(ಮಿಡಲ್‌) ಮಲೆನಾಡನ್ನು ನಾಚಿಸುತ್ತಿರುವ ಮಿಂಚು ಬಂಡೆ ಜಲಪಾತ

| Published : May 20 2024, 01:38 AM IST

(ಮಿಡಲ್‌) ಮಲೆನಾಡನ್ನು ನಾಚಿಸುತ್ತಿರುವ ಮಿಂಚು ಬಂಡೆ ಜಲಪಾತ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ದೇವಸಮುದ್ರ ಹೋಬಳಿಯ ಕೆಳಗಳ ಕಣಿವೆ ಸಮೀಪದಲ್ಲಿರುವ ಮಿಂಚು ಬಂಡೆಯಲ್ಲಿ ಜಲ ಪಾತವನ್ನ ಪ್ರತಿಬಿಂಬಿಸುವಂತೆ ನೀರು ದುಮ್ಮಿಕ್ಕುತ್ತಿದೆ.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ತಾಲೂಕಿನ ದೇವಸಮುದ್ರ ಹೋಬಳಿಯ ಕೆಳಗಳ ಕಣಿವೆ ಸಮೀಪದಲ್ಲಿರುವ ಮಿಂಚು ಬಂಡೆಯಲ್ಲಿ ಜಲ ಪಾತವನ್ನ ಪ್ರತಿಬಿಂಬಿಸುವಂತೆ ನೀರು ದುಮ್ಮಿಕ್ಕುತ್ತಿದೆ. ಸಂತೆಗುಡ್ಡ, ಬಾಂಡ್ರವಿ ಮತ್ತು ಸಂಡೂರು ತಾಲೂಕಿನ ವಿವಿಧ ಕಡೆಯಲ್ಲಿ ಬಿದ್ದ ಮಳೆ ನೀರು ಹರಿದು ಇಲ್ಲಿನ ಬೆಟ್ಟದಲ್ಲಿ ಜಲಪಾತವನ್ನು ಸೃಷ್ಟಿಸಿದೆ.

ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಈ ಸ್ಥಳವೂ ಮಲೆ ನಾಡಿನಲ್ಲಿ ಹರಿಯುವ ಜಲಪಾತವನ್ನು ನೆನೆಪಿಸುವಂತೆ ಜುಳು ಜುಳು ನೀನಾಧದ ಮೂಲಕ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ರಾಜ್ಯ ಹೆದ್ದಾರಿಗೆ ಅಂಟಿಕೊಂಡಂತಿರುವ ಮಿಂಚು ಬಂಡೆ ಮಳೆಗಾಲದಲ್ಲಿ ಸೃಷ್ಟಿಯಾಗುವ ಜಲಪಾತ ನಿತ್ಯ ನೂರಾರು ಜನರನ್ನು ಬರಸೆಳೆದುಕೊಳ್ಳುತ್ತಿದೆ.

ಪ್ರತಿ ಮಳೆಗಾಲದಲ್ಲಿ ಸೃಷ್ಟಿಯಾಗುತ್ತಿದ್ದ ಜಲಪಾತ ಕಳೆದ ಬಾರಿ ಬರದಿಂದಾಗಿ ಜಲಪಾತದ ಸವಿ ಕಾಣದೆ ಜನರ ನಿರಾಸೆಗೆ ಕಾರಣವಾಗಿತ್ತು. ಜತೆಗೆ ಇಡೀ ವರ್ಷ ನೀರು ಇಲ್ಲದೆ ಮಿಂಚು ಬಂಡೆ ಬಣಗುಡುತ್ತಿತ್ತು. ಆದರೆ ಈ ಬಾರಿ ಮುಂಗಾರು ಪೂರ್ವದಲ್ಲಿಯೇ ಬೆಟ್ಟದ ಮೇಲ್ಭಾಗದ ಅರಣ್ಯ ಪ್ರದೇಶದಲ್ಲಿ ಬಿದ್ದ ಮಳೆ ನೀರು ಬೆಟ್ಟದಲ್ಲಿ ಹರಿಯುತ್ತಿರುವುದು ರೈತರಿಗೆ ಹೊಸ ಬರವಸೆಯನ್ನು ಹುಟ್ಟು ಹಾಕಿದೆ.

ಬಯಲು ಸೀಮೆಯಲ್ಲಿ ಸದಾ ಹಚ್ಚ ಹಸಿರಿನಿಂದ ದಟ್ಟವಾಗಿರುವ ಬಾಂಡ್ರವಿ ಅರಣ್ಯ ಪ್ರದೇಶ ಮಲೆ ನಾಡನ್ನು ನಾಚಿಸುವಂತೆ ಬೆಳೆದಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹಬ್ಬಿರುವ ದಟ್ಟ ಕಾನನ ಸಂಡೂರು ತಾಲೂಕನ್ನು ಆವರಿಸಿಕೊಂಡಿದೆ. ಈ ಭಾಗದಲ್ಲಿ ಉತ್ತಮ ಮಳೆ ಬಿದ್ದಲ್ಲಿ ಇಲ್ಲಿನ ಮಿಂಬು ಬಂಡೆಯ ಮೂಲಕ ನೀರು ಹರಿದು ಹಳ್ಳ ಸೇರಲಿದೆ. ತಾಲೂಕಿನಲ್ಲಿ ನಿರೀಕ್ಷೆಗೆ ತಕ್ಕಂತೆ ಮಳೆಯಾಗದೆ ಇದ್ದರೂ ಮಿಂಚು ಬಂಡೆಯ ಮೇಲ್ಬಾಗದ ಅರಣ್ಯ ಪ್ರದೇಶದಲ್ಲಿ ಬಿದ್ದ ಮಳೆಯಿಂದಾಗಿ ಮುಂಗಾರು ಆರಂಬಕ್ಕೂ ಮೊದಲೇ ಜಲಪಾತದ ಸೊಬಗು ಕಾಣುತ್ತಿರುವುದು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯ ಸ್ಥಳವಾಗಿದೆ. ಶನಿವಾರ ತಾಲೂಕಿನಾದ್ಯಂತ ತುಂತುರು ಮಳೆಯಾಗಿದೆ. ರಾಯಾಪುರ 2.2ಮಿಮೀ, ಬಿಜಿಕೆರೆ 2.5ಮಿಮೀ, ರಾಂಪುರ 3.2 ಮಿಮೀ ಮಳೆಯಾಗಿರುವ ವರದಿಯಾಗಿದೆ.