ಮನ್ಮುಲ್ ಆಡಳಿತ ಮಂಡಳಿಯನ್ನು ರೈತರ ಹಿತದೃಷ್ಟಿಯಿಂದ ಸೂಪರ್‌ಸೀಡ್ ಮಾಡುವ ಪ್ರಶ್ನೆಯೇ ಇಲ್ಲ. ಹಾಲು ಉತ್ಪಾದಕರ ಹಿತಾಸಕ್ತಿ ಹಾಗೂ ಸಂಸ್ಥೆ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ವಿಪಕ್ಷದವರಿಗೆ ಸದ್ಯ ಯಾವುದೇ ಜನಪರ ಕೆಲಸವಿಲ್ಲ. ರಾಜಕೀಯ ಅಸ್ತಿತ್ವಕ್ಕಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮನ್ಮುನ ಹಾಲಿನಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಪೊಲೀಸರು ಎಂಟು ಮಂದಿ ಬಂಧಿಸಿದ್ದು, ತನಿಖೆ ಪಾರದರ್ಶಕವಾಗಿ ನಡೆಯುತ್ತಿರುವಾಗಲೂ ಕೆಲಸವಿಲ್ಲದ ಮೈತ್ರಿ ಪಕ್ಷದವರು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ತೀವ್ರ ವಾಗ್ದಾಳಿ ನಡೆಸಿದರು.

ಸಮೀಪದ ಬೊಪ್ಪಸಮುದ್ರ, ಸುಣ್ಣದದೊಡ್ಡಿ, ತೊರೆಬೊಮ್ಮನಹಳ್ಳಿ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮನ್ಮುಲ್‌ನಲ್ಲಿ ತಪ್ಪು ಮಾಡಿದವರು ಯಾರೇ ಆಗಿದ್ದರೂ ಕಾನೂನು ಕ್ರಮ ಎದುರಿಸಲೇಬೇಕು. ಪ್ರಕರಣ ಸಂಬಂಧ 8 ಮಂದಿ ಬಂಧಿಸಿ ತನಿಖೆ ಮುಂದುವರಿದಿದೆ. ಆದರೆ, ವಿಪಕ್ಷಗಳು ರಾಜಕೀಯವಾಗಿ ಬಳಸಿಕೊಂಡು ಪ್ರತಿಭಟನೆ ನಡೆಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮನ್ಮುಲ್ ಆಡಳಿತ ಮಂಡಳಿಯನ್ನು ರೈತರ ಹಿತದೃಷ್ಟಿಯಿಂದ ಸೂಪರ್‌ಸೀಡ್ ಮಾಡುವ ಪ್ರಶ್ನೆಯೇ ಇಲ್ಲ. ಹಾಲು ಉತ್ಪಾದಕರ ಹಿತಾಸಕ್ತಿ ಹಾಗೂ ಸಂಸ್ಥೆ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ವಿಪಕ್ಷದವರಿಗೆ ಸದ್ಯ ಯಾವುದೇ ಜನಪರ ಕೆಲಸವಿಲ್ಲ. ರಾಜಕೀಯ ಅಸ್ತಿತ್ವಕ್ಕಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಎಸ್‌ಐಆರ್ ವಿಚಾರದಲ್ಲಿ ಬಡವನಾಗಲಿ, ಶ್ರೀಮಂತನಾಗಲಿ ಯಾರೊಬ್ಬರೂ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಸದ್ಯದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಪಕ್ಷ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಸಲು ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.

ಈ ವೇಳೆ ಮನ್ಮುಲ್ ನಿರ್ದೇಶಕ ಎ.ಎಸ್.ರಾಜೀವ್, ಜಿಪಂ ಮಾಜಿ ಅಧ್ಯಕ್ಷ ಬಿ. ಬಸವರಾಜು, ಕಾಂಗ್ರೆಸ್ ಯುವ ಘಟಕದ ಬ್ಲಾಕ್ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಮುಖಂಡರಾದ ಪೂಜಾರಿ ಮಹೇಶ್, ಪಿ.ಬಿ. ಕೃಷ್ಣಕುಮಾರ್, ಈರೇಗೌಡ, ಶಿವಕುಮಾರ್, ನಾಗೇಶ್, ಬಸವರಾಜು, ಕೆಂಚೇಗೌಡ, ವಿದ್ಯಾಶ್ರೀ, ಅನುಷಾ, ಗಾಯತ್ರಿ, ಮೀನಾಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.