ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್
ಸರ್ಕಾರಿ ಜಮೀನಿನಲ್ಲಿರುವ ಕೋಟ್ಯಂತರ ಮೌಲ್ಯದ ಖನಿಜ ಸಂಪತ್ತು ಶಾಸಕರ ಆಪ್ತರೊಬ್ಬರ ಪಾಲಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಪಡೆಯದೇ ಹೊರರಾಜ್ಯಗಳಿಗೆ ಖನಿಜ ಸಾಗಿಸುತ್ತಿದ್ದರೂ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ.ಕೆಜಿಎಫ್ ತಾಲೂಕಿನ ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿರಬೇಕೆಂಬ ಉದ್ದೇಶದಿಂದ ಶಾಸಕಿ ರೂಪಕಲಾ ಶಶಿಧರ್ ಅವರು, ಆಂಧ್ರ ಗಡಿ ಭಾಗದ ಕದಿರಗಾನಕುಪ್ಪದ ಬಳಿ ೪೦ ಎಕರೆ ಜಮೀನನ್ನು ಎಪಿಎಂಸಿಗೆ ಮಂಜೂರು ಮಾಡಿಸಿದ್ದಾರೆ. ಜಮೀನು ಹಳ್ಳ- ದಿಣ್ಣೆಗಳಿಂದ ಕೂಡಿರುವುದರಿಂದ ಜಾಗದ ಸಮತಟ್ಟುಗೊಳಿಸುವ ಜವಾಬ್ದಾರಿಯನ್ನು ಪ್ರಭಾವಿ ವ್ಯಕ್ತಿಯೊಬ್ಬರಿಗೆ ವಹಿಸಲಾಗಿದೆ.
ಶಾಸಕರ ಹೆಸರಿಗೆ ಕಳಂಕಈತ ಶಾಸಕರ ಆಪ್ತ ಎನ್ನಲಾಗಿದೆ. ಜಮೀನು ಸಮತಟ್ಟು ಮಾಡುವ ನೆಪದಲ್ಲಿ ಈ ವ್ಯಕ್ತಿ ಇಲ್ಲಿರುವ ಕೋಟ್ಯಂತರ ಮೌಲ್ಯದ ಬ್ಲಾಕ್ ಗ್ರಾನೈಟ್ ಕಲ್ಲುಗಳನ್ನು ರಾತ್ರೋ ರಾತ್ರಿ ಹೊರರಾಜ್ಯಗಳಿಗೆ ಸಾಗಾಣೆ ಮಾಡುವ ಮೂಲಕ ಶಾಸಕರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ನಿಯಮದಂತೆ ರಾಜಧನ ಪಾವತಿಸುವಂತೆ ಸೂಚಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಶಾಸಕರ ಆಪ್ತರೊಬ್ಬರು ಕಚೇರಿಗೆ ಹೋಗಿ ಅವಾಜ್ ಹಾಕಿ ಬಂದಿದ್ದಾರೆಂದು ಹೆಸರೇಳಲಿಚ್ಚಿಸದ ಗಣಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾರುಕಟ್ಟೆ ನಿರ್ಮಾಣದ ಜಾಗ ಸಮತಟ್ಟುಗೊಳಿಸುವ ನೆಪದಲ್ಲಿ ಬ್ಲಾಕ್ ಗ್ರಾನೈಟ್ ಕಲ್ಲುಗಳ ಅಕ್ರಮವಾಗಿ ಹೊರರಾಜ್ಯಗಳಿಗೆ ಸಾಗಿಸುತ್ತಿದ್ದರೂ ಇದೆಲ್ಲ ಶಾಸಕಿ ರೂಪಕಲಾ ಶಶಿಧರ್ ಅವರ ಗಮನಕ್ಕೆ ಬಂದಿಲ್ಲವೇ ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.ಸಾವಿರಾರು ಟನ್ ಕಲ್ಲು ಸಾಗಣೆ
ಕಳೆದ ಒಂದೂವರೆ ತಿಂಗಳಿಂದ ನಿತ್ಯ ೬- ೭ ಲಾರಿಗಳಂತೆ ಈವರೆಗೆ ಸಾವಿರಾರು ಟನ್‌ನಷ್ಟು ಬ್ಲಾಕ್ ಗ್ರಾನೈಟ್ ಕಲ್ಲನ್ನು ಅಕ್ರಮವಾಗಿ ಹೊರರಾಜ್ಯಗಳಿಗೆ ಸಾಗಾಣೆ ಮಾಡಲಾಗಿದ್ದು, ಅಂದಾಜು ೨೫೦- ೩೦೦ ಲೋಡ್ ಲಾರಿ ಸಾಗಾಣೆಯಾಗಿದೆ. ಒಂದು ಲಾರಿ ಲೋಡ್ ಕಲ್ಲಿಗೆ ಒಂದು ಲಕ್ಷದಂತೆ ಲೆಕ್ಕಾಚಾರ ಮಾಡಿದರೂ ಅಂದಾಜು ೨-೩ ಕೋಟಿ ರು. ಪ್ರಭಾವಿಗಳ ಪಾಲಾಗಿದೆ.---------
ಕೋಟ್......ಎಪಿಎಂಸಿ ಮಾರುಕಟ್ಟೆ ಜಾಗ ಸಮತಟ್ಟು ಮಾಡಿಕೊಳ್ಳಲು ಅನುಮತಿ ನೀಡಲಾಗಿದ್ದು, ಅಲ್ಲಿ ಸಿಗುವಂತಹ ಖನಿಜವನ್ನು ಅಲ್ಲಿಯೇ ಶೇಖರಣೆ ಮಾಡಬೇಕು. ಅದಕ್ಕಾಗಿ ಒಬ್ಬ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಅಕ್ರಮವಾಗಿ ಸಾಗಣೆ ಮಾಡುವುದು ಕಂಡುಬಂದರೆ ಕ್ರಮಕೈಗೊಳ್ಳಲಾಗುವುದು.
- ರಾಜೇಶ್, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