ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆ, ನಿರ್ಲಕ್ಷ್ಯ ಹಾಗೂ ನರ್ಸ್‌ಗಳ ಕೊರತೆ ಕಾರಣ ನೀಡಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಐಸಿಯು ಘಟಕಕ್ಕೆ ಬೀಗ ಹಾಕಲಾಗಿದೆ.ಮಿಮ್ಸ್ ಆಸ್ಪತ್ರೆಗೆ ಕೋವಿಡ್ ವೇಳೆ ಹೊಂಬಾಳೆ ಗ್ರೂಪ್ಸ್‌ನವರು ಸುಮಾರು ಒಂದೂವರೆ ಕೋಟಿ ರು. ಖರ್ಚು ಮಾಡಿ ಎರಡು ವಾರ್ಡ್‌ಗಳಿಗೆ ಐಸಿಯು ಘಟಕ ನಿರ್ಮಿಸಿ ದಾನವಾಗಿ ಕೊಟ್ಟಿದ್ದರು. ಕೋವಿಡ್ ವೇಳೆ ಶ್ವಾಸಕೋಶ, ಉಸಿರಾಟ ಮತ್ತು ಹೃದಯ ಸಂಬಂಧಿ ರೋಗಿಗಳಿಗಾಗಿ ಈ ವಾರ್ಡ್‌ಗಳು ಬಳಕೆಯಾಗುತ್ತಿತ್ತು.
ಆದರೆ, ದಾನವಾಗಿ ಬಂದ ಕೋಟ್ಯಂತರ ರು. ಮೌಲ್ಯದ ಉಪಕರಣಗಳೂ ಸಹ ಧೂಳು ಹಿಡಿಯುತ್ತಿವೆ. ವಿಧಿ ಇಲ್ಲದೆ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಹ ಸ್ಥಿತಿ ನಿರ್ಮಾಣವಾಗಿರುವುದರಿಂದ ಸಾಮಾನ್ಯ ಜನರು ಖಾಸಗಿ ಆಸ್ಪತ್ರೆಗೆ ಲಕ್ಷ ಲಕ್ಷ ಹಣ ಸುರಿಯುವಂತಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ಹೊಂಬಾಳೆ ಗ್ರೂಪ್‌ನ ವಿಜಯ್ ಕಿರಗಂದೂರು ಅವರು 1.50 ಕೋಟಿ ರು. ವೆಚ್ಚದಲ್ಲಿ ವೆಂಟಿಲೇಟರ್‌ವುಳ್ಳ ಎರಡು ಐಸಿಯು ಘಟಕ ನೀಡಿದ್ದರು. ಎರಡು ವಾರ್ಡ್‌ಗಳಲ್ಲಿ 40 ಬೆಡ್ ಅಳವಡಿಸಲಾಗಿದೆ. ಇಷ್ಟು ದಿನಗಳ ಕಾಲ ಎರಡೂ ಐಸಿಯು ಘಟಕವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿಂದ ಈ ಪೈಕಿ ಒಂದು ವಾರ್ಡ್‌ಗೆ ಬೀಜ ಹಾಕಿ ನರ್ಸ್‌ಗಳ ಸಮಸ್ಯೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.
ಮಿಮ್ಸ್‌ನ ಒಟ್ಟು 54 ಐಸಿಯು ಬೆಡ್‌ಗಳ ಪೈಕಿ ಕೇವಲ 18 ಬೆಡ್‌ಗಳು ಮಾತ್ರ ಕಾರ್‍ಯನಿರ್ವಹಿಸುತ್ತಿವೆ. ಉಳಿದ ಎಲ್ಲ ಬೆಡ್‌ಗಳೂ ಹಾಗೆಯೇ ಉಳಿದು ಧೂಳು ತಿನ್ನುತ್ತಿವೆ. ಈ ವಾರ್ಡ್‌ಗಳಲ್ಲಿ ವಿಷ ಸೇವಿಸಿ ಅಸ್ವಸ್ಥರಾದವರು. ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಒಂದು ಬೆಡ್‌ನಲ್ಲಿ ಇಬ್ಬರು ರೋಗಿಗಳನ್ನು ಮಲಗಿಸಿ ಚಿಕಿತ್ಸೆ ಕೊಡುವ ಬದಲು ಇರುವ ವಾರ್ಡ್‌ಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಮಿಮ್ಸ್ ಆಡಳಿತ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸದೆ ಇರುವುದರಿಂದ ರೋಗಿಗಳು ಪರದಾಡುವಂತಾಗಿದೆ.
ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಿಮ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು, ಸ್ಥಾನೀಯ ವೈದ್ಯಾಧಿಕಾರಿಗಳು ಸೇರಿದಂತೆ ಹಲವು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು.ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್)ಯಲ್ಲಿ ಹಲವು ಸಮಸ್ಯೆಗಳು ಇರುವುದು ನನ್ನ ಗಮನಕ್ಕೂ ಬಂದಿದೆ. ಜಿಲ್ಲಾಧಿಕಾರಿಗಳ ಮೂಲಕ ಸಮಸ್ಯೆಗಳ ಪಟ್ಟಿ ಮಾಡಿಸಲಾಗಿದೆ. ಮಿಮ್ಸ್‌ಗೆ ಮೇಜರ್ ಸರ್ಜರಿ ಆಗಬೇಕಿದೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಶೀಘ್ರ ಸಭೆ ನಡೆಸಿ ಕ್ರಮ ವಹಿಸುತ್ತೇನೆ.
- ಎನ್.ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರುಮಿಮ್ಸ್ನಲ್ಲಿರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ನಿರ್ದೇಶಕರು ಹಾಗೂ ವೈದ್ಯಕೀಯ ಸೂಪರಿಂಟೆಂಡೆಂಟ್ ಅವರಿಗೆ ತಿಳಿಸಲಾಗಿದೆ. ಆದರೂ ಮುಂಜಾಗ್ರತೆ ವಹಿಸಿಲ್ಲ. ಈ ಬಗ್ಗೆ ಸಚಿವರು ಹೇಳಿದಂತೆ ಶೀಘ್ರವೇ ಮೇರ್ಜರಿ ಸರ್ಜರಿ ಮಾಡಲಾಗುವುದು.
- ಪಿ.ರವಿಕುಮಾರ್, ಶಾಸಕರು
ಮಿಮ್ಸ್ ಆಸ್ಪತ್ರೆಗೆ ನರ್ಸ್ ಮತ್ತು ಸಿಬ್ಬಂದಿಗಳ ಕೊರತೆ ಇದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ನೇಮಕಾತಿಗೆ ಅನುಮತಿ ನೀಡಿದೆ. ಇಂದಿನಿಂದಲೇ ಮುಚ್ಚಿದ್ದ ಐಸಿಯುವನ್ನು ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. - ಡಾ.ನರಸಿಂಹಸ್ವಾಮಿ, ಮಿಮ್ಸ್ ನಿರ್ದೇಶಕರುಎರಡು ಐಸಿಯುಗಳಲ್ಲಿ ಒಂದರಲ್ಲಿ ರೋಗಿಗಳನ್ನು ದಾಖಲು ಮಾಡುತ್ತಿದ್ದೆವು. ಮತ್ತೊಂದಕ್ಕೆ ಸಿಬ್ಬಂದಿಗಳ ಕೊರತೆಯಿಂದ ತೆಗೆಯುತ್ತಿಲ್ಲ. ಯಾವುದೇ ರೋಗಿಯನ್ನೂ ಹೊರಗೆ ಕಳುಹಿಸುತ್ತಿಲ್ಲ. ರೋಗಿಗಳಿಗೆ ತೊಂದರೆ ತಪ್ಪಿಸಲು ಇಂದಿನಿಂದಲೇ ತೆರೆಯಲಾಗಿದೆ.
- ಡಾ.ದರ್ಶನ್, ಸ್ಥಾನಿಕ ವೈದ್ಯಾಧಿಕಾರಿ, ಮಿಮ್ಸ್