ಸೈಬರ್ ವಂಚನೆ ಪ್ರಕರಣಗಳಿಗೆ ನಲುಗಿದ ಮಹಾನಗರ

| Published : Dec 31 2023, 01:30 AM IST

ಸಾರಾಂಶ

2023ರಲ್ಲಿ ಅತಿ ಹೆಚ್ಚಾಗಿ ಕಾಡಿದ್ದು ಸೈಬರ್‌ ಅಪರಾಧ. ಆನ್‌ಲೈನ್‌ ಮೂಲಕ ವಂಚಿಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ.

- 2023ರಲ್ಲಿ ಹು-ಧಾ ಕಮೀಷನರೇಟ್‌ ವ್ಯಾಪ್ತಿಯಲ್ಲಿ ಒಟ್ಟು 5289 ಪ್ರಕರಣಗಳು ದಾಖಲು

- 460 ಸೈಬರ್‌ ವಂಚನೆ, 86 ಗಾಂಜಾ ಪ್ರಕರಣಗಳು ದಾಖಲು

- ₹5 ಬಾಲಕನ ಹತ್ಯೆ, ಆಸ್ತಿಗಾಗಿ ವೃದ್ಧೆಯ ಕೊಲೆ

- ಸಿನಿಮೀಯ ರೀತಿಯಲ್ಲಿ ರೌಡಿಶೀಟರ್‌ ಬಂಧನ ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಒಂದೇ ವರ್ಷದಲ್ಲಿ ಒಟ್ಟು 5289 ಪ್ರಕರಣಗಳು, ಈ ಪೈಕಿ 460 ಸೈಬರ್‌ ವಂಚನೆ..!

ಇದು 2023ರಲ್ಲಿ ನಡೆದ ಅಪರಾಧ ಪ್ರಕರಣಗಳ ಸಣ್ಣ ಝಲಕ್‌. 2023ರಲ್ಲಿ ಅತಿ ಹೆಚ್ಚಾಗಿ ಕಾಡಿದ್ದು ಸೈಬರ್‌ ಅಪರಾಧ. ಆನ್‌ಲೈನ್‌ ಮೂಲಕ ವಂಚಿಸುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ ಎಂಬುದು ಈ ಮೂಲಕ ಗೋಚರವಾಗುತ್ತಿದೆ.

460 ಪ್ರಕರಣಗಳು

ಬ್ಯಾಂಕ್‌ ಖಾತೆಗೆ ಇ-ಕೆವೈಸಿ ಅಪ್‌ಡೇಟ್‌, ಆನ್‌ಲೈನ್‌ ವಹಿವಾಟು ಮಾಡಿ ಹೆಚ್ಚಿಗೆ ಹಣ ಗಳಿಸುವುದು, ಮನೆಗೆಲಸ, ಪಾರ್ಟ್ ಟೈಂ ಜಾಬ್, ಅಶ್ಲೀಲ ಫೋಟೋ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಡುವುದಾಗಿ ಹೆದರಿಸಿ ಬ್ಲ್ಯಾಕ್‌ ಮೇಲ್‌ ಮಾಡುವುದು ಹೀಗೆ ಹಲವು ರೀತಿಯಲ್ಲಿ ವಂಚನೆಗೊಳಗಾದ 460 ಜನರು ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ರೈತರು, ನಿವೃತ್ತ ನೌಕರರು, ಉಪನ್ಯಾಸಕರು, ಶಿಕ್ಷಕರು, ಶಿಕ್ಷಕಿಯರ ಸಂಖ್ಯೆಯೇ ಹೆಚ್ಚಾಗಿದೆ. ಕೆಲವರು ಮರ್ಯಾದೆಗೆ ಅಂಜಿ ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸುವಲ್ಲಿ ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ.

ನಿಲ್ಲದ ಬೆಟ್ಟಿಂಗ್ ಹಾವಳಿ

ವಿಶ್ವಕಪ್ ಕ್ರಿಕೆಟ್‌, ಟಿ-20 ಕ್ರಿಕೆಟ್‌ ಪಂದ್ಯಾವಳಿಯ ವೇಳೆ ಜಿಲ್ಲೆಯಲ್ಲಿ ಕ್ರಿಕೆಟ್ ಬುಕ್ಕಿಗಳ ಹಾವಳಿಯೂ ಹೆಚ್ಚಾಗಿ ಕಂಡು ಬಂದಿತು. ಹು-ಧಾ ಪೊಲೀಸ್ ಕಮೀಷನರೇಟ್‌ ವ್ಯಾಪ್ತಿಯಲ್ಲಿ 500ಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ. ಲಕ್ಷಾಂತರ ಹಣ ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಿರುವುದನ್ನು ಮೆಲಕು ಹಾಕಬಹುದು.

