ಮದುವೆಯಾದ ಬಳಿಕ ಆಂಧ್ರಪ್ರದೇಶದ ಹಾಲಹರವಿಗೆ ತೆರಳಿದ ಆದೆಮ್ಮ, ತಮ್ಮ ತಾಯಿಯಿಂದ ಬಳವಳಿಯಾಗಿ ಬಂದ ಸೂಲಗಿತ್ತಿ ಸೇವೆ ಅಲ್ಲಿಯೂ ಮುಂದುವರಿಸಿದರು
ಮಂಜುನಾಥ ಕೆ.ಎಂ. ಬಳ್ಳಾರಿ
ಒಂದು ಜೀವ ಈ ಭೂಮಿಗೆ ಬರುವುದು ಕುಟುಂಬವೊಂದಕ್ಕೆ ಸಂಭ್ರಮದ ಕ್ಷಣ. ಆದರೆ, ಆ ಜೀವದ ಆಗಮನದ ಕ್ಷಣದಲ್ಲಿ ತಾಯಿಯ ನೋವಿನ ಜತೆಗೆ ಮಗುವಿನ ಸುರಕ್ಷತೆಯ ಹೊಣೆ ಹೊತ್ತು ನಿಂತಿದ್ದವರು ಹಂದಿಹಾಳು ಗ್ರಾಮದ ಸೂಲಗಿತ್ತಿ ಎಚ್.ಆದೆಮ್ಮ.ಸಾವಿರಾರು ಕುಟುಂಬಗಳ ಪಾಲಿಗೆ ಆಪದ್ಬಾಂಧವೆಯಾಗಿದ್ದ ಆದೆಮ್ಮ, ಐದು ಸಾವಿರಕ್ಕೂ ಅಧಿಕ ಸುರಕ್ಷಿತ ಹೆರಿಗೆ ಮಾಡಿಸಿ ಅಷ್ಟೇ ಸಂಖ್ಯೆಯ ಹೊಸ ಜೀವಗಳ ಆಗಮನಕ್ಕೆ ಸಾಕ್ಷಿಯಾಗಿದ್ದ ಅಪರೂಪದ ಸೇವಾ ಜೀವನಕ್ಕೆ ಗುರುವಾರ ತೆರೆ ಎಳೆದಿದ್ದಾರೆ.
ಬಳ್ಳಾರಿ ತಾಲೂಕಿನ ಹಂದಿಹಾಳು ಗ್ರಾಮದವರಾದ ಎಚ್.ಆದೆಮ್ಮ (95), ವಯೋಸಹಜ ಕಾಯಿಲೆಯಿಂದ ನಗರದಲ್ಲಿ ಗುರುವಾರ ನಿಧನರಾದರು. ಐದು ಪುತ್ರಿಯರು, ನಾಲ್ವರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸೆ.25ರಂದು ಶುಕ್ರವಾರ ಮಧ್ಯಾಹ್ನ ನಗರದ ಹರಿಶ್ಚಂದ್ರ ಘಾಟ್‌ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ತಾಯಿಯಿಂದ ಸೂಲಗಿತ್ತಿ ಸೇವೆ ಬಳವಳಿ:
ಮದುವೆಯಾದ ಬಳಿಕ ಆಂಧ್ರಪ್ರದೇಶದ ಹಾಲಹರವಿಗೆ ತೆರಳಿದ ಆದೆಮ್ಮ, ತಮ್ಮ ತಾಯಿಯಿಂದ ಬಳವಳಿಯಾಗಿ ಬಂದ ಸೂಲಗಿತ್ತಿ ಸೇವೆ ಅಲ್ಲಿಯೂ ಮುಂದುವರಿಸಿದರು. ನಂತರ ಬಳ್ಳಾರಿಯಲ್ಲಿ ನೆಲೆಸಿದರೂ ಈ ಕಾಯಕ ಬಿಡಲಿಲ್ಲ. ಗಡಿ ಭಾಗದ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಅನೇಕ ಕುಟುಂಬಗಳಿಗೆ ಆದೆಮ್ಮ ಅವರೇ ನಂಬಿಕೆಯ ಹೆರಿಗೆ ಸಹಾಯಕಿಯಾಗಿದ್ದರು.ಆದೆಮ್ಮ ಅವರ ಸೇವೆಯ ಖ್ಯಾತಿ ಎಷ್ಟರಮಟ್ಟಿಗೆ ಹರಡಿತ್ತೆಂದರೆ ಆಂಧ್ರಪ್ರದೇಶದ ಆದೋನಿ ಸರ್ಕಾರಿ ಆಸ್ಪತ್ರೆಯಲ್ಲಿ ದಾದಿಯಾಗಿ ನೇಮಕಗೊಳ್ಳುವ ಅವಕಾಶವೂ ದೊರೆಯಿತು. ಆದರೆ ಸರ್ಕಾರಿ ಕೆಲಸ ತೊರೆದು ಬಳ್ಳಾರಿಗೆ ಮರಳಿದ ಅವರು, ಸೂಲಗಿತ್ತಿ ಸೇವೆ ವೃತ್ತಿಗಿಂತಲೂ ಸೇವಾ ಕಾರ್ಯವೆಂದೇ ಪರಿಗಣಿಸಿ ಮುಂದುವರಿಸಿದರು.
