ಸಾರಾಂಶ
ಸಂಸ್ಥೆಗಳ ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ನಿಯಮ ರೂಪಿಸಬೇಕು. ಈಗಾಗಲೇ ವಸೂಲಿ ಮಾಡಿರುವ ಬಡ್ಡಿ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದಲೇ ಕಡಿಮೆ ಬಡ್ಡಿಗೆ ಸಾಲ ಪಡೆದು, ಅದನ್ನು ಬಡವರಿಗೆ ನೀಡಿ ಹೆಚ್ಚು ಬಡ್ಡಿ ವಸೂಲಿ ಮಾಡುವುದನ್ನು ತಡೆಯಬೇಕು ಎಂದರು.
ಕನ್ನಡಪ್ರಭ ವಾರ್ತೆ ರಾಮನಗರ
ಮೈಕ್ರೊ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಿ ನೆಪದಲ್ಲಿ ಮಹಿಳೆಯರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಸಂತ್ರಸ್ತ ಮಹಿಳೆಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ನಗರದ ರೈಲು ನಿಲ್ದಾಣದ ಬಳಿ ಜಮಾಯಿಸಿದ ಮಹಿಳೆಯರು, ಮೈಕ್ರೊ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿ ಸಮೀಪ ಇರುವ ಪ್ರತಿಭಟನಾ ಸ್ಥಳದವರೆಗೆ ಮೆರವಣಿಗೆಯಲ್ಲಿ ಸಾಗಿ ಧರಣಿ ಕುಳಿತರು.
ಮಹಿಳೆಯರಿಗೆ ಬಲವಂತವಾಗಿ ಸಾಲ ನೀಡಿ ಬಡ್ಡಿ ಕಟ್ಟುವಂತೆ ಕಿರುಕುಳ ನೀಡುವ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕನಿಷ್ಠ ಮಾಸಿಕ ಆದಾಯ ಇಲ್ಲದ ಕುಟುಂಬಗಳು ಮೈಕ್ರೊ ಫೈನಾನ್ಸ್ ಸಂಸ್ಥೆಗಳು ಒಳಗೊಂಡಂತೆ, ಇತರೆ ರಾಷ್ಟ್ರೀಕೃತ ಮತ್ತು ಸಹಕಾರ ಸಂಘಗಳಿಂದ ಪಡೆದಿರುವ ಸಾಲ ಮನ್ನಾಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ಇತ್ತೀಚೆಗೆ ಹೆಚ್ಚಾಗಿರುವ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕೆ ಕಾನೂನು ಜಾರಿಗೊಳಿಸಬೇಕು. ಸಂಸ್ಥೆಗಳಿಂದ ಕಿರುಕುಳಕ್ಕೆ ಒಳಗಾಗುವ ಕುಟುಂಬಗಳಿಗೆ ರಕ್ಷಣೆ ಒದಗಿಸಬೇಕು. ಸರ್ಕಾರವೇ ಮಹಿಳಾ ಸ್ವ ಸಹಾಯ ಸಂಘ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿಯ ಸಬ್ಸಿಡಿ ಸಹಿತ ಸಾಲ ನೀಡಬೇಕು ಎಂದು ಒತ್ತಾಯಿಸಿದರು.
ಸಂಸ್ಥೆಗಳ ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ನಿಯಮ ರೂಪಿಸಬೇಕು. ಈಗಾಗಲೇ ವಸೂಲಿ ಮಾಡಿರುವ ಬಡ್ಡಿ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದಲೇ ಕಡಿಮೆ ಬಡ್ಡಿಗೆ ಸಾಲ ಪಡೆದು, ಅದನ್ನು ಬಡವರಿಗೆ ನೀಡಿ ಹೆಚ್ಚು ಬಡ್ಡಿ ವಸೂಲಿ ಮಾಡುವುದನ್ನು ತಡೆಯಬೇಕು ಎಂದರು.ಸ್ವಯಂ ಉದ್ಯೋಗ ಮಾಡುವ ಮಹಿಳೆಯರಿಗೆ ಕನಿಷ್ಠ 5 ಲಕ್ಷದವರೆಗೆ ಬ್ಯಾಂಕ್‌ಗಳಲ್ಲಿ ಸಾಲ ನೀಡಲು ಸರಳ ನಿಯಮಗಳನ್ನು ರೂಪಿಸಿ ಜಾರಿಗೊಳಿಸಬೇಕು. ಈ ಕುರಿತು ಜಿಲ್ಲಾಧಿಕಾರಿ ಹೆಚ್ಚು ಗಮನ ಹರಿಸಬೇಕು. ಸಂಸ್ಥೆಗಳ ಸಂತ್ರಸ್ತರ ಜೊತೆ ಸಭೆ ನಡೆಸಿ, ಕಠಿಣ ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ಸುಶೀಲಾ, ಜಿಲ್ಲಾ ಸಂಚಾಲಕಿ ನಸೀಮಾ ಖಾನಂ, ಕಾರ್ಯದರ್ಶಿ ತಕ್ಸಿನಾ ಬಾನು, ಸೀಮಾ, ಸಮೀನಾ, ಸಿಐಟಿಯು ಜಿಲ್ಲಾ ಅಧ್ಯಕ್ಷ ಬಿ.ಬಿ. ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.