ಸಾರಾಂಶ
ಹುಬ್ಬಳ್ಳಿ:
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ (ಎಂಜಿಎನ್‌ವಿವೈ) ವಿಧಾನಸಭಾ ಕ್ಷೇತ್ರವಾರು ಕ್ರಿಯಾಯೋಜನೆಗೆ ಅನುದಾನ ಹಂಚಿಕೆಗೆ ಹು- ಧಾ ಮಹಾನಗರ ಪಾಲಿಕೆ ಸದಸ್ಯರೆಲ್ಲರೂ ಆಕ್ಷೇಪ ವ್ಯಕ್ತಪಡಿಸಿದರು. ಈ ಮಧ್ಯೆ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾದ ₹25 ಕೋಟಿ ಅನುದಾನಕ್ಕೆ ಸಂಬಂಧಿಸಿದ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಮೇಯರ್ ರಾಮಪ್ಪ ಬಡಿಗೇರ ಆದೇಶಿಸಿದರು.ಮಂಗಳವಾರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಯಿತು. ಅಲ್ಲದೇ, ಹೆಚ್ಚುವರಿಯಾಗಿ ₹87 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದರು.ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಎರಡನೇ ಹಂತದಲ್ಲಿ ಬಿಡುಗಡೆಯಾದ ₹127.50 ಕೋಟಿ ಅನುದಾನದಲ್ಲಿ ಮಹಾನಗರ ಪಾಲಿಕೆ ಸದಸ್ಯರಿಗೆ ಮೊದಲ ಆದ್ಯತೆ ನೀಡಬೇಕು. ಶಾಸಕರ ಹೆಚ್ಚುವರಿ ಹಣವನ್ನು ಕ್ಷೇತ್ರವಾರು ಹಂಚಿಕೆ ಮಾಡಬೇಕು ಎಂದು ಸದಸ್ಯರಾದ ವೀರಣ್ಣ ಸವಡಿ, ಈರೇಶ ಅಂಚಟಗೇರಿ, ಸಂಥೀಲಕುಮಾರ, ಪ್ರತಿಪಕ್ಷ ನಾಯಕ ರಾಜಶೇಖರ ಕಮತಿ, ಕವಿತಾ ಕಬ್ಬೇರ, ರಾಜಣ್ಣ ಕೊರವಿ, ನಜೀರ ಅಹ್ಮದ ಹೊನ್ಯಾಳ ಆಗ್ರಹಿಸಿದರು.ಅನುದಾನವನ್ನು ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಿ ಕ್ರಿಯಾಯೋಜನೆ ಸಿದ್ಧಪಡಿಸಿ, ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಿದ್ದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಈಗಾಗಲೇ ಠರಾವು ಮಾಡಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆ ಠರಾವನ್ನು ತಿದ್ದುಪಡಿ ಮಾಡಲು ಬರುವುದಿಲ್ಲ. ಈ ಬಗ್ಗೆ ಚರ್ಚೆ ಅನವಶ್ಯಕ ಎಂದರು. ಆದರೂ ಚರ್ಚೆ ಮಾತ್ರ ಮುಂದುವರಿಯಿತು.ಸದಸ್ಯ ಉಮೇಶಗೌಡ ಕೌಜಗೇರಿ, ಈ ಹಿಂದಿನ ಸಭೆಯಲ್ಲಿ ಆದೇಶ ಮಾಡಿದಂತೆ ಸದಸ್ಯರ ಕಾರ್ಯಗಳ ಪಟ್ಟಿ ಲಗತ್ತಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕಿತ್ತು. ಹಲವು ಸದಸ್ಯರು ಇನ್ನೂ ಕಾರ್ಯಯೋಜನೆಗಳ ಪಟ್ಟಿ ಕೊಟ್ಟಿಲ್ಲ. ಹೀಗಿದ್ದರೂ ಪ್ರಸ್ತಾವ ಸಲ್ಲಿಸಿದ್ದು ಏಕೆ ಎಂದು ಪ್ರಶ್ನಿಸಿದರು.