ಶಿಗ್ಗಾಂವಿ ತಾಲೂಕಿನ ಕುನ್ನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ವಿತರಣೆಯ ವೇಳೆ ವಿದ್ಯರ್ಥಿಗಳಿಗೆ ನೀಡಲು ಸಾಕಷ್ಟು ಅನ್ನ ಇಲ್ಲದಿರುವುದು, ಅರ್ಧ ಬೆಂದ ಹಾಗೂ ಹೊತ್ತಿದ ಅನ್ನ ನೀಡಿದ ಘಟನೆ ಬೆಳಕಿಗೆ ಬಂದಿದೆ. ಊಟಕ್ಕಾಗಿ ತಟ್ಟೆ ಹಿಡಿದು ನಿಂತಿದ್ದ ಹಲವು ವಿದ್ಯಾರ್ಥಿಗಳಿಗೆ ಅನ್ನವೇ ಸಿಕ್ಕಿಲ್ಲ.
ಶಿಗ್ಗಾಂವಿ: ತಾಲೂಕಿನ ಕುನ್ನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ವಿತರಣೆಯ ವೇಳೆ ವಿದ್ಯರ್ಥಿಗಳಿಗೆ ನೀಡಲು ಸಾಕಷ್ಟು ಅನ್ನ ಇಲ್ಲದಿರುವುದು, ಅರ್ಧ ಬೆಂದ ಹಾಗೂ ಹೊತ್ತಿದ ಅನ್ನ ನೀಡಿದ ಘಟನೆ ಬೆಳಕಿಗೆ ಬಂದಿದೆ. ಊಟಕ್ಕಾಗಿ ತಟ್ಟೆ ಹಿಡಿದು ನಿಂತಿದ್ದ ಹಲವು ವಿದ್ಯಾರ್ಥಿಗಳಿಗೆ ಅನ್ನವೇ ಸಿಕ್ಕಿಲ್ಲ.
ಗ್ರಾಮಸ್ಥರು ಶಾಲೆಗೆ ಆಗಮಿಸಿ ಈ ಕುರಿತು ಪ್ರಶ್ನಿಸಿದ್ದಾರೆ. ಅಲ್ಲದೆ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಬಿಸಿಯೂಟ ಯೋಜನೆಯ ಉದ್ದೇಶ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಿ, ಅವರ ಆರೋಗ್ಯ ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡುವುದಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ಸಾಕಷ್ಟು ಆಹಾರ ಒದಗಿಸಲು ವಿಫಲವಾಗಿರುವುದು ಹಾಗೂ ಅರ್ಧ ಬೆಂದ ಅನ್ನ, ತಳಹಿಡಿದ ಹೊತ್ತಿದ ಅನ್ನ ನೀಡುವುದು ಯೋಜನೆಯ ಸಮರ್ಪಕ ಅನುಷ್ಠಾನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬಿಸಿಯೂಟ ಯೋಜನಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ, ವಿದ್ಯಾರ್ಥಿಗಳಿಗೆ ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ಗುಣಮಟ್ಟದ ಬಿಸಿಯೂಟ ಒದಗಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ರವಿ ಎನ್. ಹೊರಟ್ಟಿ, ಮಹಮ್ಮದ್‌ಸಾಬ್ ಹುಬ್ಬಳ್ಳಿ, ಮಹಾವೀರ ಶೆಟ್ಟಪ್ಪನವರ, ಯಮನಪ್ಪ ಮರಶಿದ್ದಣ್ಣವರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಆಕ್ರೋಶಕ್ಕೆ ಕಾರಣ: ಶಾಲೆಯಲ್ಲಿ ಬಿಸಿಯೂಟ ಅವ್ಯವಸ್ಥೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಸಿಯೂಟ ಯೋಜನಾಧಿಕಾರಿ ಎರಡು ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವ್ಯವಸ್ಥೆಯಿಂದ ಮಕ್ಕಳು ಹಸಿವಿನಿಂದ ಬಳಲುವಂತಾಗಿದೆ ಎಂದು ಅಂಜುಮನ್ ಸಮಿತಿ ಮಾಜಿ ಅಧ್ಯಕ್ಷ ಆಷ್ಪಾಕಲೀ ಎ. ಮತ್ತೇಖಾನ ಹೇಳಿದರು.
ಆಕಸ್ಮಿಕವಾಗಿ ಈ ರೀತಿ ಅವ್ಯವಸ್ಥೆ ಆಗಿದ್ದು, ಮುಂಬರುವ ದಿನಗಳಲ್ಲಿ ಯಾವುದೆ ರೀತಿಯಾಗಿ ಅವ್ಯವಸ್ಥೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕುನ್ನೂರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಆರ್. ಲಮಾಣಿ ಹೇಳಿದರು.ಬಿಸಿಯೂಟ ಅವ್ಯವಸ್ಥೆ ಕುರಿತು ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಶಾಲೆಗೆ ಹೋಗಿ ತನಿಖೆ ಮಾಡಿ, ಬಿಸಿಯೂಟದಲ್ಲಿ ನಿಷ್ಕಾಳಜಿ ತೋರದಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಎಚ್ಚರಿಕೆ ನೀಡಲಾಗುವುದು ಎಂದು ಬಿಸಿಯೂಟ ಯೋಜನಾಧಿಕಾರಿ ಮಂಜುನಾಥ ಸಾಳೋಂಕೆ ಹೇಳಿದರು.