ಯಮಸಂಧಿ ಡೇರಿಯಲ್ಲಿ ಹಾಲು ಕಳ್ಳತನ: ಗ್ರಾಮಸ್ಥರ ಆಕ್ರೋಶ

| Published : Aug 19 2025, 01:00 AM IST

ಯಮಸಂಧಿ ಡೇರಿಯಲ್ಲಿ ಹಾಲು ಕಳ್ಳತನ: ಗ್ರಾಮಸ್ಥರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಕೆಲಸಕ್ಕೆ ಸೇರಿಸಲಾದ ಉಮಾ ಎಂಬ ಮಹಿಳೆ ತನ್ನ ಪಾತ್ರೆಗೆ ಹಾಲು ಸುರಿದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಯಮಸಂಧಿ ಹಾಲು ಉತ್ಪಾದಕ ಸಹಕಾರ ಸಂಘದ ಹಾಲು ಉತ್ಪಾದನಾ ಘಟಕದಲ್ಲಿ ನಡೆದ ಹಾಲು ಕಳ್ಳತನದ ಘಟನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಯಮಸಂಧಿ ಗ್ರಾಮ ಹಾಗೂ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳಿಂದ ಪ್ರತಿದಿನ ನೂರಾರು ಲೀಟರ್ ಹಾಲು ಈ ಘಟಕಕ್ಕೆ ತರಲಾಗುತ್ತದೆ. ರೈತರು ತರುವ ಹಾಲಿನ ಅಳತೆಯ ವೇಳೆ, ಇತ್ತೀಚೆಗೆ ಕೆಲಸಕ್ಕೆ ಸೇರಿಸಲಾದ ಉಮಾ ಎಂಬ ಮಹಿಳೆ ತನ್ನ ಪಾತ್ರೆಗೆ ಹಾಲು ಸುರಿದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಸಿಸಿಟಿವಿಯಲ್ಲಿ ಪತ್ತೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಗ್ರಾಮಸ್ಥ ರಾಮು ಅವರು ಪ್ರತಿದಿನ ಹಾಲಿನ ತೂಕದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಘಟಕದ ಸಿಸಿಟಿವಿ ಪರಿಶೀಲನೆ ನಡೆಸಿ ಈ ಕೃತ್ಯವನ್ನು ಪತ್ತೆಹಚ್ಚಿದ್ದಾರೆ. ರೈತರ ಬೆವರಿನ ಹನಿಯಿಂದ ಬಂದ ಹಾಲನ್ನೇ ಘಟಕದೊಳಗೇ ಕದಿಯುತ್ತಿರುವುದು ನಿಜಕ್ಕೂ ನಾಚಿಕೆಗೇಡಿತನ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಈಗಾಗಲೇ ನಿರಂತರ ಮಳೆಯಿಂದಾಗಿ ಮಲೆನಾಡು ರೈತರು ಸಂಕಷ್ಟದಲ್ಲಿದ್ದಾರೆ. ಕಾಡುಪ್ರಾಣಿಗಳ ದಾಳಿ, ಬೆಳೆ ಹಾನಿ, ಪ್ರಕೃತಿ ವಿಕೋಪಗಳಿಂದಾಗಿ ತೀವ್ರ ಹಿನ್ನಡೆ ಅನುಭವಿಸುತ್ತಿರುವ ರೈತರಿಗೆ ಹಸು ಸಾಕಿ ಹಾಲು ಮಾರಾಟವೇ ಜೀವನಾಧಾರವಾಗಿದೆ. ಇಂತಹ ಸಂದರ್ಭದಲ್ಲಿ ಘಟಕದೊಳಗೇ ಹಾಲು ಕಳ್ಳತನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಪ್ರಕಾರ, ಇದೇ ಘಟಕದಲ್ಲಿ ಎರಡು ವರ್ಷಗಳ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಅವ್ಯವಹಾರದ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿತ್ತು. ಆದರೆ, ರಾಜಕೀಯ ಒತ್ತಡದಡಿ ನೇಮಕಗೊಂಡಿರುವ ಈ ಮಹಿಳೆಯೇ ಈಗ ಹಾಲು ಕಳ್ಳತನದಲ್ಲಿ ತೊಡಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸೂಕ್ತ ತನಿಖೆ ನಡೆಸಿ, ಕಳ್ಳತನಕ್ಕೆ ಹೊಣೆಗಾರಳಾದ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ರಾಮು ಆಗ್ರಹಿಸಿದ್ದಾರೆ.