ಮೈಕ್ರೋ ಫೈನಾನ್ಸ್‌ ಸಾಲ: ಪ್ರಾಣಕ್ಕೆ ಶೂಲ

| Published : Jan 25 2025, 01:01 AM IST

ಸಾರಾಂಶ

ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಿ ನೆಪದಲ್ಲಿ ಸಾಲಗಾರರಿಗೆ ನಿತ್ಯ ಕಿರುಕುಳ ನೀಡುತ್ತಿದ್ದು, ಸಾಲದ ಶೂಲಕ್ಕೆ ಜನ ಹೈರಾಣಾಗಿದ್ದಾರೆ. ಫೈನಾನ್ಸ್‌ ಸಿಬ್ಬಂದಿ ಕಿರುಕುಳ ಜನರ ಪ್ರಾಣಕ್ಕೆ ಕುತ್ತು ತಂದಿದೆ. ಸಾಲ ವಸೂಲಿಗಾಗಿ ಸಾರ್ವಜನಿಕರ ಎದುರೇ ಮರ್ಯಾದೆ ತೆಗೆಯುವುದು, ಮನೆಯಲ್ಲಿನ ಸದಸ್ಯರನ್ನೂ ಹೊರಹಾಕಿ ಮನೆ ಜಪ್ತಿ ಮಾಡುವಂತಹ ಅಮಾನವೀಯ ಘಟನೆಗಳು ಬೆಳಗಾವಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಿ ನೆಪದಲ್ಲಿ ಸಾಲಗಾರರಿಗೆ ನಿತ್ಯ ಕಿರುಕುಳ ನೀಡುತ್ತಿದ್ದು, ಸಾಲದ ಶೂಲಕ್ಕೆ ಜನ ಹೈರಾಣಾಗಿದ್ದಾರೆ. ಫೈನಾನ್ಸ್‌ ಸಿಬ್ಬಂದಿ ಕಿರುಕುಳ ಜನರ ಪ್ರಾಣಕ್ಕೆ ಕುತ್ತು ತಂದಿದೆ. ಸಾಲ ವಸೂಲಿಗಾಗಿ ಸಾರ್ವಜನಿಕರ ಎದುರೇ ಮರ್ಯಾದೆ ತೆಗೆಯುವುದು, ಮನೆಯಲ್ಲಿನ ಸದಸ್ಯರನ್ನೂ ಹೊರಹಾಕಿ ಮನೆ ಜಪ್ತಿ ಮಾಡುವಂತಹ ಅಮಾನವೀಯ ಘಟನೆಗಳು ಬೆಳಗಾವಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ.

ಸಬ್ಸಿಡಿ ಹೆಸರಿನಲ್ಲೂ ಜನತೆಗೆ ಪಂಗನಾಮ ಹಾಕಲಾಗುತ್ತಿದೆ. ಫೈನಾನ್ಸ್‌ ಸಾಲದ ಸುಳಿಗೆ ಸಿಲುಕಿದ್ದ ಮಹಿಳೆಯೊಬ್ಬರು ಕಾಕತಿ ಬಳಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆನ್ನಲ್ಲಿಯೇ ಖಾಸಗಿ ಫೈನಾನ್ಸ್‌ ಸಿಬ್ಬಂದಿ ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಬಾಣಂತಿ, ಹಸುಗೂಸನ್ನು ಲೆಕ್ಕಿಸದೇ ಮನೆಯವರನ್ನು ಹೊರಹಾಕಿ ಮನೆ ಜಪ್ತಿ ಮಾಡಿರುವ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಮೂಡಲಗಿ ತಾಲೂಕಿನ ನಾಗನೂರ, ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದಲ್ಲಿಯೂ ಬಾಣಂತಿಯರನ್ನು ಹೊರಹಾಕಿ ಮನೆಗಳಿಗೆ ಬೀಗ ಜಡಿದು ಹರಾಜು ಪ್ರಕ್ರಿಯೆಗೆ ಫೈನಾನ್ಸ್‌ ಸಿಬ್ಬಂದಿ ಮುಂದಾಗಿದ್ದರು.