ವೈದ್ಯಕೀಯ ಸೌಲಭ್ಯಗಳು ಇಂದಿನಷ್ಟು ವ್ಯಾಪಕವಾಗಿರದ ಕಾಲದಲ್ಲಿ ಆದೆಮ್ಮ ಅವರ ಅನುಭವವೇ ಅನೇಕ ಗರ್ಭಿಣಿಯರಿಗೆ ಭರವಸೆಯಾಗಿತ್ತು. ಗರ್ಭಿಣಿಯ ನಾಡಿಮಿಡಿತ, ದೇಹದ ಸ್ಥಿತಿ ಹಾಗೂ ಹೆರಿಗೆಯ ಲಕ್ಷಣ ಗಮನಿಸಿ ಯಾವಾಗ ಹೆರಿಗೆ ಆಗಬಹುದು ಎಂಬುದನ್ನು ಅಂದಾಜಿಸುತ್ತಿದ್ದರು.ಮೂರು ತಲೆಮಾರುಗಳ ನೆನಪು: ಆದೆಮ್ಮ ಅವರ ಸೇವೆಯ ಮತ್ತೊಂದು ವಿಶೇಷವೆಂದರೆ ಒಂದೇ ಕುಟುಂಬದ ಮೂರು ತಲೆಮಾರುಗಳಿಗೂ ಅವರು ಸುರಕ್ಷಿತ ಹೆರಿಗೆ ಮಾಡಿಸಿದ ಸಂದರ್ಭಗಳಿವೆ. ಅಜ್ಜಿಯ ಹೆರಿಗೆ ಮಾಡಿಸಿದ ಕೈಗಳೇ, ಬಳಿಕ ಅವರ ಮಗಳು ಹಾಗೂ ಮೊಮ್ಮಗಳ ಹೆರಿಗೆಗೂ ನೆರವಾದ ಉದಾಹರಣೆಗಳು ಅವರ ಸೇವೆಯ ಮೇಲಿನ ಜನರ ವಿಶ್ವಾಸಕ್ಕೆ ಸಾಕ್ಷಿಯಾಗಿವೆ.
ಐದು ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ್ದರೂ ಒಂದೇ ಒಂದು ಬಾರಿಯೂ ಜೀವಕ್ಕೆ ಕುತ್ತು ಬರದಂತೆ ಹೆರಿಗೆ ಮಾಡಿಸಿದ ಹೆಗ್ಗಳಿಕೆ ತಮ್ಮದಾಗಿದೆ ಎಂದು ಕುಟುಂಬಸ್ಥರು ಹಾಗೂ ಅವರನ್ನು ಬಲ್ಲವರು ಸ್ಮರಿಸುತ್ತಾರೆ.ಆದೆಮ್ಮ ಅವರ ಅಪರೂಪದ ಸೇವೆ ಗುರುತಿಸಿ 2014ರಲ್ಲಿ ಸುವರ್ಣ ನ್ಯೂಸ್ ಸುದ್ದಿ ಸಂಸ್ಥೆಯ ವತಿಯಿಂದ ಸುವರ್ಣ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬಳಿಕ ಜಿಲ್ಲೆಯ ಹತ್ತಾರು ಸಂಘ-ಸಂಸ್ಥೆಗಳು ಅವರ ಸೇವೆ ಗುರುತಿಸಿ ಸತ್ಕರಿಸಿವೆ. ವೈದ್ಯಕೀಯ ಸೌಲಭ್ಯಗಳು ಕೈಗೆಟುಕದ ಕಾಲದಲ್ಲಿ ತಮ್ಮ ಅನುಭವ, ಧೈರ್ಯ ಹಾಗೂ ಸೇವಾ ಮನೋಭಾವದಿಂದ ಸಾವಿರಾರು ತಾಯಂದಿರಿಗೆ ನೆರವಾದ ಆದೆಮ್ಮ, ಇಂದು ಇಲ್ಲ. ಆದರೆ ಅವರ ಕೈಗಳಲ್ಲಿ ಸುರಕ್ಷಿತವಾಗಿ ಈ ಲೋಕಕ್ಕೆ ಬಂದ ಸಾವಿರಾರು ಜೀವಗಳೇ ಅವರ ಬದುಕಿನ ಅಳಿಸಲಾಗದ ಹೆಜ್ಜೆ ಗುರುತು.
ಐದು ಸಾವಿರಕ್ಕೂ ಅಧಿಕ ಮನೆಗಳಲ್ಲಿ ಮಗುವಿನ ಅಳುವಿನೊಂದಿಗೆ ಮೂಡಿದ ಸಂತೋಷದ ಹಿಂದೆ ಹಂದಿಹಾಳು ಗ್ರಾಮದ ಈ ಹಿರಿಯ ಸೂಲಗಿತ್ತಿಯ ಅನುಭವದ ಸ್ಪರ್ಶವಿತ್ತು. ಆದೆಮ್ಮ ಅವರ ಅಗಲಿಕೆ ಒಂದು ಕುಟುಂಬದ ನಷ್ಟ ಮಾತ್ರವಲ್ಲ; ಒಂದು ಕಾಲಘಟ್ಟದ ಅಪರೂಪದ ಜನಪದ ವೈದ್ಯಕೀಯ ಜ್ಞಾನ ಮತ್ತು ಸೇವಾ ಪರಂಪರೆಯ ಅಂತ್ಯವೂ ಹೌದು.