ಸಾರಾಂಶ
ರಾಮದುರ್ಗ: ಉತ್ತರ ಕರ್ನಾಟಕ ಧರ್ಮಸ್ಥಳವೆಂದು ಖ್ಯಾತಿ ಪಡೆದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕ್ಷೇತ್ರ ಗೋಡಚಿ ವೀರಭದ್ರೇಶ್ವರ ರಥೋತ್ಸವದ ಕಳಸ ಅವರೋಹಣದ ನಂತರ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಅವರಣದಲ್ಲಿ ಲಕ್ಷ ಲಕ್ಷ ದೀಪಗಳು ಪ್ರಜ್ವಲಿಸಿದವು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಉತ್ತರ ಕರ್ನಾಟಕ ಧರ್ಮಸ್ಥಳವೆಂದು ಖ್ಯಾತಿ ಪಡೆದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕ್ಷೇತ್ರ ಗೋಡಚಿ ವೀರಭದ್ರೇಶ್ವರ ರಥೋತ್ಸವದ ಕಳಸ ಅವರೋಹಣದ ನಂತರ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಅವರಣದಲ್ಲಿ ಲಕ್ಷ ಲಕ್ಷ ದೀಪಗಳು ಪ್ರಜ್ವಲಿಸಿದವು.ಕ್ಷೇತ್ರದ ಆವರಣದಲ್ಲಿ ವೀರಭದ್ರೇಶ್ವರ ಮತ್ತು ಭದ್ರಕಾಳಿಕಾ ಮಾತಾಕಿ ಜೈಘೋಷದೊಂದಿಗೆ ಭಕ್ತರು ದೀಪಗಳನ್ನು ಬೆಳಗಿದರು. ದೇವಸ್ಥಾನದ ಪ್ರಾಂಗಣದಲ್ಲಿ ಜೋಡಿಸಿದ್ದ ದೀಪಸ್ಥಂಭ ಮತ್ತು ವಿವಿಧ ಆಕಾರದಲ್ಲಿ ಜೋಡೊಸಿದ ದೀಪಗಳಿಗೆ ಭಕ್ತರು ದೀಪ ಹಚ್ಚುವ ಮೂಲಕ ಸಂತಸ ಪಟ್ಟರು ಕೆಲವರಂತು ತಾವೇ ಎಣ್ಣೆ ಬತ್ತಿಗಳಿಂದ ದೀಪಗಳನ್ನು ಬೆಳಗಿ ಭಕ್ತಿ ಸಮರ್ಪಿಸಿದರು. ಬೆಳಗುತ್ತಿರುವ ದೀಪಗಳ ಮಧ್ಯೆದಲ್ಲಿ ಸಾವಿರಾರು ಜನರು ಎಣ್ಣೆಬತ್ತಿಹಾಕಿ ವೀರಭದ್ರನಿಗೆ ಜಯ ಜಯವಾಗಲಿ ಎಂದು ಮಂಗಳಾರುತಿ ಹಾಡುತ್ತಿರುವದು ಕಂಡು ಬಂದಿತು.
ವೀರಭದ್ರೇಶ್ವರ ಟ್ರಸ್ಟ್ ಕಮೀಟಿಯ ಆಯೋಜಿಸಿದ್ದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಧರ್ಮದರ್ಶಿಗಳಾದ ಶ್ರೀಮಂತ ಸಂಜಯಸಿಂಹ ಶಿಂದೆ, ಸಂಗ್ರಾಮಸಿಂಹ ಶಿಂದೆ, ಕಾರ್ತಿಕ ಸಂ. ಶಿಂದೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಪ್ಪಯ್ಯಸ್ವಾಮಿಗಳು, ಅಪ್ಪಯ್ಯಸ್ವಾಮಿಗಳು ಸಾನಿಧ್ಯವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಲಕ್ಕವ್ವ ವಗ್ಗರ, ಎನ್‌ಡಬ್ಲೂಕೆಎಸ್‌ಆರಟಿಸಿ ರಾಮದುರ್ಗ ಘಟಕದ ವ್ಯವಸ್ಥಾಪಕ ಪಾಟೀಲ, ತಾಪಂ ಎಡಿ ಅಪ್ಪಯ್ಯಪ್ಪ ಕುಂಬಾರ ಸೇರಿದಂತೆ ಹಲವರು ಇದ್ದರು.