ವಿದ್ಯಾರ್ಥಿಗಳು, ರೈತರಿಗೆ ಹಾಲಿನ ಡೈರಿ ಪ್ರವಾಸ : ಅವಕಾಶ ಕಲ್ಪಿಸುತ್ತಿದೆ ಬಮೂಲ್‌

| Published : Jan 09 2025, 01:48 AM IST / Updated: Jan 09 2025, 09:22 AM IST

ಸಾರಾಂಶ

ವಿದ್ಯಾರ್ಥಿಗಳು ಮತ್ತು ರೈತರು ಇನ್ಮುಂದೆ ಹಾಲಿನ ಡೈರಿಗೆ ಭೇಟಿ ನೀಡಿ ಅಲ್ಲಿನ ಉತ್ಪನ್ನಗಳನ ಉತ್ಪಾದನೆಯ ವಿಧಾನವನ್ನು ವೀಕ್ಷಿಸಲು ಬಮೂಲ್‌ ಅವಕಾಶ ನೀಡಿದೆ.

ಸಂಪತ್‌ ತರೀಕೆರೆ

  ಬೆಂಗಳೂರು : ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ರೈತರಿಗೆ ಹಾಲು ಸಂಸ್ಕರಣೆ, ಪ್ಯಾಕಿಂಗ್‌, ಹಾಲಿನ ಉತ್ಪನ್ನಗಳ ತಯಾರಿಕೆ ಇತ್ಯಾದಿ ಪ್ರಕ್ರಿಯೆಗಳನ್ನು ವೀಕ್ಷಿಸಲು ಮತ್ತು ಕಡಿಮೆ ವೆಚ್ಚದಲ್ಲಿ ಹಾಲಿನ ಉತ್ಪನ್ನಗಳನ್ನು ಸವಿಯಲು ಬಮೂಲ್‌ ಅವಕಾಶ ಕಲ್ಪಿಸುತ್ತಿದೆ.

ಪ್ರತಿನಿತ್ಯ ಬಮೂಲ್‌ ಮುಖ್ಯ ಡೇರಿಯಲ್ಲಿ 10 ಲಕ್ಷ ಲೀಟರ್ ಹಾಲು ಮತ್ತು ದಕ್ಷಿಣ ಭಾರತದಲ್ಲೇ ಅತ್ಯುತ್ತಮ ಹಾಲು ಶೀತಲೀಕರಣ ಘಟಕವಾದ ಕನಕಪುರ ತಾಲೂಕಿನ ಶಿವನಹಳ್ಳಿ ಘಟಕದಲ್ಲಿ 5 ಲಕ್ಷ ಲೀಟರ್‌ ಹಾಲನ್ನು ಸಂಸ್ಕರಿಸಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತಿದೆ. ಬಮೂಲ್‌ ಹಾಲು ಘಟಕಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳು ಮತ್ತು ಸಂದರ್ಶಕರು ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನಾ ಪ್ರಕ್ರಿಯೆಗಳನ್ನು ಹತ್ತಿರದಲ್ಲೇ ನಿಂತು ನೋಡುವ ಅವಕಾಶವನ್ನು ಬಮೂಲ್‌ ಒದಗಿಸುತ್ತಿದೆ.

ಡೇರಿಯ ಸಿಬ್ಬಂದಿ ಕೆನೆ ರಹಿತ ಹಾಲಿನ ಪುಡಿ, ಪಿಜ್ಜಾ, ಬರ್ಗರ್‌ ಇತ್ಯಾದಿಗಳಿಗೆ ಬಳಸುವ ಚೀಸ್‌, ಮೂರಿಂದ ಆರು ತಿಂಗಳು ಕೆಡದಂತೆ ಸಾಮಾನ್ಯ ವಾತಾವರಣದಲ್ಲಿ ಇಡಬಹುದಾದ ಗುಡ್‌ಲೈಫ್‌ ಟೆಟ್ರಾಪ್ಯಾಕ್‌, ತುಪ್ಪ, ಬೆಣ್ಣೆ, ಮೊಸರು, ಹಾಲು ಇತ್ಯಾದಿ ಸಂಸ್ಕರಿಸಿ ಪ್ಯಾಕಿಂಗ್‌ ಮಾಡುವ ವಿಭಾಗಗಳು, ಹಾಲು, ಮೊಸರು ಪ್ಯಾಕಿಂಗ್‌, ಪೇಡಾ, ಮೈಸೂರು ಪಾಕ್‌, ಪನ್ನೀರ್‌, ಲಸ್ಸಿ, ತುಪ್ಪಾ, ಬೆಣ್ಣೆ ಹೇಗೆ ತಯಾರು ಮಾಡಲಾಗುತ್ತದೆ ಎಂಬುದರ ಪರಿಚಯ ಮಾಡಿಸಲಿದ್ದಾರೆ.ನಂದಿನಿ ಉತ್ಪನ್ನ ಸವಿಯಿರಿ!

ಬಮೂಲ್‌ ಮುಖ್ಯಡೇರಿ ಅಥವಾ ಕನಕಪುರದ ಹಾಲು ಶೀತಲೀಕರಣ ಘಟಕಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳು ಅಥವಾ ಸಂದರ್ಶಕರು ಹಾಲು ಘಟಕದಲ್ಲಿ ಸಂಸ್ಕರಣೆ, ಪ್ಯಾಕಿಂಗ್‌ ಮತ್ತು ಉತ್ಪನ್ನ ವಿಭಾಗಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಜೊತೆಗೆ ನಿಗದಿತ ಮೊತ್ತ ಪಾವತಿಸಿ ಹಾಲಿನ ಉತ್ಪನ್ನಗಳ ಸಿಹಿಯನ್ನು ಸವಿಯಬಹುದು.ಮೊದಲೇ ಅನುಮತಿ ಕಡ್ಡಾಯ

ಡೇರಿಗೆ ಭೇಟಿ ಮಾಡುವ ಮೊದಲು ವ್ಯವಸ್ಥಾಪಕ ನಿರ್ದೇಶಕರಿಂದ (ಎಂಡಿ) ಇ-ಮೇಲ್‌ ಮೂಲಕ ಅನುಮತಿ ಪಡೆಯಬೇಕು. ಪ್ರತಿ ದಿನ ಬೆಳಗ್ಗೆ 9.30ರಿಂದ ಸಂಜೆ 5.30ರೊಳಗೆ ಘಟಕಕ್ಕೆ ಭೇಟಿ ನೀಡಲು ಅವಕಾಶ ಸಿಗಲಿದೆ. ಸಂದರ್ಶಕರು ಊಟ ಮತ್ತು ಹಾಲಿನ ಉತ್ಪನ್ನಗಳನ್ನು ಪಡೆಯಲು ಒಂದೇ ಪೇಮೆಂಟ್‌ನಲ್ಲಿ ಮುಂಗಡವಾಗಿ ಹಣವನ್ನು ಸಂದಾಯ ಮಾಡಬೇಕು. ಇ-ಮೇಲ್‌ ವಿಳಾಸ: bamulmd@gmail.com ಸಂಪರ್ಕಿಸಬಹುದು.

ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಜೊತೆಗೆ ನಂದಿನಿ ಉತ್ಪನ್ನಗಳನ್ನು ಕಡಿಮೆ ಹಣಕ್ಕೆ ಕೊಟ್ಟು ಎಲ್ಲರಿಗೂ ನಂದಿನಿ ಬ್ರ್ಯಾಂಡ್‌ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ.

-ಎಚ್‌.ಪಿ.ರಾಜಕುಮಾರ್‌, ಅಧ್ಯಕ್ಷ, ಬಮೂಲ್‌.