ಬೆಂಗಳೂರು : ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಯೋಜನೆ ಅಧ್ಯಯನ ಅಂತಿಮ ಹಂತಕ್ಕೆ

| Published : Aug 29 2024, 02:08 AM IST / Updated: Aug 29 2024, 05:30 AM IST

ಸಾರಾಂಶ

ತೀವ್ರ ವಿರೋಧದ ನಡುವೆಯೂ ನಮ್ಮ ಮೆಟ್ರೋವನ್ನು ತಮಿಳುನಾಡಿನ ಹೊಸೂರಿಗೆ ಕೊಂಡೊಯ್ಯವ ಅಧ್ಯಯನ ವರದಿ ಅಂತಿಮ ಹಂತಕ್ಕೆ ತಲುಪಿದೆ.

 ಬೆಂಗಳೂರು :  ತೀವ್ರ ವಿರೋಧ ಹೊರತಾಗಿಯೂ ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಯೋಜನೆಯಾದ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿನವರೆಗೆ 23 ಕಿ.ಮೀ. ವಿಸ್ತರಣೆ ಕಾಮಗಾರಿಯ ಕಾರ್ಯಸಾಧ್ಯತಾ ಅಧ್ಯಯನ ಅಂತಿಮ ಘಟ್ಟ ತಲುಪಿದೆ. ಈ ನಡುವೆ ನಮ್ಮ ಮೆಟ್ರೋ ಅಧಿಕಾರಿಗಳನ್ನು ಚೆನ್ನೈ ಮೆಟ್ರೋ ರೈಲ್ ಲಿ. (ಸಿಎಂಆರ್‌ಎಲ್‌) ಅಧಿಕಾರಿಗಳು ಭೇಟಿಯಾಗಿ ಯೋಜನೆ ಅನುಷ್ಠಾನಕ್ಕೆ ಸಹಕಾರ ಕೋರಿದ್ದಾರೆ.

ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅನುಮೋದನೆ ಬಳಿಕ ಕಳೆದ ಡಿಸೆಂಬರ್‌ನಿಂದಲೇ ಚೆನ್ನೈ ಮೆಟ್ರೋ ಈ ಯೋಜನೆಯ ಕಾರ್ಯಸಾಧ್ಯತಾ ವರದಿ ರೂಪಿಸುತ್ತಿದೆ. ಬಾಲಾಜಿ ರೈಲ್‌ರೋಡ್‌ ಸಿಸ್ಟ್ಂ ಅಧ್ಯಯನ ಕೈಗೊಂಡಿದ್ದು, ಬಹುತೇಕ ಮುಗಿದಿದೆ. ವರದಿಯನ್ನು ಅಂತಿಮಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್‌) ಸಹಕಾರ ಕೇಳಿರುವ ಚೆನ್ನೈ ಮೆಟ್ರೋ, ಮಂಗಳವಾರ ಈ ಸಂಬಂಧ ಮಾತುಕತೆ ನಡೆಸಿದ್ದಾರೆ. ಆದರೆ, ಈ ಸಂಬಂಧ ಬಿಎಂಆರ್‌ಸಿಎಲ್‌ ಅಷ್ಟಾಗಿ ಆಸಕ್ತಿ ತೋರಿಲ್ಲ ಎನ್ನಲಾಗಿದೆ.

