ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ಮುತ್ಸಂದ್ರ ಹಾಗೂ ಬೆಳ್ಳಿಕೆರೆ ಗ್ರಾಮದಿಂದ ಕಾಡುಗೋಡಿ ಮೆಟ್ರೋ ನಿಲ್ದಾಣದವರೆಗಿನ ಬಿಎಂಟಿಸಿ ಮೆಟ್ರೋ ಫೀಡರ್ ಬಸ್ ಸೇವೆಗೆ ರಾಜ್ಯ ರೆಡ್ಡಿ ಜನ ಸಂಘದ ನಿರ್ದೇಶಕ ಎಂ.ಎ.ಕೃಷ್ಣಾರೆಡ್ಡಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಎರಡು ಬಿಎಂಟಿಸಿ ಬಸ್‌ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಎಂಎ.ಕೃಷ್ಣಾರೆಡ್ಡಿ, ಮುತ್ಸಂದ್ರ ಹಾಗೂ ಬೆಳ್ಳಿಕೆರೆ ಗ್ರಾಮಸ್ಥರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಿಗೆ ತೆರಳುವ ನೌಕರರಿಗೆ ಬೆಳಿಗ್ಗೆ ಹಾಗೂ ಸಂಜೆ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಚಾಲನೆ ನೀಡಲಾಗಿದೆ. ಪ್ರಮುಖವಾಗಿ ಕಾಡುಗೋಡಿ ಮೆಟ್ರೋವರೆಗೆ ತೆರಳಲು 3 ಬಸ್ ಬದಲಾವಣೆ ಮಾಡಬೇಕಿತ್ತು. ಸಾರಿರಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಶಾಸಕ ಶರತ್ ಬಚ್ಚೇಗೌಡರು ನಮ್ಮ ಮನವಿಗೆ ಸ್ಪಂದಿಸಿ ಕೇವಲ 15 ದಿನಗಳಲ್ಲೇ ಎರಡು ಬಿಎಂಟಿಸಿ ಮೆಟ್ರೋ ಫೀಡರ್ ಬಸ್‌ಗಳ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ಯುವ ಮುಖಂಡ ಬೆಳ್ಳಿಕೆರೆ ಮಹೇಶ್ ಮಾತನಾಡಿ, ಮುತ್ಸಂದ್ರ ಹಾಗೂ ಬೆಳ್ಳಿಕೆರೆ ಗ್ರಾಮಸ್ಥರ ಹಲವಾರು ವರ್ಷಗಳ ಸಾರಿಗೆ ಸಮಸ್ಯೆಗೆ ಪರಿಹಾರ ದೊರೆತಿದೆ. ದ್ವಿಚಕ್ರ ವಾಹನಗಳನ್ನು ಬಿಟ್ಟು ಬಿಎಂಟಿಸಿ ಬಸ್ ಬಳಸಿದರೆ ಸಂಚಾರ ದಟ್ಟಣೆ ಸಹ ನಿಯಂತ್ರಣ ಮಾಡಲು ಸಾಧ್ಯ. ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಸಮಯ ಬಸ್‌ಗಳ ಸಂಚಾರಕ್ಕೆ ನಿಗದಿ ಮಾಡಲಾಗುವುದು ಎಂದರು.ಬಿಎಂಟಿಸಿ ಸಹಾಯಕ ಸಂಚಾರ ನಿರ್ವಹಣಾಧಿಕಾರಿಗಳಾದ ಶ್ರೀನಿವಾಸ್ ರೆಡ್ಡಿ, ಪ್ರಸನ್ನ ರೆಡ್ಡಿ, ಮುಖಂಡರಾದ ಮಹೇಶ್, ಮುಕುಂದಪ್ಪ, ಶಿವಪ್ರಸಾದ್, ಪೊಲೀಸ್ ಶ್ರೀನಿವಾಸ್, ಶ್ರೀನಿವಾಸ್ ರೆಡ್ಡಿ, ರಾಮಕೃಷ್ಣಪ್ಪ, ಎಂಡಿ ರಮೇಶ್, ಪವನ್, ಲಕ್ಷ್ಮಣ್, ನಾಗರಾಜ್ ಹಾಜರಿದ್ದರು.
ಕೋಟ್............ಮುತ್ಸಂದ್ರ-ಬೆಳ್ಳಿಕೆರೆ ಗ್ರಾಮದಿಂದ ತಾಲೂಕು ಕೇಂದ್ರ ಹೊಸಕೋಟೆ ತಾಲೂಕು ಕೇಂದ್ರಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಶಾಸಕ ಶರತ್ ಬಚ್ಚೇಗೌಡರಿಗೆ ಮನವಿ ಸಲ್ಲಿಸಿದ್ದು ತ್ವರಿತವಾಗಿ ತಾಲೂಕು ಕೇಂದ್ರಕ್ಕೂ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು.-ಕೃಷ್ಣಾರೆಡ್ಡಿ, ನಿರ್ದೇಶಕ, ರಾಜ್ಯ ರೆಡ್ಡಿ ಜನಸಂಘ