟ್ರಿಕ್ ಮೇಳ ಒಂದು ಹೊಸ ತಂತ್ರವಾಗಿದೆ. ಮಕ್ಕಳು ಗಣಿತದ ಜೊತೆಗೆ ಇತರ ವಿಷಯಗಳನ್ನು ಸಹ ಕಲಿಸಲು ಸಹಾಯ ಮಾಡುತ್ತದೆ ಎಂದು ಡಯಟ್ ನ ಉಪನ್ಯಾಸಕಿ ಪಾರ್ವತಮ್ಮ ಅಭಿಪ್ರಾಯಪಟ್ಟರು.

ನಗರದ ರೆಹಮಾನಿಯ ನಗರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಆಯೋಜಿಸಿದ್ದ ಮೆಟ್ರಿಕ್ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ಖಾಸಗಿ ಶಾಲೆಗಳಲ್ಲಿ ಮಾತ್ರ ನಡೆಯುವ ಆಹಾರ ಮೇಳ, ಮೆಟ್ರಿಕ್ ಮೇಳ, ಶಾಲಾ ವಾರ್ಷಿಕೋತ್ಸವಗಳು ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಹ ನಡೆಯುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ. ದಿನದಿಂದ ದಿನಕ್ಕೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಂಠಿತವಾಗುತ್ತಿರುವ ಈ ಸಮಯದಲ್ಲಿ ಸರ್ಕಾರಿ ಶಾಲೆಗಳು ವಿಭಿನ್ನ ಮೇಳ ಮತ್ತು ಸಮಾರಂಭಗಳನ್ನು ಆಚರಿಸುವ ಮೂಲಕ ದಾಖಲಾತಿಯನ್ನು ಹೆಚ್ಚಿಸಬೇಕಿದೆ ಎಂದರು.

ಡಯಟ್ ನ ಉಪನ್ಯಾಸಕಿ ನಾಗಮ್ಮನವರು ಮೆಟ್ರಿಕ್ ಮೇಳದಲ್ಲಿ ವಿಭಿನ್ನ ದಿನನಿತ್ಯದ ವಸ್ತುಗಳ ತೂಕ ಮತ್ತು ಅಳತೆ, ಲೆಕ್ಕಾಚಾರ, ಕೂಡುವುದು ಕಳೆಯುವುದು, ಭಾಗಾಕಾರ, ಗುಣಾಕಾರ ಮತ್ತು ಲಾಭ- ನಷ್ಟದ ಪರಿಕಲ್ಪನೆಗಳನ್ನು ಕಲಿಸಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕಿ ಮಂಜುಳಾ , ಉರ್ದು ಕ್ಲಸ್ಟರ್ ಇಸಿಒ ಇಸ್ರಾರ್ ಪಾಷ, ಉರ್ದು ಕ್ಲಸ್ಟರ್ ಸಿ ಅರ್ ಪಿ ಸನಾವುಲ್ಲಾ, ಮುಖ್ಯ ಶಿಕ್ಷಕರಾದ ಜಗದೀಶ್ ಪಾಲ್ಗೊಂಡಿದ್ದರು.