ಮಳೆಗಾಲ ಆರಂಭವಾಗುತ್ತಿದ್ದರೂ ರಾಗಿ ಖರೀದಿ ಪ್ರಾರಂಬಿಸಿಲ್ಲ: ಲೋಕೇಶ್ವರ

| Published : Feb 28 2025, 12:48 AM IST

ಸಾರಾಂಶ

ರೈತರು ಬೆಳೆದಿರುವ ರಾಗಿಯನ್ನು ಈಗ ಮಾರಾಟ ಮಾಡಿ ಕಳೆದ ವರ್ಷ ಬೆಳೆ ಬೆಳೆಯಲು ಮಾಡಿಕೊಂಡಿದ್ದ ಸಾಲ ಹಾಗೂ ಬಡ್ಡಿ ತೀರಿಸಲು ಕಾಯುತ್ತಿದ್ದಾರೆ. ಉಳುಮೆ, ಬಿತ್ತನೆ ಬೀಜ, ರಸಗೊಬ್ಬರ, ರಾಗಿ ಕಟಾವು ಸೇರಿದಂತೆ ಹೀಗೆ ರೈತರು ಸಾವಿರಾರು ರು. ಸಾಲ ಮಾಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ರಾಜ್ಯ ಸರ್ಕಾರ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ರೈತರಿಂದ ಬೆಂಬಲ ಬೆಲೆಯಡಿ ಕ್ವಿಂಟಾಲ್ ರಾಗಿಗೆ ೪೨೯೦ ರು.ಗಳಂತೆ ಖರೀದಿ ನೋಂದಣಿ ಪ್ರಕ್ರಿಯೆ ಮುಗಿದಿದ್ದರೂ, ಇದುವರೆಗೂ ಖರೀದಿ ಏಜೆನ್ಸಿಯವರು ಮಾತ್ರ ರಾಗಿ ಖರೀದಿ ಪ್ರಾರಂಬಿಸಿಲ್ಲದಿರುವುದರಿಂದ ರೈತರು ಹೆಚ್ಚಿನ ಆರ್ಥಿಕ ಸಂಷ್ಟಕ್ಕೀಡಾಗಿದ್ದು, ಕೂಡಲೇ ರೈತರಿಂದ ರಾಗಿ ಖರೀದಿಸಿ ತಕ್ಷಣ ಹಣವನ್ನು ಅವರ ಖಾತೆಗಳಿಗೆ ಹಾಕುವಂತೆ ಬಿಜೆಪಿ ಮುಖಂಡ ಲೋಕೇಶ್ವರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರೈತರು ತಾವು ಕಷ್ಟಪಟ್ಟು ಬೆಳೆದ ರಾಗಿಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ಅನ್ನ, ನೀರು ಬಿಟ್ಟು ಬಿಸಿಲು, ಮಳೆ ಲೆಕ್ಕಿಸದೆ ದಿನಗಟ್ಟಲೆ ಸರದಿ ಸಾಲಿನಲ್ಲಿ ನಿಂತು ತಮ್ಮ ಹೆಸರನ್ನು ನೋಂದಾಯಿಸಿ 2 ತಿಂಗಳುಗಳೇ ಕಳೆದಿದೆ. ಸಂಕ್ರಾಂತಿ ಮತ್ತು ಶಿವರಾತ್ರಿ ಹಬ್ಬಗಳು ಕಳೆದು ಮಳೆಗಾಲ ಆರಂಭವಾಗಿದ್ದರೂ ಸರ್ಕಾರ ಮಾತ್ರ ರೈತರಿಂದ ರಾಗಿ ಖರೀದಿಸುವ ಗೋಜಿಗೂ ಹೋಗಿಲ್ಲ. ಇತ್ತ ರೈತರು ರಾಗಿಯನ್ನು ಶೇಖರಿಸಲು ಸ್ಥಳದ ಅಭಾವ ಮತ್ತು ತೂಕ ಮಾಡಿ ತಿಂಗಳುಗಳ ಕಾಲ ಇಟ್ಟರೆ ಮತ್ತೆ ತೂಕದಲ್ಲಿ ವ್ಯತ್ಯಾಸವಾಗುವುದರಿಂದ ಏನು ಮಾಡುವುದೆಂದು ತಿಳಿಯುತ್ತಿಲ್ಲ. ರೈತರು ಬೆಳೆದಿರುವ ರಾಗಿಯನ್ನು ಈಗ ಮಾರಾಟ ಮಾಡಿ ಕಳೆದ ವರ್ಷ ಬೆಳೆ ಬೆಳೆಯಲು ಮಾಡಿಕೊಂಡಿದ್ದ ಸಾಲ ಹಾಗೂ ಬಡ್ಡಿ ತೀರಿಸಲು ಕಾಯುತ್ತಿದ್ದಾರೆ. ಉಳುಮೆ, ಬಿತ್ತನೆ ಬೀಜ, ರಸಗೊಬ್ಬರ, ರಾಗಿ ಕಟಾವು ಸೇರಿದಂತೆ ಹೀಗೆ ರೈತರು ಸಾವಿರಾರು ರು. ಸಾಲ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಮುಂದಿನ ತಿಂಗಳು ಮಳೆ ಪ್ರಾರಂಭವಾಗುವುದೆಂದು ಈಗಾಗಲೇ ಹವಾಮಾನ ಇಲಾಖೆ ತಿಳಿಸಿದ್ದು, ರೈತರು ಮತ್ತೆ ಕೃಷಿ ಆರಂಭಿಸಲು ಹಣಕಾಸಿನ ಅವಶ್ಯಕತೆ ತುಂಬಾ ಇದೆ. ಹಾಗಾಗಿ ಬೆಂಬಲ ಬೆಲೆಯಡಿ ರಾಗಿ ಖರೀದಿಸಲು ಮಾರ್ಚ್ ಕೊನೆ ಗಡುವಿದ್ದರೂ ಇನ್ನೂ ಖರೀದಿ ಪ್ರಾರಂಬಿಸಿಲ್ಲ. ಇವತ್ತೇ ಪ್ರಾರಂಭಸಿದರೂ ಖರೀದಿಗೆ 2 ರಿಂದ 3 ತಿಂಗಳು ಬೇಕು. ಕೂಡಲೇ ಮಳೆಗಾಲ ಪ್ರಾರಂಭವಾಗುವುದರಿಂದ ರೈತರು ಕೃಷಿ ಮಾಡುತ್ತಾರೋ ಅಥವಾ ಖರೀದಿ ಕೇಂದ್ರಕ್ಕೆ ರಾಗಿ ತಂದು ಕ್ಯೂನಲ್ಲಿ ನಿಲ್ಲಬೇಕೋ ಎಂಬ ಗೊಂದಲವಿದೆ. ಇದರ ಜೊತೆಗೆ ಹಬ್ಬಗಳು, ಜಾತ್ರೆ, ಮದುವೆ, ನಿತ್ಯದ ಖರ್ಚು, ಆಸ್ಪತ್ರೆ ಖರ್ಚು ವೆಚ್ಚಕ್ಕೆ ಹಣವಿಲ್ಲದೆ ಮತ್ತೆ ಸಾಲದ ಸುಳಿಯಲ್ಲಿ ರೈತರು ಸಿಲುಕುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ರೈತರ ಹಿತಬಯಸದೆ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಈಗಾಗಲೇ ವಿವಿಧ ತಾಲೂಕುಗಳ ರೈತರು ರಾಗಿ ಖರೀದಿ ಕೇಂದ್ರಗಳ ಮುಂದೆ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದಾರೆ. ರೈತರು ನಗರದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಮಾಡಿದ್ದ ಸ್ಥಳಕ್ಕೆ ಹೋಗಿ ರಾಗಿ ಯಾವಾಗ ತೆಗೆದುಕೊಳ್ಳುತ್ತೀರಿ ಎಂದು ಪ್ರತಿನಿತ್ಯ ಕೇಳಿಹೋಗುತ್ತಿದ್ದಾರೆ. ಆದರೆ ಅಲ್ಲಿಯೂ ಸಿಬ್ಬಂದಿಯಿಲ್ಲದೆ, ಯಾವುದೇ ಮಾಹಿತಿ ರೈತರಿಗೆ ಸಿಗುತ್ತಿಲ್ಲ. ಹಾಗಾಗಿ ತುರ್ತಾಗಿ ರಾಗಿ ಖರೀದಿ ಪ್ರಾರಂಬಿಸದಿದ್ದರೆ ಸಾವಿರಾರು ರೈತರೊಂದಿಗೆ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಲೋಕೇಶ್ವರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.