ಅಂತಿಮ ಹಂತದಲ್ಲಿ ಮೆಟ್ರೋ3ನೇ ಹಂತದ ಭೂಸ್ವಾಧೀನ

| Published : Aug 14 2024, 12:58 AM IST

ಸಾರಾಂಶ

ನಮ್ಮ ಮೆಟ್ರೋ ಮೂರನೇ ಹಂತದ ಕಿತ್ತಳೆ ಮಾರ್ಗದ ನಿರ್ಮಾಣಕ್ಕೆ ಅಗತ್ಯ ಭೂಸ್ವಾಧೀನಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಅಂತಿಮ ಹಂತದ ಸಿದ್ಧತೆಯಲ್ಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋ ಮೂರನೇ ಹಂತದ ಕಿತ್ತಳೆ ಮಾರ್ಗದ ನಿರ್ಮಾಣಕ್ಕೆ ಅಗತ್ಯ ಭೂಸ್ವಾಧೀನಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ಅಂತಿಮ ಹಂತದ ಸಿದ್ಧತೆಯಲ್ಲಿದೆ. ಹೊಸದಾಗಿ ಯೋಜಿಸಲಾದ ಮೂರು ನಿಲ್ದಾಣಗಳ ನಿರ್ಮಾಣಕ್ಕೆ ಹೆಚ್ಚುವರಿ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿದೆ.

ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ (32.15 ಕಿ.ಮೀ.) ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ (12.5 ಕಿ.ಮೀ.) ಸೇರಿ ಎರಡು ಕಾರಿಡಾರ್‌ ಒಳಗೊಂಡ ಯೋಜನೆ ಇದಾಗಿದೆ. ಈಗಾಗಲೇ 1,29,743 ಚದರ ಮೀಟರ್‌ ಒಳಗೊಂಡ ಖಾಸಗಿ ಒಡೆತನದ 777 ಸ್ಥಳವನ್ನು ಸ್ವಾಧೀನ ಮಾಡಿಕೊಳ್ಳಲು ಗುರುತಿಸಿಕೊಳ್ಳಲಾಗಿದೆ.

ಡಿಪಿಆರ್‌ ಬಳಿಕ ಜೆ.ಪಿ.ನಗರ 5ನೇ ಹಂತ, ಕಾಮಾಕ್ಯ, ಹೊಸಕೆರೆಹಳ್ಳಿ ಬಳಿ ನಿಲ್ದಾಣ ನಿರ್ಮಾಣಕ್ಕೆ ಮೆಟ್ರೋ ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಮೂರು ನಿಲ್ದಾಣಗಳಿಗೆ ಹೆಚ್ಚುವರಿ ಭೂಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಸಂಬಂಧಿಸಿದ ಭೂ ಮಾಲೀಕರಿಗೆ ಶೀಘ್ರವೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಭೂಸ್ವಾಧೀನ ಮಾಡಿಕೊಡುವಂತೆ ಕೇಳಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಭೂಸ್ವಾಧೀನಕ್ಕೆ ಗುರುತಿಸಲಾದ ಸ್ಥಳಗಳಲ್ಲಿ ವಾಣಿಜ್ಯ ಸಂಕಿರ್ಣಗಳು, ನಿವೇಶನಗಳಿವೆ. ಆದರೆ, ಹಳೆ ಕಾಲದ ಕಟ್ಟಡಗಳು, ಸಂಸ್ಥೆಗಳಿಲ್ಲ. ಹೀಗಾಗಿ ಭೂಸ್ವಾಧೀನ ಕಷ್ಟವಾಗಲಾರದು. ಉಳಿದಂತೆ ಭೂ ಮಾಲೀಕರಿಗೆ ನೀಡಬೇಕಾದ ಪರಿಹಾರದ ಮೊತ್ತ ಎಷ್ಟಾಗಬಹುದು ಎಂಬ ಬಗ್ಗೆ ಲೆಕ್ಕಾಚಾರ ನಡೆಯುತ್ತಿದೆ. ಡಿಪಿಆರ್‌ನಲ್ಲಿ ಹೇಳಿದ್ದ ಪರಿಹಾರದ ಅಂದಾಜು ಮೊತ್ತ ಬದಲಾಗಬಹುದು ಎಂದು ಅಧಿಕಾರಿಗಳು ತಿಳಿಸಿದರು.

ಇನ್ನು, ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ 29 ಕಿ.ಮೀ. ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ 11.45 ಕಿ.ಮೀ. ಡಬ್ಬಲ್‌ ಡೆಕ್ಕರ್‌ (ಮೆಟ್ರೋ ಕಂ ಫ್ಲೈಓವರ್‌) ನಿರ್ಮಾಣಕ್ಕೂ ಬಿಎಂಆರ್‌ಸಿಎಲ್‌ ಅಧ್ಯಯನ ಕೈಗೊಂಡಿದೆ. ಒಂದು ವೇಳೆ ಡಬ್ಬಲ್‌ ಡೆಕ್ಕರ್‌ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಲ್ಲಿ ದಾಲ್ಮಿಯಾ ವೃತ್ತದ ಮೇಲ್ಸೇತುವೆ ಮೇಲೆಯೇ ಮೆಟ್ರೋ ಎಲಿವೆಟೆಡ್‌ ಹಾದುಹೋಗಲಿದೆ.

ಇಲ್ಲಿ ಡಬ್ಬಲ್‌ ಡೆಕ್ಕರ್‌ ನಿರ್ಮಾಣಕ್ಕೆ ಈಗಿನ ಮೇಲ್ಸೇತುವೆಯನ್ನು ನೆಲಸಮ ಮಾಡುವ ಸಾಧ್ಯತೆಯೂ ಇದೆ. ಬಿಬಿಎಂಪಿ ಜೊತೆಗೆ ಸಮನ್ವಯ ಮಾಡಿಕೊಂಡು ಡಬ್ಬಲ್‌ ಡೆಕ್ಕರ್‌ ನಿರ್ಮಾಣದ ಬಗ್ಗೆ ತೀರ್ಮಾಣ ಕೈಗೊಳ್ಳಲಾಗುವುದು. ಬಿಬಿಎಂಪಿ ಕೂಡ ಇದಕ್ಕೆ ಅನುದಾನ ಒದಗಿಸಬೇಕಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.