ಮೆಟ್ರೋ ಪ್ರಾಯೋಗಿಕ ವಿದ್ಯುದ್ದೀಕರಣ: ವಯಡಕ್ಟ್‌ ಪ್ರವೇಶಿಸದಂತೆ ಎಚ್ಚರಿಕೆ

| Published : May 20 2024, 01:38 AM IST / Updated: May 20 2024, 08:28 AM IST

ಮೆಟ್ರೋ ಪ್ರಾಯೋಗಿಕ ವಿದ್ಯುದ್ದೀಕರಣ: ವಯಡಕ್ಟ್‌ ಪ್ರವೇಶಿಸದಂತೆ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮೆಟ್ರೋದ ಪ್ರಾಯೋಗಿಕ ವಿದ್ಯುದ್ದೀಕರಣ ನಡೆಯುತ್ತಿರುವ ಹಿನ್ನಲೆ ಸಾರ್ವಜನಿಕರು ಕಡ್ಡಾಯವಾಗಿ ಪ್ರವೇಶಿಸದಂತೆ ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ಎಚ್ಚರಿಕೆ.

 ಬೆಂಗಳೂರು :  ನಮ್ಮ ಮೆಟ್ರೋ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ವಿದ್ಯುದ್ದೀಕರಣ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಟಿಎಂ ಲೇಔಟ್‌ ಫ್ಲಾಟ್‌ಫಾರಂ ನಿಲ್ದಾಣದಿಂದ ಆರ್‌ವಿ ರಸ್ತೆ ನಿಲ್ದಾಣದ ಕೊನೆಯವರೆಗೆ ಮೆಟ್ರೋ ವಯಡಕ್ಟ್‌ಗಳನ್ನು ಕಡ್ಡಾಯವಾಗಿ ಪ್ರವೇಶಿಸದಂತೆ ಸಾರ್ವಜನಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಎಚ್ಚರಿಕೆ ನೀಡಿದೆ.

ಪ್ರಾಯೋಗಿಕ ವಿದ್ಯುದ್ದೀಕರಣ ಸಂದರ್ಭದಲ್ಲಿ ಅಪಾಯಕಾರಿ ಮಟ್ಟದಲ್ಲಿ ವಿದ್ಯುತ್‌ ಸರಬರಾಜು ಮಾಡಲಾಗುತ್ತದೆ. ಮೆಟ್ರೋ ವಯಡಕ್ಟ್ ಮೂಲಕ 33 ಕೆವಿ ವಿದ್ಯುತ್‌ ಕೇಬಲ್‌ಗಳು ಹಾದು ಹೋಗಿವೆ. ಬಿಟಿಎಂ ಲೇಔಟ್ ನಿಲ್ದಾಣ, ಜಯದೇವ ನಿಲ್ದಾಣ, ರಾಗಿಗುಡ್ಡ ನಿಲ್ದಾಣ ಮತ್ತು ಆರ್‌ವಿ ರಸ್ತೆ ನಿಲ್ದಾಣದವರೆಗೂ 750 ವೋಲ್ಟ್‌ಗಳ ವಿದ್ಯುತ್‌ ಸರಬರಾಜು ಆಗುತ್ತದೆ. ಈ ವೇಳೆ ವಯಡಕ್ಟ್‌ ಪ್ರವೇಶಿಸಿದರೆ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚು.

ಹೆಬ್ಬಗೋಡಿ ಡಿಪೋ ವಿಭಾಗದಿಂದ ಬೊಮ್ಮಸಂದ್ರ ನಿಲ್ದಾಣದವರೆಗೆ ಹಾಗೂ ಆರ್.ವಿ.ರಸ್ತೆ ನಿಲ್ದಾಣದವರೆಗೂ 16 ನಿಲ್ದಾಣಗಳಲ್ಲಿ ವಿದ್ಯುತ್‌ ಪ್ರವಹಿಸಲಿದೆ. ಈ ನಿಲ್ದಾಣಗಳಿಗೆ ಅಥವಾ ಮಾರ್ಗದ ವಯಾಡಕ್ಟ್‌ಗಳಿಗೆ ಪ್ರವೇಶದಿಂದ ಮಾರಣಾಂತಿಕ ಅಪಾಯ ಉಂಟಾಗಬಹುದು. ಹೀಗಾಗಿ, ಅನುಮತಿಯಿಲ್ಲದೆ ಪ್ರವೇಶಿಸದಂತೆ ಬಿಎಂಆರ್‌ಸಿಎಲ್ ಎಚ್ಚರಿಕೆ ನೀಡಿದೆ.