ಈರೇಶ ಅಂಚಟಗೇರಿ ಮಾತನಾಡಿ, ಯೋಜನೆ ಅಡಿ ಹಂಚಿಕೆಯಾದ ಅನುದಾನಕ್ಕೆ ಸಂಬಂಧಿಸಿದಂತೆ ಪಾಲಿಕೆಯಿಂದ ಟೆಂಡರ್ ಕರೆಯದಿದ್ದರೆ ಸದಸ್ಯರ ವಂತಿಕೆ ಕೊಡುವುದಿಲ್ಲ ಎಂದು ಈ ಹಿಂದೆ ಠರಾವು ಮಾಡಲಾಗಿದೆ. ಆ ಅನುದಾನದಲ್ಲಿ ಮಹಾನಗರ ಪಾಲಿಕೆ ಸದಸ್ಯರಿಗೆ ಮೊದಲು ತಲಾ ₹ 1 ಕೋಟಿ ಹಂಚಿಕೆ ಮಾಡಿ ನಂತರ ಉಳಿದ ಹಣವನ್ನು ವಿಧಾನಸಭಾ ಕ್ಷೇತ್ರವಾರು ನೀಡಬೇಕು. ಅಲ್ಲದೆ, ಪಾಲಿಕೆಯಿಂದ ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದರು.ವೀರಣ್ಣ ಸವಡಿ, ಹೆಚ್ಚುವರಿ ₹25 ಕೋಟಿ ಅನುದಾನಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಜತೆಗೆ ಈ ಹಿಂದಿನ ಅನುದಾನಕ್ಕೆ ಸಂಬಂಧಿಸಿದಂತೆ 87 ಸದಸ್ಯರ ಕಾರ್ಯ ಯೋಜನೆಗಳ ಪಟ್ಟಿ ಪಡೆದು, ಇದರ ಜತೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದರು.ಇದರಿಂದ ಗೊಂದಲಕ್ಕೊಳಗಾದ ಮೇಯರ್ ನಿಯಮದ ಬಗ್ಗೆ ಕಾನೂನು ಸಲಹೆಗಾರರು ತಿಳಿಸಲು ಸೂಚಿಸಿದರು. ಆಗ ಕಾನೂನು ಕೋಶದ ಅಧಿಕಾರಿ, ಒಮ್ಮೆ ಕೈಗೊಂಡ ಠರಾವಿನ ವಿಷಯದ ಮೇಲೆ 3 ತಿಂಗಳ ವರೆಗೆ ಚರ್ಚೆ ಮಾಡತಕ್ಕದ್ದಲ್ಲ, ತಿದ್ದುಪಡಿಯೂ ಮಾಡತಕ್ಕದ್ದಲ್ಲ ಎಂದು ಓದಿ ಹೇಳಿದರು. ಬಳಿಕ ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ಜಟಾಪಟಿ ಮುಂದುವರಿದು ಗೊಂದಲ ಉಂಟಾಯಿತು. ಈ ಹಂತದಲ್ಲಿ ಮೇಯರ್ 10 ನಿಮಿಷ ಸಭೆ ಮುಂದೂಡಿದರು. ಸಭೆ ಆರಂಭವಾದ ಬಳಿಕ ಮೇಯರ್ ರಾಮಪ್ಪ ಬಡಿಗೇರ, ಸಂಸದರ ₹ 25 ಕೋಟಿ ಅನುದಾನ ಬಳಕೆಗೆ ಹಾಗೂ ಪಾಲಿಕೆಯ ಹೆಚ್ಚುವರಿ ₹ 87 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ ಮಾಡಿದರು.
ಸಭೆ ಮೊಟಕು:ಶೂನ್ಯ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲಿ ಭಾಗವಹಿಸಲು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಸಾಮಾನ್ಯ ಸಭೆಯ ಅನುಮತಿ ಪಡೆದು ಮಧ್ಯೆದಲ್ಲೇ ತೆರಳಿದರು. ಅವರ ಹಿಂದೆ ಕೆಲ ಅಧಿಕಾರಿಗಳು ಸಹ ನಿರ್ಗಮಿಸಿದರು. ಇದಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನೂ ಕೆಲಸ ಸಭೆ ಮುಂದೂಡಲು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಮೇಯರ್ ಸಭೆಯನ್ನು ಮುಂದೂಡಿದರು.