ರೌಡಿಶೀಟರ್‌ ಬಂಧನ

ಕಲ್ಲಿನಿಂದ ಹಲ್ಲೆ ಮಾಡಲು ಯತ್ನಿಸಿದ್ದ ರೌಡಿಶೀಟರ್ ಮೇಲೆ ಪೊಲೀಸರು ಫೈರ್ ಮಾಡಿದ ಘಟನೆ ನಡೆದಿತ್ತು. ರೌಡಿಶೀಟರ್ ಸತೀಶ ಅಲಿಯಾಸ್ ಟಿಂಕುನನ್ನು ಬಂಧಿಸುವ ವೇಳೆ ಪಿಎಸ್‌ಐ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಈ ವೇಳೆ ಪೊಲೀಸ್ ಇನ್‌ಸ್ಪೆಕ್ಟರ್ ಮಹ್ಮದ್ ರಫೀಕ್ ತಹಸೀಲ್ದಾರ್ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ್ದರು.

₹5ಗಾಗಿ ಬಾಲಕನ ಹತ್ಯೆ

₹5 ಕೊಡಲಿಲ್ಲ ಎಂಬ ಕಾರಣಕ್ಕೆ ಬಾಲಕನನ್ನು ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಆರೋಪಿ ಹುಬ್ಬಳ್ಳಿಯ ಸೆಟ್ಲಮೆಂಟ್‌ ನಿವಾಸಿ ರವಿ ಬಳ್ಳಾರಿ. ಬೈರಿದೇವರಕೊಪ್ಪದ ನದೀಮ್‌(9) ಎಂಬ ಬಾಲಕನನ್ನು ಕೊಲೆಮಾಡಿ ದೊಡ್ಡಮನಿ ಚಾಳದ ಮುಳ್ಳಿನ ಬೇಲಿಯಲ್ಲಿ ಎಸೆದಿದ್ದನು. ಘಟನೆ ನಡೆದ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಬಂಗಾರದ ದ್ರಾವಣ ಕಳ್ಳತನ

ಹುಬ್ಬಳ್ಳಿಯ ಮರಾಠಗಲ್ಲಿಯ ಕೋಳಿಪೇಟೆಯಲ್ಲಿ ಬಂಗಾರ ಕರಗಿಸುವ ಅಂಗಡಿಯಿಂದ ₹61.80 ಲಕ್ಷ ಮೌಲ್ಯದ 1025 ಗ್ರಾಂ ತೂಕದ 24 ಕ್ಯಾರೆಟ್ ಬಂಗಾರದ ದ್ರಾವಣ ಕಳವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಶಹರ ಠಾಣೆ ಪೊಲೀಸರು, ಮಹಾರಾಷ್ಟ್ರ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ 20 ತೊಲೆ ಗಟ್ಟಿ ಬಂಗಾರ ಹಾಗೂ ₹6.5 ಲಕ್ಷ ಸೇರಿ ಒಟ್ಟು ₹18.5 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದರು.

ಮದ್ಯದ ಅಮಲಿನಲ್ಲಿ ಪತ್ನಿ, ಮಕ್ಕಳ ಹತ್ಯೆ

ಕ್ಷುಲ್ಲಕ ಕಾರಣಕ್ಕೆ ಸಹೋದರರು, ಗೆಳೆಯರ ಮಧ್ಯೆ ಜಗಳ ನಡೆದು ಸಾವಿನ ದವಡೆಗೆ ನೂಕಿದೆ. ಇವೆಲ್ಲ ನಡೆದಿರುವುದು ಮದ್ಯ ಇಲ್ಲವೇ ಗಾಂಜಾ ಅಮಲಿನಲ್ಲಿಯೇ ಎಂಬುದು ಆತಂಕದ ವಿಷಯ. ಮದ್ಯದ ಅಮಲಿನಲ್ಲಿದ್ದ ಪತಿಯೂ ಪತ್ನಿ ಹಾಗೂ ಮೂವರು ತನ್ನ ಮಕ್ಕಳನ್ನೇ ಕೊಂದು ತಾನೂ ನೇಣಿಗೆ ಶರಣಾಗಿದ್ದ. ಸುಳ್ಳದಲ್ಲಿ ನಡೆದಿದ್ದ ಈ ಘಟನೆ ಅಕ್ಷರಶಃ ಗ್ರಾಮವನ್ನು ನಲುಗಿಸಿತ್ತು.

ಹಲವು ಪ್ರಕರಣಗಳು

ಖಾಸಗಿ ಬಸ್‌ನಲ್ಲಿ ₹1.14 ಕೋಟಿ ಅಕ್ರಮ ಹಣ ಸಾಗಿಸುತ್ತಿದ್ದ ಯುವಕನನ್ನು ಹುಬ್ಬಳ್ಳಿಯ ಬಸವವನ ಬಳಿ ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದರು. ಬಂಗಾರದ ಆಸೆಗಾಗಿ ಕಲಘಟಗಿ ತಾಲೂಕಿನ ಆಲದಕಟ್ಟಿ ಗ್ರಾಮದ ಹೊಲದಲ್ಲಿ 82 ವರ್ಷದ ವೃದ್ಧೆ ತಿಪ್ಪವ್ವ ತಂಬೂರ ಎನ್ನುವ ವೃದ್ಧೆಯ ಕೊಲೆ ಮಾಡಿ ಅವಳ ಕೊರಳಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಹೋಗಿದ್ದು ಜನಮಾನಸದಲ್ಲಿ ಹಚ್ಚ ಹಸಿರಾಗಿದೆ.

