ಖೊಟ್ಟಿ ಸಹಿ ಮಾಡಿ ಗ್ರಾಪಂ ಸದಸ್ಯನಿಂದ ಲಕ್ಷಾಂತರ ಲೂಟಿ

| Published : Jul 24 2025, 12:53 AM IST

ಖೊಟ್ಟಿ ಸಹಿ ಮಾಡಿ ಗ್ರಾಪಂ ಸದಸ್ಯನಿಂದ ಲಕ್ಷಾಂತರ ಲೂಟಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಪಂಚಾಯತಿ ಪಿಡಿಒ ಮತ್ತು ಅಧ್ಯಕ್ಷರ ಖೊಟ್ಟಿ ಸಹಿಗಳನ್ನು ಮಾಡಿ ಸರ್ಕಾರದ ಲಕ್ಷಾಂತರ ಹಣ ದುರುಪಯೋಗಪಡಿಸಿಕೊಂಡಿರುವ ಘಟನೆ ರಾಮದುರ್ಗ ತಾಲೂಕಿನ ಕಟಕೋಳ ಪಂಚಾಯತಿಯಲ್ಲಿ ನಡೆದಿದೆ. ಈ ಕುರಿತು ಕಟಕೋಳ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಪಂಚಾಯತಿ ಪಿಡಿಒ ಮತ್ತು ಅಧ್ಯಕ್ಷರ ಖೊಟ್ಟಿ ಸಹಿಗಳನ್ನು ಮಾಡಿ ಸರ್ಕಾರದ ಲಕ್ಷಾಂತರ ಹಣ ದುರುಪಯೋಗಪಡಿಸಿಕೊಂಡಿರುವ ಘಟನೆ ರಾಮದುರ್ಗ ತಾಲೂಕಿನ ಕಟಕೋಳ ಪಂಚಾಯತಿಯಲ್ಲಿ ನಡೆದಿದೆ. ಈ ಕುರಿತು ಕಟಕೋಳ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಕಟಕೋಳ ಗ್ರಾಪಂ ಸದಸ್ಯ ಶ್ರೀಕಾಂತ ಫಕೀರಪ್ಪ ಕೊರವರ ಎಂಬುವರು ಪಿಡಿಒ ಮತ್ತು ಅಧ್ಯಕ್ಷರ ಖೊಟ್ಟಿ ಸಹಿಗಳನ್ನು ಮಾಡಿ ಸುಮಾರು ₹31,84,694 ಹಣ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನಿಂದ ಡ್ರಾ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.ತಾಲೂಕಿನ ಕಟಕೋಳ ಗ್ರಾಪಂ ಗ್ರಾಮ ವಿಕಾಸ ಯೋಜನೆಯ ಖಾತೆ ಸಂಖ್ಯೆ 89068903504 ಈ ಖಾತೆಯ ಚೆಕ್‌ಬುಕ್, ಕ್ಯಾಶಬುಕ್ ಸೇರಿದ ಎಲ್ಲವುಗಳನ್ನು ನೋಡಿಕೊಳ್ಳುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಮತ್ತು ವಾಟರ್‌ಮನ್ ಸಹಾಯದಿಂದ ಪಂಚಾಯತಿ ಸದಸ್ಯ ಶ್ರೀಕಾಂತ ಫಕೀರಪ್ಪ ಕೊರವರ ದುರುಪಯೋಗಿಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಠಾಣೆಗೆ ಪಿಡಿಒ ಮಲ್ಲಿಕಾರ್ಜುನ ಬೈಲವಾಡ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.2024, ಸೆಪ್ಟೆಂಬರ್ 17 ರಂದು ಪಂಚಾಯತಿಯ ವಾಟರ್‌ಮನ್ ಯಾರಿಗೂ ಗೊತ್ತಾಗದಂತೆ ಕೆವಿಜಿ ಬ್ಯಾಂಕ್‌ನಿಂದ 12 ಚೆಕ್ ಪಡೆದುಕೊಂಡಿದ್ದು, ಈ 12 ಚೆಕ್‌ಗಳಿಂದ ಬೃಹತ್ ಮೊತ್ತದ ಹಣ ಡ್ರಾ ಆಗಿದೆ. ಕಳೆದ ಸೆಪ್ಟೆಂಬರ್‌ 18 ರಿಂದ ಅಕ್ಟೋಬರ್‌ 7 ರವರೆಗೆ ಬೇರೆ ಬೇರೆ ಹೆಸರಿನಲ್ಲಿ ಸುಮಾರು 12 ಬಾರಿ ಹಣ ತೆಗೆಯಲಾಗಿದೆ. ಗ್ರಾಪಂ ಅಧ್ಯಕ್ಷ ಮತ್ತು ಪಿಡಿಒ ಜಂಟಿ ನಿರ್ವಹಣೆಯ ಖಾತೆಯಾದರೂ ಬ್ಯಾಂಕ್ ಸಿಬ್ಬಂದಿ ಸಹಿ ಪರಿಶೀಲನೆ ಮಾಡದೇ ಹಣ ಕೊಟ್ಟಿರುವುದು ಕೂಡ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.ಈ ಬಗ್ಗೆ ಕಟಕೋಳ ಪೊಲೀಸ್ ಠಾಣೆಯಲ್ಲಿ ಪಿಡಿಒ ಮಲ್ಲಿಕಾರ್ಜುನ ಬೈಲವಾಡ ಪಂಚಾಯತಿ ಸದಸ್ಯ ಶ್ರೀಕಾಂತ ಕೊರವರ, ವಾಟರ್‌ಮನ್ ಹನಮಂತ ಮಹಾದೇವ ಭಜಂತ್ರಿ, ಡಾಟಾ ಎಂಟ್ರಿ ಆಪರೇಟರ್ ಶ್ರೀಶೈಲ್ ದುಂಡಪ್ಪ ಮುಗಳಿ ಮತ್ತು ಕಟಕೋಳ ಕೆವಿಜಿ ಬ್ಯಾಂಕ್ ಮ್ಯಾನೇಜರ್ ವಿರುದ್ಧ ದೂರು ನೀಡಿದ್ದಾರೆ.ಪ್ರಕರಣ ಬೆಳಕಿಗೆ ಬಂದಿದ್ದಾರು ಹೇಗೆ?:

