ಪ್ರತಿವರ್ಷ 12 ವಿದ್ಯಾರ್ಥಿಗಳಿಗೆ ತಲಾ ₹5 ಸಾವಿರದಂತೆ ಪ್ರೋತ್ಸಾಹಧನ ನೀಡಿ ಅವರ ಶೈಕ್ಷಣಿಕ ಪ್ರಗತಿಗೆ ಬೆಂಬಲ ನೀಡುತ್ತಿರುವುದು ಅಭಿನಂದನೀಯ ಕಾರ್ಯ

ಹೊಸಪೇಟೆ: ಸಮಾಜದಲ್ಲಿನ ಅಸಹಾಯಕ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿರುವ ಮೈಕೊ ಕನ್ನಡ ಬಳಗದ ಸಾಮಾಜಿಕ ಬದ್ಧತೆ ಮಾದರಿಯಾಗಿದೆ. ಪ್ರತಿವರ್ಷ 12 ವಿದ್ಯಾರ್ಥಿಗಳಿಗೆ ತಲಾ ₹5 ಸಾವಿರದಂತೆ ಪ್ರೋತ್ಸಾಹಧನ ನೀಡಿ ಅವರ ಶೈಕ್ಷಣಿಕ ಪ್ರಗತಿಗೆ ಬೆಂಬಲ ನೀಡುತ್ತಿರುವುದು ಅಭಿನಂದನೀಯ ಕಾರ್ಯ ಎಂದು ಹಂಪಿ ಕನ್ನಡ ವಿವಿ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ ತಿಳಿಸಿದರು.

ಹಂಪಿ ಕನ್ನಡ ವಿವಿ ಪಂಪ ಸಭಾಂಗಣದಲ್ಲಿ ಮೈಕೊ ಕನ್ನಡ ಬಳಗ ಬಾಷ್ ಬಿಡದಿ ಘಟಕ, ರಾಮನಗರ ಜಿಲ್ಲೆ ಮತ್ತು ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರೋತ್ಸಾಹಧನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಅವರು ಮಾತನಾಡಿದರು.

ಮೈಕೊ ಕನ್ನಡ ಬಳಗವು ಕಳೆದ ಹಲವು ವರ್ಷಗಳಿಂದ ನಿಸ್ವಾರ್ಥವಾಗಿ ಕನ್ನಡದ ಸೇವೆ ಸಲ್ಲಿಸುತ್ತಿದ್ದು, ಪ್ರತಿ ವರ್ಷ ವಿವಿಧ ಕ್ಷೇತ್ರಗಳ ವಿದ್ವಾಂಸರನ್ನು ಗುರುತಿಸಿ ಕಿಟೆಲ್ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಪ್ರೋತ್ಸಾಹಧನವನ್ನು ಸಂಸ್ಥೆಯ ಸದಸ್ಯರು ಶ್ರಮಪಟ್ಟು ಸಂಪಾದಿಸಿದ ಹಣದಿಂದ ನೀಡಲಾಗುತ್ತಿರುವುದರಿಂದ ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಂಡು ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಮೈಕೊ ಕನ್ನಡ ಬಳಗ, ಬಾಷ್, ಬಿಡದಿ ಘಟಕದ ಅಧ್ಯಕ್ಷ ಕೆ.ಎಸ್. ಶ್ರೀರಾಮತೀರ್ಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೈಕೊ ಕನ್ನಡ ಬಳಗವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಧನ ನೀಡುವ ಮೂಲಕ ಅವರನ್ನು ಉತ್ತೇಜಿಸುತ್ತಿರುವಂತೆ ಸರ್ಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳೂ ಸಹ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ನೆರವಿಗೆ ಮುಂದಾಗಬೇಕು ಎಂದು ಹೇಳಿದರು.

ಮೈಕೋ ಕನ್ನಡ ಬಳಗದ ಉಪಾಧ್ಯಕ್ಷ ಚಲುವೇಗೌಡ ಎಸ್.ಎನ್., ಪ್ರಧಾನ ಕಾರ್ಯದರ್ಶಿ ಕೆ. ಬಸವರಾಜು ಮಾತನಾಡಿದರು. ಕುಲಸಚಿವ ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿ ಇದ್ದರು. ಪ್ರೋತ್ಸಾಹಧನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸಲಾಯಿತು. ಶೈಕ್ಷಣಿಕ ಸಂಶೋಧನಾ ಅಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ.ಎಸ್.ವೈ. ಸೋಮಶೇಖರ್ ಸ್ವಾಗತಿಸಿದರು. ಸಹಾಯಕ ಕುಲಸಚಿವ ಜಿ.ಶಿವಕುಮಾರ್ ವಂದಿಸಿದರು. ವಿದ್ಯಾರ್ಥಿನಿ ಅಂಬುಜ ನಿರೂಪಿಸಿದರು.