ಹಾಲಿನ ಬೆಲೆ ಹೆಚ್ಚಳ ಮತ್ತೊಂದು ಬರೆ

| Published : Jun 27 2024, 01:39 AM IST / Updated: Jun 27 2024, 05:24 AM IST

Nandini Milk Price Hike 2

ಸಾರಾಂಶ

ಹಾಲಿನ ದರ ಹೆಚ್ಚಳಕ್ಕೆ ಪ್ಯಾಕೆಟ್‍ಗೆ 50 ಎಂಎಲ್ ಹೆಚ್ಚು ಹಾಲು ಕೊಡಲಾಗುತ್ತಿದೆ ಎಂಬ ಸಬೂಬನ್ನು ರಾಜ್ಯ ಸರ್ಕಾರ ಕೊಡುತ್ತಿದೆ. ಹಾಲು ಹೆಚ್ಚು ನೀಡಲು ಯಾರಾದರೂ ನಿಮಗೆ ಮನವಿಪತ್ರ ಕೊಟ್ಟಿದ್ದರೇ ಎಂದು ಪರಿಷತ್ತಿನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

 ಬೆಂಗಳೂರು : ಹಾಲಿನ ದರ ಹೆಚ್ಚಳಕ್ಕೆ ಪ್ಯಾಕೆಟ್‍ಗೆ 50 ಎಂಎಲ್ ಹೆಚ್ಚು ಹಾಲು ಕೊಡಲಾಗುತ್ತಿದೆ ಎಂಬ ಸಬೂಬನ್ನು ರಾಜ್ಯ ಸರ್ಕಾರ ಕೊಡುತ್ತಿದೆ. ಹಾಲು ಹೆಚ್ಚು ನೀಡಲು ಯಾರಾದರೂ ನಿಮಗೆ ಮನವಿಪತ್ರ ಕೊಟ್ಟಿದ್ದರೇ ಎಂದು ಪರಿಷತ್ತಿನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ಬೆಲೆ ಹೆಚ್ಚಳ ಮತ್ತೊಂದು ಬರೆ ಹಾಕುವ ಕೆಲಸ. ಈ ರೀತಿ ಮನೆಮುರುಕ ನಿರ್ಧಾರವನ್ನು ಯಾಕೆ ಈ ಸರ್ಕಾರ ಮಾಡುತ್ತಿದೆ? ಹಾಲು ಹೆಚ್ಚು ಕೊಡುವ ನೆಪದಲ್ಲಿ ಹೆಚ್ಚು ಹಣ ಕೇಳುವುದು ಜನದ್ರೋಹಿ ನಿರ್ಧಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಾಲಿನ ದರ ಏರಿಕೆಯ ಪರಿಣಾಮವಾಗಿ ಚಹಾ, ಕಾಫಿ, ಹೋಟೆಲ್‍ಗಳ ತಿಂಡಿ ದರ ಹೆಚ್ಚಳದ ವಿಷಯ ಕೇಳಿ ಬರುತ್ತಿದೆ. ಮದ್ಯದ ಬೆಲೆ ಈಗಾಗಲೇ ಹೆಚ್ಚಿಸಿದ್ದೀರಿ. ಬೊಕ್ಕಸ ತುಂಬಿಸುವ ಕುಕೃತ್ಯವಿದು. 

ಈ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.ರಾಜ್ಯದ ಬೇಜವಾಬ್ದಾರಿ ಸರಕಾರದ ಜನವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರಗಳಿಂದ ರಾಜ್ಯದ ಜನತೆ ದಿನದಿಂದ ದಿನಕ್ಕೆ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದ ಕೋಟ್ಯಂತರ ಜನರು ಸಂಕಷ್ಟಕ್ಕೆ ಈಡಾಗಿದ್ದರು. ಇದರಿಂದ ರಸ್ತೆ ಮೇಲೆ ಓಡಾಡುವ ಬಸ್‍ಗಳು, ಲಾರಿಗಳು, ಕಾರುಗಳು, ಸಾಮಗ್ರಿಗಳನ್ನು ಒಯ್ಯುವ ವಾಹನಗಳ ದರ ಹೆಚ್ಚಾಗಿ ವಸ್ತುಗಳ ದರವೂ ದುಬಾರಿಯಾಗಿದೆ ಎಂದು ರವಿಕುಮಾರ್ ಹೇಳಿದರು.