ಸಾರಾಂಶ
ರಾಮನಗರ: ಹಾಲಿನ ದರ ಹೆಚ್ಚಳ ಮಾಡುವಂತೆ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.
ತಾಲೂಕಿನ ಮಾಯಗಾನಹಳ್ಳಿ ಡೇರಿ ಕಟ್ಟಡ ಉದ್ಘಾಟನೆ ಮತ್ತು ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಮಾಡುವಂತೆ ಉತ್ಪಾದಕರ ಒತ್ತಡವಿದೆ. ರೈತರ ಕೂಗನ್ನು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಎಂದು ಹೇಳಿದರು.
ನಾನೊಬ್ಬ ರೈತನ ಮಗನಾಗಿದ್ದು ಸಂಕಷ್ಟವನ್ನು ಅರಿತುಕೊಂಡಿದ್ದೇನೆ. ನಾನು ಜಿಪಂ ಅಧ್ಯಕ್ಷನಾಗಿದ್ದ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮನಗರದ ಕಾರ್ಯಕ್ರಮದಲ್ಲಿ ಹಾಲಿನ ಬೆಲೆ ಲೀಟರ್‌ಗೆ 2 ರು. ಹೆಚ್ಚಳ ಮಾಡಿದ್ದರು. ಹಾಲಿನ ದರ ಲೀಟರ್ ಒಂದಕ್ಕೆ 5 ರು. ಹೆಚ್ಚಳ ಮಾಡುವಂತೆ ನಿಮ್ಮ ಪರವಾಗಿ ಸದನದಲ್ಲಿ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜಿಲ್ಲೆಯ ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈ ಉದ್ಯಮ ಸಹಕಾರಿಯಾಗಿದೆ. ಅಮೂಲ್ ಮತ್ತು ಕೆಎಂಎಫ್ ಹಾಲಿನ ಮಾರುಕಟ್ಟೆ ನಡುವೆ ಪೈಪೋಟಿಯಿದೆ. ಆದರೆ ಅಮೂಲ್ ಗಿಂತ ಕೆಎಂಎಫ್ ನದು ಗುಣಮಟ್ಟದ ಹಾಲಾಗಿದೆ. ಹಾಗಾಗಿ ನಮ್ಮ ರಾಜ್ಯದ ಹಾಲು ಬೇರೆ ರಾಜ್ಯದಲ್ಲಿ ಹೆಚ್ಚು ಮಾರಾಟವಾಗಬೇಕು. ಇದಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಮಾಯಗಾನಹಳ್ಳಿ ಎಂಪಿಸಿಎಸ್ ಸಂಘ 1963ರಲ್ಲಿ ಆರಂಭವಾಗಿದ್ದು ತಾಲೂಕಿನಲ್ಲಿ ಸ್ಥಾಪನೆಯಾದ ಪ್ರಥಮ ಸಂಘ ಎಂಬ ಹೆಗ್ಗಳಿಕೆಯಿದೆ. ಸಹಕಾರ ಕ್ಷೇತ್ರದಲ್ಲಿ ನಿರಂತರವಾಗಿ ಪಿ.ನಾಗರಾಜು ಅವರ ಪರಿಶ್ರಮ ಸಾರ್ಥಕವಾಗಿದೆ ಎಂಬುದಕ್ಕೆ ಅವರು ಕಾರ್ಯಗತಗೊಳಿಸಿರುವ ಕಾರ್ಯಕ್ರಮಗಳೇ ಸಾಕ್ಷಿಯಾಗಿದೆ. ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸಂಘಕ್ಕೆ 10 ಲಕ್ಷ ರು. ಅನುದಾನ ನೀಡುತ್ತೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಕೆಎಂಎಫ್ ಮಾಜಿ ಅಧ್ಯಕ್ಷ ಹಾಗೂ ಬಮೂಲ್ ನಿರ್ದೇಶಕ ಪಿ.ನಾಗರಾಜು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡುವುದನ್ನು ಜನರು ಸ್ವೀಕರಿಸುತ್ತಾರೆ. ಎಲ್ಲರಿಗೂ ಒಳ್ಳೆಯದಾಗಬೇಕೆಂಬ ಮಹದಾಸೆಯಿಂದ ಕಟ್ಟಡವನ್ನು ಮಾದರಿಯಾಗಿ ನಿರ್ಮಾಣ ಮಾಡಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಿದ ಸಮಯದಲ್ಲಿ ಹಾಲು ಉತ್ಪಾದಕರು ಮತ್ತು ಹಾಲು ಮಾರಾಟಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈಗಾಗಲೇ ಕೆಎಂಎಫ್ ಹಾಲಿಗೆ ಮುಂಬೈ ಮತ್ತು ದೆಹಲಿಯಲ್ಲಿ ಹಾಲಿನ ಮಾರುಕಟ್ಟೆ ಅಭಿವೃದ್ಧಿಯಾಗಿದ್ದು, ಹಾಲಿನ ಬೆಲೆ ಹೆಚ್ಚಳವಾದರೆ ರೈತರ ಆರ್ಥಿಕ ಜೀವನ ಮಟ್ಟ ವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಂದು ಸಾವಿರ ಕೋಟಿ ವೆಚ್ಚದಲ್ಲಿ ಮೆಗಾಡೈರಿ ಹಾಲು ಉತ್ಪನ್ನಗಳ ತಯಾರಿಕಾ ಘಟಕ ಮತ್ತು ಪೌಡರ್ ಪ್ಲಾಂಟ್ ನಿರ್ಮಾಣವಾಗಿದೆ. ಪಶು ಆಹಾರದಲ್ಲಿ ಫಾರ್ಮುಲಾ ಬದಲಾಯಿಸಿ ನಂದಿನಿ ಗೋಲ್ಡ್ ಮಾಡಿದ ಪರಿಣಾಮ ಸಮಸ್ಯೆ ಸುಧಾರಣೆಯಾಗಿ ಪಶು ಆಹಾರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಯಿತು. ಅಲ್ಲದೆ ಒಕ್ಕೂಟಕ್ಕೆ ಗುಣಮಟ್ಟದ ಹಾಲು ಸರಬರಾಜು ಆಗುವ ಜೊತೆಗೆ ಹಾಲಿನ ಉತ್ಪಾದನೆ ಸಹ ಹೆಚ್ಚಳವಾಗಿ ಕ್ಷೀರ ಕ್ರಾಂತಿಯಾಯಿತು.
ಹೆಣ್ಣು ಕರುಗಳ ಜನನಕ್ಕೆ ಸೆಕ್ಸೆವನ್ ಯೋಜನೆಗೆ 2016ರಲ್ಲಿ ರಾಮನಗರದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಿ 900 ರು. ವೆಚ್ಚದ ಸೆಮೆನ್ ಅನ್ನು 100 ರು.ಗಳಿಗೆ ನೀಡಲಾಗುತ್ತಿದೆ. ಇದರಿಂದ ಹೆಣ್ಣು ಕರುಗಳೇ ಹುಟ್ಟುವುದರಿಂದ ಉತ್ಪಾದಕರ ಕುಟುಂಬಗಳಿಗೆ ನೆರವಾಯಿತು ಎಂದು ನಾಗರಾಜು ತಿಳಿಸಿದರು.
ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಸಹಕಾರ ಕ್ಷೇತ್ರಕ್ಕೆ ಪಿ.ನಾಗರಾಜುರವರ ಕೊಡುಗೆಗಳು ಅಪಾರ. ಹಾಲು ಉತ್ಪಾದಕರನ್ನು ಪ್ರಗತಿಗೆ ಕೊಂಡೊಯ್ಯಲು ಅವರಲ್ಲಿದ್ದ ಬದ್ದತೆ ಮತ್ತು ಇಚ್ಚಾಶಕ್ತಿಯೆ ಪ್ರಮುಖವಾಗಿದೆ. ಅವರ ಮನವಿಯ ಪರಿಣಾಮ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಎರಡು ಬಾರಿ ಹಾಲಿನ ದರ ಹೆಚ್ಚಳ ಮಾಡಿದರು. ಪ್ರತಿಕ್ಷಣ ರೈತಾಪಿ ವರ್ಗದ ಬಗ್ಗೆ ಚಿಂತನೆ ಮಾಡುವ ದೂರದೃಷ್ಟಿತ್ವ ವ್ಯಕ್ತಿತ್ವ ಹೊಂದಿರುವ ನಾಗರಾಜು ಕಾರ್ಯ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಬೆಳ್ಳಿಹಬ್ಬದ ನೆನಪಿಗಾಗಿ ಹಾಲು ಉತ್ಪಾದಕರಿಗೆ ಹಾಲಿನ ಬಕೆಟ್ ಗಳನ್ನು ಸಂಘದ ವತಿಯಿಂದ ವಿತರಣೆ ಮಾಡಲಾಯಿತು. ಸಂಘಕ್ಕೆ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ಮೂವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಚ್.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಮಾಯಗಾನಹಳ್ಳಿ ಗ್ರಾಪಂ ಅಧ್ಯಕ್ಷೆ ಗೀತಾಪರಮಶಿವಯ್ಯ ಉಪಾಧ್ಯಕ್ಷ ವೆಂಕಟೇಶ್ ಮೂರ್ತಿ, ಮಾಜಿ ಅಧ್ಯಕ್ಷ ಎಂ.ಎಚ್.ರಂಜಿತ್, ಮಾಜಿ ಸದಸ್ಯ ಶ್ರೀಧರ್, ಮುಖಂಡರಾದ ಶಿವಕುಮಾರಸ್ವಾಮಿ, ರೇವಣ್ಣ, ರಾಮಣ್ಣ, ಬೆಂಗಳೂರು ಒಕ್ಕೂಟದ ಡಾ.ಶಿವಶಂಕರ್, ರಾಮನಗರ ಶಿಬಿರ ವ್ಯವಸ್ಥಾಪಕ ಡಾ.ಗಣೇಶ್, ವಿಸ್ತರಣಾಧಿಕಾರಿಗಳಾದ ಉಮೇಶ್, ಕವಿತಾ ಸಂಘದ ಸಿಇಓ ಶಿವನಂಜಯ್ಯ (ಮಂಜು) ಉಪಾಧ್ಯಕ್ಷ ಪುಟ್ಟರಾಜು, ನಿರ್ದೇಶಕರಾದ ದಾಸಣ್ಣ, ರಾಜು, ಬಸವರಾಜು, ಗೋವಿಂದಯ್ಯ, ಮಹದೇವಯ್ಯ, ಗೌರಮ್ಮ, ವೆಂಕಟಪ್ಪ ಉಪಸ್ಥಿತರಿದ್ದರು.
ರಾಮನಗರ ಕ್ಷೇತ್ರದ ಬಡವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಮತ್ತು ಪ್ರತಿನಿತ್ಯ ಸಾರ್ವಜನಿಕರ ಕೈಗೆ ಸಿಗುವ ಹೆಚ್.ಎ.ಇಕ್ಬಾಲ್ ಹುಸೇನ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಜನರು ಒಳ್ಳೆಯ ಕೆಲಸ ಮಾಡಿದ್ದಾರೆ. ನಿಮ್ಮಗಳ ನಿರೀಕ್ಷೆಯಂತೆ ನಿಮ್ಮ ಸಮಸ್ಯೆಗಳ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಶಾಸಕರು ಶ್ರಮಿಸುತ್ತಿದ್ದಾರೆ. ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಸಾಕಷ್ಟು ನೆರವು ನೀಡುತ್ತಿದ್ದು, ಕ್ಷೇತ್ರದಲ್ಲಿ ಪಕ್ಷ ಬೇಧ ಮರೆತು ಜನರ ಸಹಾಯಕ್ಕೆ ಶ್ರಮಿಸುತ್ತಿದ್ದಾರೆ.
- ಪಿ.ನಾಗರಾಜು, ಮಾಜಿ ಅಧ್ಯಕ್ಷರು, ಕೆಎಂಎಫ್