2025, ಏಪ್ರಿಲ್ ಮೊದಲ ವಾರದಲ್ಲಿ ತಾಲೂಕು ಪಂಚಾಯತಿಗೆ ಮಾಹಿತಿ ನೀಡುವ ಸಲುವಾಗಿ ಪಿಡಿಒ ಡಾಟಾ ಎಂಟ್ರಿ ಆಪರೇಟರ್‌ಗೆ ಗ್ರಾಮ ವಿಕಾಸ ಯೋಜನೆ ಖಾತೆಯ ಮಾಹಿತಿ ಕೇಳಿದಾಗ ಇಲ್ಲಸಲ್ಲದ ನೆಪ ಹೇಳಿ ನುಣುಚಿಕೊಂಡಿದ್ದರು. ಬ್ಯಾಂಕ್‌ಗೆ ಪಾಸ್‌ಬುಕ್ ಪ್ರಿಂಟ್ ಮಾಡಿಸಲು ಹೇಳಿದರೇ ಬ್ಯಾಂಕ್ ಪ್ರಿಂಟರ್ ದುರಸ್ತಿಯಲ್ಲಿದೆ ಎಂದು ಸುಳ್ಳು ಹೇಳಿದ್ದರು. ಕೊನೆಗೆ ಬ್ಯಾಂಕ್ ಸ್ಟೇಟ್‌ಮೆಂಟ್ ತೆಗೆದಾಗ ₹31.84 ಲಕ್ಷಕ್ಕೂ ಅಧಿಕ ಹಣವನ್ನು ಬೇರೆ ಬೇರೆ ಹೆಸರಿನಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಹಣ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ವಿಚಾರಿಸಿದಾಗ ಪಂಚಾಯತಿ ಸದಸ್ಯ ಶ್ರೀಕಾಂತ ಕೊರವರ ಹೆಸರು ಕೇಳಿ ಬಂದಿದೆ.

ರಾಜಿ ಪಂಚಾಯತಿ:ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಏಪ್ರಿಲ್ 25 ರಂದು ಸಭೆ ಸೇರಿ ವಿಷಯ ದೊಡ್ಡದು ಮಾಡುವುದು ಬೇಡ ಎಂದು ಶ್ರೀಕಾಂತ ಕೊರವರ ಕರೆಸಿ ವಿಚಾರಣೆ ಮಾಡಿದಾಗ ಪಿಡಿಒ ಮತ್ತು ಅಧ್ಯಕ್ಷರಿಗೆ ಗೊತ್ತಾಗದಂತೆ ನಾನೇ ಹಣ ತೆಗೆದುಕೊಂಡಿದ್ದೇನೆ. ಮುಂದಿನ 3 ತಿಂಗಳೊಳಗಾಗಿ ಹಣ ಕೊಡುವುದಾಗಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಅದರಂತೆ ₹26.90 ಲಕ್ಷ ಹಣವನ್ನು ಮರಳಿ ನೀಡಿದ್ದಾನೆ. ಬಾಕಿ ಹಣ ನೀಡದಿರುವುದಕ್ಕೆ ಈ ಪ್ರಕರಣ ಬೆಳಕಿಗೆ ಬಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.