ಯೋಜನೆಯ ಆರಂಭದಲ್ಲಿ 20.5 ಕಿ.ಮೀ ಉದ್ದದ ಮೆಟ್ರೋ ಮಾರ್ಗವನ್ನು ಯೋಜಿಸಲಾಗಿತ್ತು. ಆದರೆ, ಹೊಸೂರಿನ ಹೊರವಲಯದಲ್ಲಿರುವ ಟರ್ಮಿನಲ್ ನಿಲ್ದಾಣಕ್ಕೆ ಅವಕಾಶ ಕಲ್ಪಿಸಲು ತಮಿಳುನಾಡಿನಲ್ಲಿ ಹೆಚ್ಚುವರಿ 2.5 ಕಿ.ಮೀ. ಹೆಚ್ಚುವರಿ ಉದ್ದವನ್ನು ಸೇರ್ಪಡೆ ಮಾಡಲಾಗಿದೆ. ಈ ಮೂಲಕ 23 ಕಿ.ಮೀ. ಉದ್ದದ ಈ ಯೋಜನೆ ಪೈಕಿ 12 ಕಿ.ಮೀ. ಕರ್ನಾಟಕದಲ್ಲಿ ಮತ್ತು 11 ಕಿ.ಮೀ. ತಮಿಳುನಾಡಿನಲ್ಲಿರಲಿದೆ.

ಎಲೆಕ್ಟ್ರಾನಿಕ್‌ ಸಿಟಿ ಮೂಲಕ ಹಾದುಹೋಗುವ ಆರ್‌.ವಿ.ರಸ್ತೆ - ಬೊಮ್ಮಸಂದ್ರದ ಹಳದಿ ಮಾರ್ಗ ವಿಸ್ತರಿಸಿ ಹೊಸೂರಿನವರೆಗೆ ಕೊಂಡೊಯ್ಯುವ ಯೋಜನೆ ಇದು. ಪ್ರಾಥಮಿಕ ಹಂತದಲ್ಲಿ 12 ನಿಲ್ದಾಣ ನಿರ್ಮಾಣಕ್ಕಾಗಿ ಸ್ಥಳಗಳನ್ನು ಗುರುತಿಸಿಕೊಳ್ಳಲಾಗಿದೆ. ಬೊಮ್ಮಸಂದ್ರ, ನಾರಾಯಣ ಹಾಸ್ಪಿಟಲ್‌, ಅತ್ತಿಬೆಲೆ ಇಂಡಸ್ಟ್ರಿಯಲ್ ಏರಿಯಾ, ಅತ್ತಿಬೆಲೆ, ಸಿಪ್‌ಕಾಟ್‌ ಇಂಡಸ್ಟ್ರಿಯಲ್‌ ಪಾರ್ಕ್‌, ಹೊಸೂರು ಬಸ್‌ ಟರ್ಮಿನಲ್‌ಗಳಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸುವ ಸಾಧ್ಯತೆ ಇದೆ.

ಸದ್ಯ ತಮಿಳುನಾಡು ಸರ್ಕಾರವೇ ಕಾರ್ಯಸಾಧ್ಯತಾ ವರದಿಗೆ ಸಂಪೂರ್ಣ ವೆಚ್ಚವನ್ನು ಭರಿಸಿದೆ. ಆದರೆ, ಮುಂದೆ ಯೋಜನೆ ಅನುಷ್ಠಾನ ಆಗುವ ಹಂತದಲ್ಲಿ ಬಿಎಂಆರ್‌ಸಿಎಲ್‌ ನಿಂದಲೂ ಅನುದಾನ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಯಿದೆ.

ಇನ್ನು, ಕಳೆದ ಜುಲೈನಲ್ಲಿ ಬಿಎಂಆರ್‌ಸಿಎಲ್‌ ಕೂಡ ಅತ್ತಿಬೆಲೆವರೆಗೆ 11 ಕಿಮೀ ನಮ್ಮ ಮೆಟ್ರೋ ವಿಸ್ತರಿಸುವ ಸಂಬಂಧ ಹೈದ್ರಾಬಾದ್‌ ಮೂಲದ ಆರ್‌ವೀ ಅಸೋಸಿಯೇಟ್ಸ್‌ಗೆ ಕಾರ್ಯಸಾಧ್ಯತಾ ವರದಿ ರೂಪಿಸಲು ಟೆಂಡರ್‌ ನೀಡಿದೆ. ಮುಂದಿನ ಆರು ತಿಂಗಳಲ್ಲಿ ಈ ವರದಿ ಸಿದ್ಧವಾಗಲಿದೆ.

