ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರಿಗೆ ಶೀಘ್ರ ಮೆಟ್ರೋ ಯೋಜನೆ ಬರುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಸೋಮಣ್ಣ ತಿಳಿಸಿದ್ದಾರೆ.ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ರೈಲ್ವೆ ಕಾಮಗಾರಿಗಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಬಿಎಂಆರ್ ಸಿಎಲ್ ವರದಿ ಕೊಟ್ಟಿದ್ದು, ನಮ್ಮ ಕಾಲದಲ್ಲೇ ಕಾರ್ಯರೂಪಕ್ಕೆ ತರುವ ಕೆಲಸ ಆಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳು ತುಮಕೂರಿನ ಜನತೆಗೆ ಸಿಗಬೇಕು ಎಂದ ಅವರು, ಇನ್ನೊಂದು ತಿಂಗಳಿನಲ್ಲಿ ತುಮಕೂರಿನ ಜನತೆಗೆ ಒಂದು ದೊಡ್ಡ ಸುದ್ದಿ ಕೊಡುತ್ತೇನೆ. ಅದು ಇಡೀ ತುಮಕೂರಿನ ಚಿತ್ರಣವನ್ನೇ ಬದಲಾವಣೆ ಮಾಡುತ್ತದೆ. ಇನ್ನು ಕೆಲವೇ ದಿನಗಳಲ್ಲಿ ತುಮಕೂರು ಬೆಂಗಳೂರಿನ ಎರಡನೇ ನಗರವಾಗಿ ಬೆಳೆಯುವುದು ಗ್ಯಾರಂಟಿ ಎಂದರು.ಬೆಂಗಳೂರು ಟು ಚೆನ್ನೈ ಕಾರಿಡಾರ್ ಯೋಜನೆ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 8484 ಎಕರೆ ಪ್ರದೇಶದಲ್ಲಿ ಪಿಎಂ ಗತಿಶಕ್ತಿ ಯೋಜನೆ ಅಡಿಯಲ್ಲಿ ಇದು ನಿರ್ಮಾಣವಾಗುತ್ತಿದೆ. ಒಟ್ಟು ಮೂರು ಹಂತದಲ್ಲಿ ಅಭಿವೃದ್ಧಿಗೆ ಪ್ರಧಾನಿ ಮೋದಿಯವರಿಂದ ಚಾಲನೆ ಕೊಡಲಾಗಿದೆ. ಈಗ ಮೊದಲನೇಯ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
658 ಎಕರೆ ಪ್ರದೇಶದಲ್ಲಿ 1,800 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು. ಆಟೋ ಮೊಬೈಲ್, ಬಯೋಟೆಕ್, ಸಾರಿಗೆ ,ಕೈಗಾರಿಕಾ ಉತ್ಪಾದನೆ, ಆಹಾರ ಶೇಖರಣೆ ಇನ್ನಿತರೆ ಕೆಲಸಗಳು ನಡೆಯುತ್ತವೆ ಎಂದ ಅವರು, ಇದು ಒಟ್ಟು 88,500 ಜನಕ್ಕೆ ಉದ್ಯೋಗ ಸೃಷ್ಟಿ ಮಾಡುವ ಯೋಜನೆಯಾಗಿದೆ ಎಂದರು.ಒಟ್ಟು ೭ ಸಾವಿರ ಕೋಟಿ ರು. ಯೋಜನೆ ಇದಾಗಿದ್ದು, ಈ ಕೈಗಾರಿಕಾ ಪ್ರದೇಶಕ್ಕೆ 6 ರಾಷ್ಟ್ರೀಯ ಹೆದ್ದಾರಿ ಬರುತ್ತವೆ. ಈ ಒಂದು ಪ್ರದೇಶದಲ್ಲಿ ಗೂಡ್ಸ್ ಟರ್ಮಿನಲ್ ಮಾಡುವುದಕ್ಕೆ ನಮ್ಮ ಇಲಾಖೆ ತೀರ್ಮಾನ ಮಾಡಿದೆ ಎಂದ ಅವರು, ರಾಷ್ಟ್ರದ ಲಾಜಿಸ್ಟಿಕ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ಇದು ಕೈಗಾರಿಕಾ ಕ್ಷೇತ್ರಕ್ಕೆ ಒಂದು ಹೊಸ ನಾಂದಿ ಎಂದೇ ಹೇಳಬಹುದು ಎಂದರು.
ರೈಲ್ವೆ ಇಲಾಖೆ 10 ವರ್ಷಗಳಲ್ಲಿ 50 ವರ್ಷದ ಸಾಧನೆ ಮಾಡಿದೆ. ಈ ಯೋಜನೆಯನ್ನು 2026- 27ಕ್ಕೆ ಕಾರ್ಯರೂಪಕ್ಕೆ ತರಬೇಕು.ಇನ್ನು ಶೇ. 20ರಷ್ಟು ಭೂ ಸ್ವಾಧೀನ ಆಗಬೇಕು. ಅದನ್ನು ಸಹ ಇವತ್ತು ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತದೆ ಎಂದರು.
ರೈಲ್ವೆ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ರಾಜಿ ಮಾಡಿಕೊಂಡಿರುವುದಾಗಿ ತಿಳಿಸಿದ ಸೋಮಣ್ಣ,ಮೊದಿ ಜೀ ಹಣದ ಬಗ್ಗೆ ಕೇಳುವುದಿಲ್ಲ, ಅಭಿವೃದ್ಧಿ ಬಗ್ಗೆ ಮಾತ್ರ ಕೇಳುತ್ತಾರೆ. ಹೀಗಾಗಿ ನಾನು ಯೋಜನೆ ವಿಷಯದಲ್ಲಿ ಸಿದ್ದರಾಮಯ್ಯ ಜೊತೆ ರಾಜಿ ಮಾಡಿಕೊಂಡಿದ್ದೇನೆಂದು ತಿಳಿಸಿದರು.