ಸಾರಾಂಶ
ಮೃತ ನರಸಿಂಹಯ್ಯ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ತಿಂಗಳಿಗೆ 15 ಸಾವಿರ ರು. ಸಾಲದ ಕಂತುಗಳನ್ನು ಕಟ್ಟುತ್ತಿದ್ದು, ಹಗಲು- ರಾತ್ರಿ ಎನ್ನದೇ ಫೈನಾನ್ಸ್ ನವರು ಮನೆ ಬಳಿ ಬಂದು ಹಣಕ್ಕಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಮೃತ ನರಸಿಂಹಯ್ಯ ಒಟ್ಟು 3.5 ಲಕ್ಷ ರು. ಸಾಲ ಮಾಡಿಕೊಂಡಿದ್ದು, ಧರ್ಮಸ್ಥಳ ಸಂಘ, ಆಶೀರ್ವಾದ, ಗ್ರಾಮೀಣ ಕೂಟ, ಎಲ್ಎನ್ ಟಿ, ಸ್ಪಂದನ, ಸಮಸ್ತ, ನವ ಚೈತನ್ಯ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಮೈಕ್ರೋ ಫೈನಾನ್ಸ್ ಹಾವಳಿಗೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕಸಬಾ ಹೋಬಳಿಯ ದೊಡ್ಡ ಕುರುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ನಾಗಸಂದ್ರ ಗ್ರಾಮದಲ್ಲಿ ನಡೆದಿದೆ.ಎನ್.ಆರ್ ನರಸಿಂಹಯ್ಯ (58) ಆತ್ಮಹತ್ಯೆಗೆ ಶರಣಾದ ವೃದ್ಧ ರೈತರಾಗಿದ್ದು, ಇವರು ಕೆಲ ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡಿಕೊಂಡಿದ್ದರು. ಕಂತುಗಳ ರೂಪದಲ್ಲಿ ಹಣವನ್ನೂ ಕಟ್ಟುತ್ತಿದ್ದು, ಸಾಲ ವಸೂಲಾತಿಗೆ ಮೈಕ್ರೋ ಫೈನಾನ್ಸ್ ನವರು ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು ಎಂದು ಪತ್ನಿ ಪ್ರಭಾವತಿ ತಿಳಿಸಿದ್ದಾರೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿ ಸಂಸಾರ ನಡೆಸುತ್ತಿದ್ದ ನರಸಿಂಹಯ್ಯ, ಫೈನಾನ್ಸ್ ಕಿರುಕುಳಕ್ಕೆ ಆಟೋವನ್ನೂ ಸಹ ಎರಡು ಮೂರು ಬಾರಿ ಇಟ್ಟು ಹಣ ಕಟ್ಟಿದ್ದಾರೆ. ಸೋಮವಾರ ಎಲ್ ಎನ್ ಟಿ ಮತ್ತು ನವಚೈತನ್ಯ ಫೈನಾನ್ಸ್ ಗಳಿಗೆ ಕಟ್ಟಲು ಹಣವಿಲ್ಲದ ಕಾರಣ ಬೇರೆಡೆ ಸಾಲ ಪಡೆದುಕೊಂಡು ಬರುತ್ತೇನೆ ಎಂದು ತಿಳಿಸಿ, ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೊರಹೋಗಿದ್ದು, ಮಧ್ಯಾಹ್ನವಾದರೂ ಮನೆಗೆ ಬಾರದ ಪತಿಯನ್ನು ಹುಡುಕುತ್ತಾ ಜಮೀನಿನ ಕಡೆ ಬಂದ ಪತ್ನಿಗೆ ಗಂಡ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದಿದೆ.ಮೃತ ನರಸಿಂಹಯ್ಯ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ತಿಂಗಳಿಗೆ 15 ಸಾವಿರ ರು. ಸಾಲದ ಕಂತುಗಳನ್ನು ಕಟ್ಟುತ್ತಿದ್ದು, ಹಗಲು- ರಾತ್ರಿ ಎನ್ನದೇ ಫೈನಾನ್ಸ್ ನವರು ಮನೆ ಬಳಿ ಬಂದು ಹಣಕ್ಕಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಮೃತ ನರಸಿಂಹಯ್ಯ ಒಟ್ಟು 3.5 ಲಕ್ಷ ರು. ಸಾಲ ಮಾಡಿಕೊಂಡಿದ್ದು, ಧರ್ಮಸ್ಥಳ ಸಂಘ, ಆಶೀರ್ವಾದ, ಗ್ರಾಮೀಣ ಕೂಟ, ಎಲ್ಎನ್ ಟಿ, ಸ್ಪಂದನ, ಸಮಸ್ತ, ನವ ಚೈತನ್ಯ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪಿಎಸ್ಐ ರಮೇಶ್ ಗುಗ್ಗರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.