ಹು-ಧಾ ಅವಳಿ ನಗರವನ್ನು ಮೆಟ್ರೋ ಪಾಲಿಟಿನ್‌ ಸಿಟಿ ಮಾಡುವ ಹೆಸರಿನಲ್ಲಿ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ವಿರೋಧಿಸುತ್ತಿದ್ದು ಸರ್ಕಾರವನ್ನು ದಾರಿ ತಪ್ಪಿಸುವ ತಂತ್ರವಿದು. ಇತ್ತೀಚೆಗೆ ಕೆಲವರು ಹೊಸ ಚಿಂತನೆ ಪ್ರತಿಪಾದಿಸುತ್ತಿದ್ದಾರೆ.

ಧಾರವಾಡ:

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ ಕಳೆದ ಡಿಸೆಂಬರ್‌ ತಿಂಗಳಲ್ಲಿಯೇ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದರೂ, ಆಕ್ಷೇಪಣೆ ಸಲ್ಲಿಸದೇ ಈಗ ಕೊನೆ ಹಂತದಲ್ಲಿ ಪ್ರತ್ಯೇಕ ಪಾಲಿಕೆ ಬೇಡ ಎನ್ನುವುದು ಸರಿಯೇ ಎಂದು ಪ್ರತ್ಯೇಕ ಪಾಲಿಕೆ ಹೋರಾಟಗಾರರು ಪ್ರಶ್ನಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಹೋರಾಟ ವೇದಿಕೆಯ ಬಿ.ಡಿ. ಹಿರೇಮಠ ಮತ್ತು ವೆಂಕಟೇಶ ಮಾಚಕನೂರ, ಹು-ಧಾ ಅವಳಿ ನಗರವನ್ನು ಮೆಟ್ರೋ ಪಾಲಿಟಿನ್‌ ಸಿಟಿ ಮಾಡುವ ಹೆಸರಿನಲ್ಲಿ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ವಿರೋಧಿಸುತ್ತಿದ್ದು ಸರ್ಕಾರವನ್ನು ದಾರಿ ತಪ್ಪಿಸುವ ತಂತ್ರವಿದು. ಇತ್ತೀಚೆಗೆ ಕೆಲವರು ಹೊಸ ಚಿಂತನೆ ಪ್ರತಿಪಾದಿಸುತ್ತಿದ್ದಾರೆ. ಇಲ್ಲಿಯ ವರೆಗೂ ಅವರು ಎಲ್ಲಿದ್ದರು. ಎರಡೂ ನಗರಗಳ ಎಲ್ಲ ಜನಪ್ರತಿನಿಧಿಗಳ ಒತ್ತಾಯ, ವಿಧಾನಸಭೆಯಲ್ಲಿನ ಚರ್ಚೆ ಹಾಗೂ ಮಹಾನಗರ ಪಾಲಿಕೆಯ ಒಮ್ಮತದ ನಿರ್ಣಯ, ಸಾರ್ವಜನಿಕರಿಂದ ಬಂದ ಸಲಹೆ-ಸೂಚನೆ ಅನುಸರಿಸಿ ಸರ್ಕಾರ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವ ಕುರಿತು ಕ್ರಮಕೈಗೊಂಡಿದೆ. ಈಗ ಏತಕ್ಕಾಗಿ ನಿಮ್ಮ ವಿರೋಧ ಎಂದು ಪ್ರಶ್ನಿಸಿದ್ದಾರೆ.

ಸದುದ್ದೇಶವಲ್ಲ:

ಹುಬ್ಬಳ್ಳಿ-ಧಾರವಾಡ ನಗರಗಳು ಸೇರಿ ಮೆಟ್ರೋಪಾಲಿಟಿನ್ ಸಿಟಿ ಮಾಡಬೇಕೆಂದು ಇತ್ತೀಚಿನ ಕೆಲವರ ಹೇಳಿಕೆಗಳು ಸದುದ್ದೇಶದಿಂದ ಕೂಡಿಲ್ಲ. ಅವು ರಾಜಕೀಯ ಪ್ರೇರಿತ, ರಿಯಲ್ ಎಸ್ಟೇಟ್ ಹಿತಾಸಕ್ತಿಯಿಂದ ಕೂಡಿವೆ. ಧಾರವಾಡದ ಜನಸಾಮಾನ್ಯರ ದೈನಂದಿನ ಆಡಳಿತ ಅನುಕೂಲಕ್ಕಾಗಿ ಮತ್ತು ನಗರದ ತ್ವರಿತ ಅಭಿವೃದ್ಧಿಗಾಗಿ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕೇಬೇಕು. ಈ ಕುರಿತು ಕಳೆದ ಐದು ವರ್ಷಗಳ ಸಾವಿರಾರು ಪುಟಗಳ ದಾಖಲೆ, ಸಹಿಸಂಗ್ರಹ, ಇತ್ಯಾದಿ ಹೋರಾಟ ವೇದಿಕೆ ಬಳಿ ಇವೆ. ಆದ್ದರಿಂದ ಮೆಟ್ರೋಪಾಲಿಟಿನ್ ಸಿಟಿ ಹೆಸರಿನಲ್ಲಿ ಕೆಲವರು ಎರಡು ನಗರಗಳ ಜನತೆಯ ದಾರಿ ತಪ್ಪಿಸುವ ಯತ್ನ ಮಾಡುತ್ತಿರುವುದನ್ನು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಖಂಡಿಸುತ್ತದೆ ಎಂದು ಹೇಳಿದ್ದಾರೆ.