ಸಾರಾಂಶ
ಸಂಡೂರು: ತಾಲೂಕಿನ ಕಾಳಿಂಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಯಶವಂತನಗರ ಬಳಿಯ ರೈಲ್ವೆ ಕ್ರಾಸಿಂಗ್‌ನಿಂದ ಅಂಕಮನಾಳು ಮಾರ್ಗದ ೨-೩ ಕಿ.ಮೀ. ರಸ್ತೆ ಗಣಿ ಲಾರಿಗಳ ನಿರಂತರ ಸಂಚಾರದಿಂದ ಬೇಸಿಗೆಯಲ್ಲಿ ಧೂಳುಮಯವಾದರೆ ಮಳೆಗಾಲದಲ್ಲಿ ಕೆಸರುಮಯವಾಗಲಿದೆ.
ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು, ಪಾದಾಚಾರಿಗಳು ಸ್ವಲ್ಪ ಅಜಾಗರೂಕರಾದರೂ ತೊಂದರೆ ಅನುಭವಿಸುವುದು ತಪ್ಪಿದ್ದಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಅದಿರು ಸಾಗಣೆ ಲಾರಿಗಳು ಗಣಿ ಪ್ರದೇಶದಿಂದ ರೈಲ್ವೆ ಅಥವಾ ಸ್ಟಾಕ್ ಯಾರ್ಡ್‌ಗೆ ಅದಿರು ಹೊತ್ತು ತರುವಾಗ, ಗಣಿಯಲ್ಲಿನ ಮಣ್ಣು ವಾಹನದ ಗಾಲಿಗೆ ಹತ್ತಿಕೊಂಡು ಅದು ರಸ್ತೆ ಮೇಲೆ ಸಂಚರಿಸುವಾಗ ರಸ್ತೆ ಮೇಲಿನ ನೀರಿನೊಂದಿಗೆ ಬೆರೆತು ಉತ್ತಮ ಟಾರ್ ರಸ್ತೆಯೂ ಕೆಸರುಮಯವಾಗಿಸಲಿದೆ. ಮಳೆ ಬಂದಾಗ ಜಿಗುಟಾಗಿರುವ ಈ ಮಣ್ಣಿನ ಮೇಲೆ ಸಂಚರಿಸುವಾಗ ಸ್ವಲ್ಪ ಗಮನ ಬೇರೆಡೆ ತೆರಳಿದರೂ, ವಾಹನಗಳಾಗಲಿ ಅಥವ ಪಾದಾಚಾರಿಗಳಾಗಲಿ ಜಾರಿ ಬೀಳುವ ಸಂಭವ ಹೆಚ್ಚಿದೆ.ಭಾನುವಾರ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕೆಸರಿನಿಂದ ತುಂಬಿದ ಈ ಮಾರ್ಗದಲ್ಲಿ ಬರುವಾರ ಜಾರಿ ಪಕ್ಕದ ತಗ್ಗಿಗೆ ಜಾರಿ ನಿಂತಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ.
ಈ ಮಾರ್ಗದಲ್ಲಿ ಜನತೆ ಅನುಭವಿಸುತ್ತಿರುವ ತೊಂದರೆಯ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಅಂಕಮನಾಳು ಗ್ರಾಮದ ನಿವಾಸಿ ಹಾಗೂ ಕಾಳಿಂಗೇರಿ ಗ್ರಾಪಂ ಅಧ್ಯಕ್ಷ ಎನ್.ಕಾರ್ತಿಕ್, ಅಂಕಮನಾಳು ಮತ್ತು ಯಶವಂತನಗರ ಮಾರ್ಗಮಧ್ಯದಲ್ಲಿ ಅದಿರು ಸಾಗಣೆ ಲಾರಿಗಳು ಹೆಚ್ಚಿನ ಸಂಖೆಯಲ್ಲಿ ಸಂಚರಿಸುವ ಕಾರಣ, ಬೇಸಿಗೆಯಲ್ಲಿ ಈ ಮಾರ್ಗ ಧೂಳುಮಯವಾಗಿರುತ್ತದೆ. ಮಳೆಗಾಲದಲ್ಲಿ ಕೆಸರುಮಯವಾಗಿರುತ್ತದೆ.ಅಂಕಮನಾಳು, ಹೀರಾಳು, ನಾಗೇನಳ್ಳಿ, ಚೋರುನೂರು, ಡಿ. ಮಲ್ಲಾಪುರ ಮುಂತಾದ ಗ್ರಾಮಗಳ ಜನತೆ ಈ ಮಾರ್ಗದ ಮೂಲಕವೇ ತಾಲೂಕು ಕೇಂದ್ರಕ್ಕೆ ಹೋಗಿ ಬರಬೇಕು. ಆದರೆ, ಈ ಮಾರ್ಗದಲ್ಲಿನ ಅದಿರು ಲಾರಿಗಳ ಅಬ್ಬರ ಹಾಗೂ ಕೆಸರಿನಿಂದ ಆವೃತವಾದ ಈ ರಸ್ತೆಯಲ್ಲಿ ಸಂಚರಿಸಲು ಜನತೆ ತುಂಬ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಮಾರ್ಗದಲ್ಲಿ ಸಂಚರಿಸುವ ಬೈಕ್, ಆಟೋಗಳು ಸ್ಕಿಡ್ ಆಗಿ ಬಿದ್ದಿವೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದಾರೆ. ಭಾನುವಾರ ಈ ಮಾರ್ಗದಲ್ಲಿ ಸಾಗುತ್ತಿದ್ದ ಸಾರಿಗೆ ಸಂಸ್ಥೆ ಬಸ್ ರಸ್ತೆಯಲ್ಲಿನ ಕೆಸರಿನಿಂದಾಗಿ ಜಾರಿಕೊಂಡು ರಸ್ತೆ ಪಕ್ಕದ ಕೆಸರಿನಲ್ಲಿ ಹೋಗಿ ನಿಂತಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ಈ ಮಾರ್ಗದಲ್ಲಿ ಜನತೆ ಅನುಭವಿಸುತ್ತಿರುವ ತೊಂದರೆ ಕುರಿತು ಹಲವು ಬಾರಿ ಅಧಿಕಾರಿಗಳಿಗೂ, ಗಣಿ ಕಂಪನಿಗಳವರಿಗೆ ತಿಳಿಸಿದವರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಹಾಗೂ ಸಂಬಂಧಿಸಿದ ಗಣಿ ಕಂಪನಿಗಳವರು ಸೂಕ್ತ ಕ್ರಮಕೈಗೊಂಡು ಈ ಮಾರ್ಗದಲ್ಲಿ ಜನತೆ ಸುರಕ್ಷಿತವಾಗಿ ಸಂಚರಿಸುವಂತೆ ಮಾಡಲು ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.ಸಂಬಂಧಿಸಿದ ಅಧಿಕಾರಿಗಳು, ಗಣಿ ಕಂಪನಿಗಳವರು ಅಂಕಮನಾಳು ಹಾಗೂ ಯಶವಂತನಗರದ ಮಾರ್ಗಮಧ್ಯದ ರೈಲ್ವೆ ಕ್ರಾಸಿಂಗ್‌ವರೆಗಿನ ರಸ್ತೆಯ ಮೇಲೆ ನೀರು, ಕೆಸರು ಮಣ್ಣು ಸಂಗ್ರಹವಾಗದಂತೆ ಕ್ರಮ ಕೈಗೊಂಡು, ಜನರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕಿದೆ.