ಶಬರಿಮಲೈಗೆ ಹೊರಟಿದ್ದ ಮಿನಿ ಬಸ್ ಪಲ್ಟಿ, ಓರ್ವ ಸಾವು

| Published : Apr 17 2025, 12:04 AM IST

ಸಾರಾಂಶ

ಹಾನಗಲ್ಲ ತಾಲೂಕಿನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಮಿನಿ ಬಸ್‌ನಲ್ಲಿ ಶಬರಿಮಲೈಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬುಧವಾರ ಬೆಳಗಿನ ಜಾವ ಕೇರಳದ ಕೊಟ್ಟಾಯಂ ಜಿಲ್ಲೆಯ ಎರುಮಲೈ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವಿಗೀಡಾಗಿ, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಹಾನಗಲ್ಲ: ತಾಲೂಕಿನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಮಿನಿ ಬಸ್‌ನಲ್ಲಿ ಶಬರಿಮಲೈಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬುಧವಾರ ಬೆಳಗಿನ ಜಾವ ಕೇರಳದ ಕೊಟ್ಟಾಯಂ ಜಿಲ್ಲೆಯ ಎರುಮಲೈ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವಿಗೀಡಾಗಿ, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಹಾನಗಲ್ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ 30ಕ್ಕೂ ಹೆಚ್ಚು ಮಾಲಾಧಾರಿಗಳು ಏ. 14ರಂದು ಬೆಳಗ್ಗೆ ಶಬರಿಮಲೈಗೆ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ನಾನಾ ತೀರ್ಥಕ್ಷೇತ್ರಗಳ ದರ್ಶನ ಮಾಡಿ ಎರುಮಲೈಯಲ್ಲಿ ಸೇವೆ ಸಲ್ಲಿಸಿ ಶಬರಿಮಲೈಯತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ, ಸ್ಥಳೀಯ ಶಿವಮಣಿ ಅಯ್ಯಪ್ಪಸ್ವಾಮಿ ಆಶ್ರಮದ ಗುರುಸ್ವಾಮಿ ಮಾರುತಿ ಹರಿಹರ (50) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸಂತೋಷ ಜಾಧವ ಮತ್ತು ಗಿರಿರಾಜ ಕಲಾಲ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಕೇರಳದ ಪಾಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ಕೂಡಲೇ ಶಾಸಕ ಶ್ರೀನಿವಾಸ ಮಾನೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಮೂಲಕ ಕೇರಳ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಗಾಯಾಳುಗಳಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಮೃತಪಟ್ಟ ಓರ್ವ ಮಾಲಾಧಾರಿಯ ಪಾರ್ಥಿವ ಶರೀರ ತರಲು ಹಾಗೂ ಗಾಯಾಳುಗಳ ನೆರವಿಗೆ ಧಾವಿಸಲು ಐವರು ಮುಖಂಡರು ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಏಳು ಜನರ ತಂಡವನ್ನು ವಿಮಾನದ ಮೂಲಕ ಕೊಚ್ಚಿನ್‌ಗೆ ಕಳುಹಿಸಿದ್ದಾರೆ. ಸಂಜೆ ಹೊತ್ತಿಗೆ ಘಟನಾ ಸ್ಥಳ ತಲುಪಿದ ತಂಡ ಶರೀರ ತರಲು ವ್ಯವಸ್ಥೆ ಮಾಡುತ್ತಿದ್ದು, ಗಾಯಾಳುಗಳಿಗೆ ನೆರವಾಗಲಿದ್ದಾರೆ.