ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಳದಿ ಮಾರ್ಗದ ರಾಗಿಗುಡ್ಡ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ರೈಲು ಹಳಿಗಳ ಮೇಲೆ ಆಯತಪ್ಪಿ ಬಿದ್ದಿದ್ದು ಅಪಾಯದಿಂದ ಪಾರಾಗಿದ್ದಾರೆ. ಇವರು ಸುಮಾರು 16 ಗಂಟೆ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದು, ಬಳಲಿಕೆಯಿಂದ ಹಳಿಗೆ ಬೀಳುವಂತಾಯಿತು ಎಂದು ಮೂಲಗಳು ತಿಳಿಸಿವೆ.ಸೋಮವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಅವರು ಹಳಿಗೆ ಬಿದ್ದ ಬಳಿಕ ಸುರಕ್ಷತಾ ಕ್ರಮವಾಗಿ ಈ ಮಾರ್ಗದ ಹಳಿಯಲ್ಲಿ ಬರುತ್ತಿದ್ದ ರೈಲನ್ನು ಸುಮಾರು ಆರು ನಿಮಿಷಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ಲಾಟ್‌ಫಾರ್ಮ್ ಸಂಖ್ಯೆ 2ರಲ್ಲಿ ಕರ್ತವ್ಯದಲ್ಲಿದ್ದ 52 ವರ್ಷದ ಗಾರ್ಡ್ ಜಾರಿಬಿದ್ದಿದ್ದು, ಕೂಡಲೇ ಎಚ್ಚೆತ್ತ ಸಹ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಕರ್ತವ್ಯದಲ್ಲಿದ್ದ ಮತ್ತೊಬ್ಬ ಭದ್ರತಾ ಸಿಬ್ಬಂದಿ ತಕ್ಷಣ ತುರ್ತು ಟ್ರಿಪ್ ಸ್ವಿಚ್ (ಇಟಿಎಸ್) ಸಕ್ರಿಯಗೊಳಿಸಿ ಹಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಬಿದ್ದ ಗಾರ್ಡ್ ಅನ್ನು ಮತ್ತೆ ಪ್ಲಾಟ್‌ಫಾರ್ಮ್ ಮೇಲೆ ಎಳೆದುಕೊಳ್ಳಲು ಪ್ರಯಾಣಿಕರೊಬ್ಬರು ನೆರವಾಗಿದ್ದಾರೆ. ಭದ್ರತಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ನಿಲ್ದಾಣದ ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿದ್ದು ಈ ವಿಡಿಯೋ ವೈರಲ್ ಆಗಿದೆ.ಗಾರ್ಡ್ ಸ್ವಲ್ಪ ವಿಶ್ರಾಂತಿ ಪಡೆದು ಕೆಲಸಕ್ಕೆ ಮರಳಿದರು. ಘಟನೆಯ ಬಳಿಕ, ಗಾರ್ಡ್‌ನನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಯಿತು. ಗಾರ್ಡ್‌ಗಳಿಗೆ ಅಂತಹ ಸುದೀರ್ಘ ಅವಧಿಯ ಶಿಫ್ಟ್‌ಗಳನ್ನು ಯಾಕೆ ಮಾಡಿಸಲಾಯಿತು ಎಂಬುದನ್ನು ನಿರ್ಧರಿಸಲು ಆಂತರಿಕ ವಿಚಾರಣೆಯನ್ನು ಸಹ ಪ್ರಾರಂಭಿಸಲಾಗಿದೆ. ಈ ಬಗ್ಗೆ ನಿಲ್ದಾಣ ವ್ಯವಸ್ಥಾಪಕರನ್ನು ಸಹ ಪ್ರಶ್ನಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ತನ್ನದೇ ಆದ ಭದ್ರತಾ ಪಡೆ ಇಲ್ಲ:ಖಾಸಗಿ ಮೂಲಕ ಭದ್ರತಾ ಸಿಬ್ಬಂದಿ ನಿಯೋಜನೆ ಆಗುತ್ತಾರೆ. ತಿಂಗಳಿಗೆ ₹15 ಸಾವಿರ ಮಾತ್ರ ಸಂಬಳ ಸಿಗುತ್ತದೆ. ಅದೇ ಒಂದು ರಾತ್ರಿ, ಹಗಲಿನ ಶಿಫ್ಟ್‌ನಲ್ಲಿ ಕೆಲಸ ಮಾಡಿದಲ್ಲಿ ₹20 - ₹25 ಸಾವಿರ ಸಂಬಳ ಪಡೆಯಬಹುದು ಈ ಕಾರಣಕ್ಕೆ ಹೆಚ್ಚಾಗಿ ಗಾರ್ಡ್‌ಗಳು 2 ಶಿಫ್ಟ್‌ಗಳ ಕೆಲಸ ಮಾಡುತ್ತಾರೆ. ಹಾಗಾಗಿ ಆತ ಬಳಲಿಕೆಯಿಂದ ಆಯತಪ್ಪಿ ಬಿದ್ದಿರಬಹುದು ಎಂದು ಖಾಸಗಿ ಭದ್ರತಾ ಸಿಬ್ಬಂದಿ ಹೇಳಿದರು. 2019ರಲ್ಲಿ ಮೆಟ್ರೋ ಸುರಕ್ಷತೆಗೆ ತನ್ನದೇ ಆದ ಭದ್ರತಾ ಪಡೆ ಇಟ್ಟುಕೊಳ್ಳಲು ಕೆಎಸ್‌ಐಎಸ್‌ಎಫ್ (ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ) ನಿಯೋಜಿಸಿಕೊಳ್ಳುವಂತೆ ಅಂದಿನ ಡಿಜಿ ನೀಲಮಣಿ ರಾಜು ಅವರು ಬಿಎಂಆರ್‌ಸಿಎಲ್‌ಗೆ ಸಲಹೆ ನೀಡಿದ್ದರು. ಆದರೆ ಇದಿನ್ನೂ ಜಾರಿಗೆ ಬಂದಿಲ್ಲ.