ಮುಳಗುಂದ ಹಾಲು ಉತ್ಪಾದಕರ ಸಹಕಾರಿ ಸಂಘವು 2025-26ಸಾಲಿನಲ್ಲಿ ₹10.42 ಲಕ್ಷ ನಿವ್ಹಳ ಲಾಭ ಗಳಿಸಿದೆ.
ವಾರ್ಷಿಕ ಸಭೆಯಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಡಿ. ಬಟ್ಟೂರ ಹೇಳಿಕೆ
ಕನ್ನಡಪ್ರಭ ವಾರ್ತೆ ಮುಳಗುಂದಮುಳಗುಂದ ಹಾಲು ಉತ್ಪಾದಕರ ಸಹಕಾರಿ ಸಂಘವು 2025-26ಸಾಲಿನಲ್ಲಿ ₹10.42 ಲಕ್ಷ ನಿವ್ಹಳ ಲಾಭ ಗಳಿಸಿದೆ. ಪ್ರಸಕ್ತ ವರ್ಷದಲ್ಲಿ ಹಾಲು ಉತ್ಪಾದಕ ಸದಸ್ಯರಿಗೆ ಪಶು ಆಹಾರ ಖರೀದಿಸಿದರೆ ಒಂದು ಬಾರಿಗೆ ₹1 ಸಾವಿರ ಸಹಾಯಧನ ನೀಡಲಾಗುವುದು ಎಂದು ಸಹಕಾರಿ ಸಂಘದ ಅಧ್ಯಕ್ಷ ಎಂ.ಡಿ. ಬಟ್ಟೂರ ಹೇಳಿದರು.
ಪಟ್ಟಣದ ಬಿಎಂಎಸ್ ಕಲಾಭವನದಲ್ಲಿ ಮುಳಗುಂದ ಹಾಲು ಉತ್ಪಾದಕರ ಸಹಕರ ಸಂಘ, ಅರ್ಬನ್ ಕೋ-ಆಪ್ ಬ್ಯಾಂಕ್, ಎಣ್ಣೆ ಬೀಜ ಬೆಳೆಗಾರರ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಇತ್ತಿಚೆಗೆ ನಡೆದ 2025-26ನೇ ಸಾಲಿನ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಪೂರೈಸುವುದರ ಜೊತೆಗೆ ಸಂಘದ ಏಳಿಗೆಯಲ್ಲಿ ಕೈಜೋಡಿಸಬೇಕು. ಹೈನುಗಾರರಿಗೆ ನೆರವಾಗುವ ಉದ್ದೇಶದಿಂದ ಹಸುಗಳಿಗೆ ಕೃತಕ ಗರ್ಭಧಾರಣೆ ವ್ಯವಸ್ಥೆ, ತುರ್ತು ಚಿಕಿತ್ಸೆ ಸೌಲಭ್ಯವಿದೆ. ಈ ವರ್ಷ ಅಮೃತ ಯೋಜನೆಯಲ್ಲಿ ಹಸುಗಳನ್ನು ತೆಗೆದುಕೊಳ್ಳುವ ಅವಕಾಶವಿದ್ದು, ಆಸಕ್ತ ಸದಸ್ಯರು ಪ್ರಯೋಜನ ಪಡೆದುಕೊಳ್ಳಬೇಕು. ಸಂಘದ ಆವರಣದಲ್ಲಿ ಪಶುಗಳಿಗೆ ಬೇಕಾಗುವ ಕ್ಯಾಲ್ಸಿಯಂ ಹಾಗೂ ಔಷಧಗಳನ್ನ ಶೇ.10ರಷ್ಟು ರಿಯಾಯತಿಯಲ್ಲಿ ಮಾರಾಟ ಮಳಿಗೆ ತೆರೆಯಲಾಗುವುದು. ಸಂಘದ ಒಟ್ಟಾರೆ ಲಾಭದಲ್ಲಿ ಪ್ರತಿ ಲೀಟರ್ ಹಾಲಿಗೆ ₹1 ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ. ನೀಲಗುಂದ ಮಾತನಾಡಿ, ಸಹಕಾರಿ ಕ್ಷೇತ್ರದ ಮೂಲಕ ಸ್ವಾವಲಂಬನೆ, ಪ್ರಗತಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಇಲ್ಲಿನ ಸಹಕಾರ ಸಂಘಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ. ಅರ್ಬನ್ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿಯತ್ತ ಸಾಗಿದೆ ಎಂದರು.ಈ ವೇಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ. ಬಡ್ನಿ, ಎಣ್ಣೆಬೀಜ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ ಸೋನಗೋಜಿ, ನಿರ್ದೇಶಕರಾದ ಪಿ.ಎ. ವಂಟಕರ, ಬಿ.ಸಿ. ಬಡ್ನಿ, ಬಸವರಾಜ ಬಾತಾಖಾನಿ, ರಾಮಣ್ಣ ಕಮಾಜಿ, ಎನ್.ಆರ್. ದೇಶಪಾಂಡೆ, ಮಹಾಂತೇಶ ನೀಲಗುಂದ, ಮುತ್ತಣ್ಣ ವಾಲಿ, ಮಹಾದೇವಪ್ಪ ವಿಜಾಪೂರ ಹಾಗೂ ಸಹಕಾರಿ ಸಂಘಗಳ ಮುಖ್ಯಕಾರ್ಯನಿರ್ವಾಹಕರು, ಮೊದಲಾದವರಿದ್ದರು.