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣಗಳ ಸಂಖ್ಯೆಗಳಿಗೇನು ಕಮ್ಮಿಯಿಲ್ಲ. ಕುಸುಗಲ್ಲ ರಸ್ತೆಯ ದುರ್ಗಾ ಕಾಲನಿ ಹತ್ತಿರದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹6.71 ಲಕ್ಷ ಮೌಲ್ಯದ 600 ಚೀಲ ಅಕ್ಕಿಯನ್ನು (292 ಕ್ವಿಂಟಾಲ್) ಜಪ್ತಿ ಮಾಡಲಾಗಿದ್ದು, ಮೂವರನ್ನು ಬಂಧಿಸಲಾಗಿತ್ತು.

ಹಿಂದು ಯುವತಿಯರ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅವಹೇಳನವಾಗಿ ಪೋಸ್ಟ್‌ ಮಾಡಿದ ಆರೋಪದಡಿ ನಗರದ ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಧಮ್ ಇದ್ದರೆ ನನ್ನನ್ನು ಹಿಡಿಯಿರಿ ಎಂದು ಪೊಲೀಸರಿಗೆ ಚಾಲೆಂಜ್ ಮಾಡಿದ್ದ. ಪೋಸ್ಟ್‌ ವೈರಲ್ ಆಗುತಿದ್ದಂತೆ ಪೊಲೀಸರು ಹೈ ಅಲರ್ಟ್ ಆಗಿದ್ದರು. ನಂತರ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಜಿಲ್ಲೆಯಲ್ಲಿ ನಿಲ್ಲದ ಗಾಂಜಾ ಗುಂಗು

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಗೃಹಸಚಿವ ಡಾ. ಜಿ. ಪರಮೇಶ್ವರ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಡ್ರಗ್ಸ್‌ ಸಂಪೂರ್ಣ ತಡೆಗಟ್ಟುವ ಮೂಲಕ 3 ತಿಂಗಳೊಳಗೆ ಡ್ರಗ್ಸ್‌ ಮುಕ್ತ ಜಿಲ್ಲೆಯನ್ನಾಗಿಸುವ ಭರವಸೆ ನೀಡಿದ್ದರು. ಆದರೆ, ಇಂದಿಗೂ ಗಾಂಜಾ ಪ್ರಕರಣಗಳು ವರದಿಯಾಗುತ್ತಲೇ ಇವೆ. ಒಂದೇ ವರ್ಷದಲ್ಲಿ 86 ಪ್ರಕರಣಗಳು ದಾಖಲಾಗಿವೆ. ಹೌರಾದಿಂದ ವಾಸ್ಕೋ ಕಡೆಗೆ ಹೊರಟಿದ್ದ ಅಮರಾವತಿ ಎಕ್ಸಪ್ರೆಸ್‌ ರೈಲಿನಲ್ಲಿ ₹35.44 ಲಕ್ಷ ಮೌಲ್ಯದ 4 ಕೆಜಿ 300 ಗ್ರಾಂ ಮೌಲ್ಯದ ಗಾಂಜಾವನ್ನು ಹುಬ್ಬಳ್ಳಿಯ ರೈಲ್ವೆ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದರು. ರೈಲು ಮೂಲಕ ಗಾಂಜಾ ರವಾನೆ ಮಾಡುತ್ತಿದ್ದ ಬೆಳಕಿಗೆ ಬಂದಿತ್ತು.

5289 ಪ್ರಕರಣ ದಾಖಲು

ವರ್ಷದಲ್ಲಿ ಒಟ್ಟು 544 ಅಪಘಾತ ಪ್ರಕರಣಗಳು ನಡೆದಿದ್ದು, ಇದರಲ್ಲಿ 114 ಮಾರಕ, 430 ಮಾರಕವಲ್ಲದ ಪ್ರಕರಣಗಳು ದಾಖಲಾಗಿವೆ. 254 ಕಳ್ಳತನ, 386 ಜನರ ಕಾಣೆ, 24 ಕೊಲೆ, 42 ಕೊಲೆಗೆ ಯತ್ನ, 45 ಪೋಕ್ಸೋ, 7 ಆತ್ಮಹತ್ಯೆ, 24 ದರೋಡೆ, ಸಿಆರ್‌ಪಿಸಿ ಅಡಿ 1386 ಸೇರಿದಂತೆ ಒಟ್ಟು 5289 ಪ್ರಕರಣಗಳ ದಾಖಲಾಗಿವೆ.