ಬೆಳಗಾವಿ ತಾಲೂಕಿನ ಹಾಲಬಾವಿ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್‌ವೊಂದು ₹100 ಕೋಟಿಗೂ ಹೆಚ್ಚು ಹಣ ವಂಚಿಸಿರುವ ಪ್ರಕರಣ ಬಹಿರಂಗವಾಗಿದೆ. ಫೈನಾನ್ಸ್‌ಗಳಲ್ಲಿ ಸಾಲ ಪಡೆದಿರುವ 15 ಸಾವಿರಕ್ಕೂ ಅಧಿಕ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಮನಾಪುರದಲ್ಲಿ ನಾಲ್ವರು ಮಹರ್ಷಿ ವಾಲ್ಮೀಕಿ ಮಹಿಳಾ ಸ್ವ-ಸಹಾಯ ಸಂಘ ರಚಿಸಿ ಬೆಳಗಾವಿ, ಬೈಲಹೊಂಗಲ, ಗೋಕಾಕ, ಯಮಕನಮರಡಿ ಸೇರಿದಂತೆ ಹತ್ತಾರು ಹಳ್ಳಿಗಳ 7,000ಕ್ಕೂ ಹೆಚ್ಚು ಮಹಿಳೆಯರ ಆಧಾರ್, ರೇಷನ್ ಕಾರ್ಡ್, ಫೋಟೋ ದಾಖಲೆ ಪಡೆದು ₹200 ಕೋಟಿ ಸಾಲ ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ಸಾಲದಲ್ಲಿ ಅರ್ಧ ಮಾತ್ರ ಮಹಿಳೆಯರಿಗೆ ಕೊಟ್ಟಿರುವ ಆರೋಪವಿದೆ. ಉಳಿದ ಹಣವನ್ನು ಮಹಿಳೆಯರಿಗೆ ನೀಡಿಲ್ಲ.ಹಣ ಪಡೆದ ಆರೋಪಿಗಳು ತಲೆ ಮರೆಸಿಕೊಂಡಾಗ ಸಾಲ ನೀಡಿದ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಮಹಿಳೆಯರ ಮನೆಗೆ ಬಂದು ಕಿರುಕುಳ ನೀಡಿದರು. ಇದರಿಂದಾಗಿ ಕಂಗಾಲಾದ ಮಹಿಳೆಯರು ಆರೋಪಿಗಳ ವಿರುದ್ಧ ಜ.6ರಂದು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಂಧನಕ್ಕೆ ಒಳಗಾದ ಒಂದೇ ದಿನದಲ್ಲಿ ಆರೋಪಿಗಳು ಜಾಮೀನು ಮೇಲೆ ಹೊರಬಂದಿದ್ದಾರೆ. ಆದರೆ, ಸಾಲದ ಹೊರೆಹೊತ್ತ ಮಹಿಳೆಯರಿಗೆ ಮಾತ್ರ ತಲೆಮರೆಸಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಿತಿ ಮೀರಿದ ದೌರ್ಜನ್ಯ: ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಸಾಲ ವಸೂಲಾತಿ ವೇಳೆ ನಿಯಮಾವಳಿ ಮೀರುವಂತಿಲ್ಲ. ಆದರೆ, ಅವರ ದೌರ್ಜನ್ಯ ಮಿತಿ ಮೀರಿದೆ. ಪೊಲೀಸರಿಗೆ ದೂರು ನೀಡಿದರೂ ನ್ಯಾಯ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಖಾಸಗಿ ಫೈನಾನ್ಸ್‌ ಸಂಸ್ಥೆಗಳಲ್ಲಿ ಸಾಲ ಪಡೆದುಕೊಳ್ಳಲು ಹೆಚ್ಚಿನ ದಾಖಲೆ ಒದಗಿಸುವ ಅಗತ್ಯ ಇಲ್ಲ. ಆಧಾರ್‌ ಕಾರ್ಡ್, ಸಹಿ ನೀಡಿದರೆ ಸಾಕು ₹5 ಸಾವಿರದಿಂದ ₹3 ಲಕ್ಷದವರೆಗೆ ಸಾಲ ತಕ್ಷಣವೇ ಲಭ್ಯವಾಗುತ್ತದೆ. ಹೆಚ್ಚಿನ ಬಡ್ಡಿಯಾದರೂ ತೊಂದರೆ ಇಲ್ಲ ಎಂದು ಸಾಲ ಪಡೆದು ಬಳಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಬಡವರ ಅಗತ್ಯವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಸಾಲ ಕೊಡುತ್ತಿರುವ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು, ನಂತರ ಸಾಲ ಮರುಪಾವತಿಗೆ ಕಿರುಕುಳ ನೀಡುತ್ತಾರೆ. ಹೀಗೆ ಫೈನಾನ್ಸ್‌ ಸಾಲದ ಶೂಲಕ್ಕೆ ಬಡಜನತೆ ಸಿಲುಕಿ ನರಳುತ್ತಿದ್ದಾರೆ.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆರ್‌ಬಿಐ ಮತ್ತು ಕೇಂದ್ರ ಹಣಕಾಸು ಇಲಾಖೆಯ ಕಾರ್ಪೋರೇಟ್‌ ವ್ಯವಹಾರಗಳ ಇಲಾಖೆಯಲ್ಲಿ ನೋಂದಣಿಯಾಗಿರುತ್ತವೆ. ಅವುಗಳ ಮೇಲೆ ನೇರವಾಗಿ ಕಡಿವಾಣ ಹಾಕಲು ರಾಜ್ಯ ಸರ್ಕಾರಕ್ಕೆ ಅವಕಾಶ ಇದೆಯೇ ಎಂಬುವುದನ್ನು ಸರ್ಕಾರವೇ ಪರಿಶೀಲನೆ ಮಾಡಬೇಕಿದೆ. ಸಾಲ ವಸೂಲಿ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗುತ್ತಿದೆ. ಇದು ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿದೆ. ಕೆಲವು ಕಂಪನಿಗಳ ವಸೂಲಿ ಏಜೆಂಟ್‌ರನ್ನು ಮಧ್ಯರಾತ್ರಿ ಸಾಲ ಪಡೆದವರ ಮನೆ ಬಾಗಿಲು ಬಡಿಯುತ್ತಿದ್ದಾರೆ. ಮನೆ ಬಾಗಿಲಿಗೆ ಹೋಗಿ ಗಲಾಟೆ ಮಾಡಿ ನೆರೆ ಹೊರೆಯವರ ಮುಂದೆ ಮರ್ಯಾದೆ ತೆಗೆಯುತ್ತಾರೆ. ಸಬ್ಸಿಡಿ ಸಾಲ ಎಂದು ಆಸೆ ಹುಟ್ಟಿಸಿ ಹಲವು ಕಡೆ ಮುಗಿಬಿದ್ದು ಸಾಲ ನೀಡಿದ ಸಂಸ್ಥೆಗಳು ವಸೂಲಿ ವೇಳೆ ಯಮಕಿಂಕರನಂತೆ ಕಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.

ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಕ್ರಮ: ಬೆಳಗಾವಿ: ಜಿಲ್ಲೆಯಲ್ಲಿನ ಎಲ್ಲ ಲೇವಾದೇವಿ, ಗಿರಿವಿ, ಹಣಕಾಸು ಸಂಸ್ಥೆಗಳು ಕರ್ನಾಟಕ ಲೇವಾದೇವಿದಾರರ ಅಧಿನಿಯಮ ೧೯೬೧ರ ಪ್ರಕರಣ ೨೮(೧) ರಂತೆ ಹಾಗೂ ಅಧಿಕ ಬಡ್ಡಿ ವಿಧಿಸುವ ಕರ್ನಾಟಕ ನಿಷೇಧ ಕಾಯ್ದೆ ೨೦೦೪ ರನ್ವಯ ಲೇವಾದೇವಿ, ಗಿರವಿ, ಹಣಕಾಸು ಸಂಸ್ಥೆಗಳು ಭದ್ರತಾ ಸಹಿತ ಸಾಲಗಳಿಗೆ ಶೇ.೧೪ಕ್ಕೆ ಮೀರದಂತೆ ಹಾಗೂ ಭದ್ರತಾ ರಹಿತ ಸಾಲಗಳಿಗೆ ಶೇ.೧೬ಕ್ಕೆ ಮೀರದಂತೆ ಗರಿಷ್ಠ ಬಡ್ಡಿದರ ನಿಗದಿಗೆ ಮಾತ್ರ ಅವಕಾಶವಿದೆ. ಈ ಬಗ್ಗೆ ತಮ್ಮ ಸಂಸ್ಥೆಗಳ ಒಳಗಡೆ ಮತ್ತು ಹೊರಗಡೆ ಕಾಣುವಂತೆ ಕಡ್ಡಾಯವಾಗಿ ಫಲಕ ಪ್ರದರ್ಶಿಸಬೇಕು. ನಮೂದಿಸಿದ ದರಕ್ಕಿಂತ ಹೆಚ್ಚಿನ ಬಡ್ಡಿದರ ವಸೂಲಿ ಮಾಡಿದ್ದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮವಹಿಸಿ ಅಂತಹ ಸಂಸ್ಥೆಗಳ ಪರವಾನಗಿ ರದ್ದು ಮಾಡಲಾಗುವುದು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಅಂತಹ ಸಂಸ್ಥೆಗಳ ವಿರುದ್ಧ ಸಹಕಾರ ಇಲಾಖೆಗೆ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ರವೀಂದ್ರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಫೈನಾನ್ಸ್‌ ಸಂಸ್ಥೆಗಳು ಸಾಲ ವಸೂಲಾತಿಗಾಗಿ ಸಾಲಪಡೆದವರಿಗೆ ಮೊದಲು ಎರಡ್ಮೂರ ಬಾರಿ ನೊಟೀಸ್‌ ಜಾರಿ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಏಕಾಏಕಿಯಾಗಿ ಸಾಲಗಾರರ ಆಸ್ತಿಗಳನ್ನು ಜಪ್ತಿ ಮಾಡಲಾಗದು. ನ್ಯಾಯಾಲಯ ಆದೇಶ ನೀಡಿದ್ದ ಪಕ್ಷದಲ್ಲಿ ಆಸ್ತಿ ಜಪ್ತಿ ಮಾಡಲು ಅವಕಾಶ ಇದೆ.

-ಸುಮಿತಕುಮಾರ ಅಗಸಗಿ, ವಕೀಲರು