ಈ ಬಗ್ಗೆ ಮಾತನಾಡಿದ ಬಿಎಂಆರ್‌ಸಿಎಲ್‌ ಅಧಿಕಾರಿಗಳು, ಹೊಸೂರಿಗೆ ಮೆಟ್ರೋ ವಿಸ್ತರಣೆ ಸಂಬಂಧ ಚೆನ್ನೈ ಮೆಟ್ರೋ ರೈಲ್ ಲಿ. ಶೀಘ್ರವೇ ಕಾರ್ಯಸಾಧ್ಯತಾ ವರದಿಯನ್ನು ನಮಗೆ ಸಲ್ಲಿಸುವ ಸಾಧ್ಯತೆಯಿದೆ. ಇದರ ಸಾಧಕ ಬಾಧಕದ ಬಗ್ಗೆ ಸರ್ಕಾರದ ಅನುಮತಿಯೊಂದಿಗೆ ಅಧ್ಯಯನ ಮಾಡಲಿದ್ದೇವೆ ಎಂದು ತಿಳಿಸಿದರು.

ಯೋಜನೆ ಅನುಷ್ಠಾನದ ಬಗ್ಗೆ ಈಗಲೇ ತೀರ್ಮಾನ ಆಗಿಲ್ಲ. ಸಾಕಷ್ಟು ತಾಂತ್ರಿಕ ವಿಚಾರಗಳು ಸೇರಿದಂತೆ ಯೋಜನೆಗೆ ಒಪ್ಪಿಗೆ ಸೂಚಿಸಬೇಕೊ ಬೇಡವೋ, ಅಂತಾರಾಜ್ಯ ಮೆಟ್ರೋ ಯೋಜನೆ ಇದಾಗಿರುವ ಹಿನ್ನೆಲೆಯಲ್ಲಿ ಯಾರು ಎಷ್ಟು ಅನುದಾನ ಕೊಡಬೇಕು ಎಂಬುದೆಲ್ಲ ಬಳಿಕ ನಿರ್ಧಾರ ಆಗಬೇಕಾಗುತ್ತದೆ ಎಂದು ಹೇಳಿದರು.

ತೀವ್ರ ವಿರೋಧ

ಇನ್ನು ನಮ್ಮ ಮೆಟ್ರೋವನ್ನು ಹೊಸೂರಿಗೆ ವಿಸ್ತರಿಸುವ ಬಗ್ಗೆ ರಾಜ್ಯದ ನಗರ ಸಾರಿಗೆ ತಜ್ಞರು, ಕನ್ನಡಪರ ಸಂಘಟನೆಗಳು ಹಿಂದೆಯೇ ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ವಿಸ್ತರಣೆಯಿಂದ ಬೆಂಗಳೂರಿಗೆ ನಯಾಪೈಸೆ ಪ್ರಯೋಜನ ಇಲ್ಲ. ಬದಲಾಗಿ ಇಲ್ಲಿನ ಇಂಡಸ್ಟ್ರಿಗಳು, ಉದ್ಯಮಿಗಳಿಗೆ ತೊಂದರೆಯೇ ಆಗಲಿದೆ. ಅಲ್ಲಿನ ಕಡಿಮೆ ಬೆಲೆಯ ಭೂಮಿ ಸೇರಿ ಇತರ ವಿಚಾರಗಳಿಂದ ಸಣ್ಣ, ಅತಿ ಸಣ್ಣ ಉದ್ಯಮಗಳು, ಸ್ಟಾರ್ಟ್‌ ಅಪ್‌ಗಳು ಎಲೆಕ್ಟ್ರಾನಿಕ್ ಸಿಟಿಯಿಂದ ಹೊಸೂರು ಕಡೆ ಸಾಗಬಹುದು ಎಂಬ ಆತಂಕವಿದೆ.