ಹಾಲುವರ್ತಿ ಹಳ್ಳಕ್ಕೆ ಮಿನಿ ಜಲಾಶಯ: ಸ್ಥಳ ಪರಿಶೀಲಿಸಿದ ಶಾಸಕ ಬಸವಂತಪ್ಪ

| Published : Aug 24 2024, 01:16 AM IST

ಹಾಲುವರ್ತಿ ಹಳ್ಳಕ್ಕೆ ಮಿನಿ ಜಲಾಶಯ: ಸ್ಥಳ ಪರಿಶೀಲಿಸಿದ ಶಾಸಕ ಬಸವಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ತಾಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಸವಾಪಟ್ಟಣ ಹಾಲುವರ್ತಿ ಹಳ್ಳಕ್ಕೆ ಮಿನಿ ಜಲಾಶಯ ನಿರ್ಮಾಣ ಹಿನ್ನೆಲೆ ಶಾಸಕ ಕೆ.ಎಸ್. ಬಸವಂತಪ್ಪ ಸ್ಥಳೀಯ ಮುಖಂಡರು, ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಸಿದರು.

- 2.5 ಕಿಮೀ ದೂರ ಕಾಲ್ನಡಿಗೆಯಲ್ಲೇ ಸಾಗಿ ಹಾಲುವರ್ತಿ ಹಳ್ಳ ಪ್ರದೇಶ ವೀಕ್ಷಣೆ

- - -- ಅಧಿಕಾರಿಗಳೊಂದಿಗೆ ಚರ್ಚಿಸಿ, ಮಿನಿ ಡ್ಯಾಂ ನಿರ್ಮಾಣಕ್ಕೆ ಮುಖ್ಯಮಂತ್ರಿಗೆ ಮನವಿ ಭರವಸೆ

- ಯೋಜನೆ ಜಾರಿಯಿಂದ ಹತ್ತಾರು ಗ್ರಾಮಗಳ ಕುಡಿಯುವ ನೀರಿಗೆ ಪರಿಹಾರ: ಗ್ರಾಮಸ್ಥರು

- - - ಕನ್ನಡಪ್ರಭ ವಾರ್ತೆ ದಾವಣಗೆರೆ ಚನ್ನಗಿರಿ ತಾಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಸವಾಪಟ್ಟಣ ಹಾಲುವರ್ತಿ ಹಳ್ಳಕ್ಕೆ ಮಿನಿ ಜಲಾಶಯ ನಿರ್ಮಾಣ ಹಿನ್ನೆಲೆ ಶಾಸಕ ಕೆ.ಎಸ್. ಬಸವಂತಪ್ಪ ಸ್ಥಳೀಯ ಮುಖಂಡರು, ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಸಿದರು.

ಬಸವಾಪಟ್ಟಣದ ಶ್ರೀ ಹಾಲಸ್ವಾಮಿ ಮಠದ ಪಕ್ಕದ ಗುಡ್ಡದ ಬಳಿ ಹರಿಯುವ ಹಾಲುವರ್ತಿ ಹಳ್ಳಕ್ಕೆ ಮಿನಿ ಜಲಾಶಯ ನಿರ್ಮಾಣ ಮಾಡಬೇಕು ಎಂದು ಸ್ಥಳೀಯ ಗ್ರಾಮಸ್ಥರು, ರೈತರ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ಸುಮಾರು 2.5 ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ಸಾಗಿ ಹಾಲುವರ್ತಿ ಹಳ್ಳ ಪರಿಶೀಲನೆ ನಡೆಸಿದರು.

ಹತ್ತಾರು ಹಳ್ಳಿಗಳಿಗೆ ವರದಾನ:

ಈ ಸಂದರ್ಭ ಮಾತನಾಡಿದ ಗ್ರಾಮಸ್ಥರು, ಮಳೆ ಬಂದಾಗ ಇಲ್ಲಿ ಹರಿಯುವ ಹಳ್ಳ ದಾಗಿನಕಟ್ಟೆ ಕೆರೆ ಸೇರಿದಂತೆ 4 ಹಳ್ಳಿಗಳ ಕೆರೆಗಳಿಗೆ ನೀರು ಸೇರುತ್ತದೆ. ಇದರಿಂದ ಈ ಭಾಗದ ಜಮೀನು, ಜನ, ಜಾನುವಾರು ಕುಡಿಯುವ ನೀರಿಗೆ ಅನುಕೂಲ ಆಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಮಿನಿ ಜಲಾಶಯ ನಿರ್ಮಿಸಿದರೆ, ಸುಮಾರು 10-15 ಕಿ.ಮೀ. ದೂರದಷ್ಟು ನೀರು ನಿಲುಗಡೆಯಾಗಿ ಅಂದಾಜು 45 ಅಡಿ ನೀರು ಸಂಗ್ರಹಿಸಬಹುದು. ಇದರಿಂದ ಅಂತರ್ಜಲ ಹೆಚ್ಚಳವಾಗಿ ಸಾವಿರಾರು ಎಕರೆಗೆ ನೀರೊದಗಿಸಬಹುದು. ಬಸವಾಪಟ್ಟಣ, ದಾಗಿನಕಟ್ಟೆ, ಸಾಗರಪೇಟೆ, ಹರಸಾಗರ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳ ಕುಡಿಯುವ ನೀರಿನ ಬವಣೆ ನೀಗಿಸಬಹುದು ಎಂದು ಶಾಸಕರ ಗಮನಕ್ಕೆ ತಂದರು.

ಸಿಎಂ ಜತೆ ಚರ್ಚೆ ಭರವಸೆ:

ಶಾಸಕ ಕೆ.ಎಸ್.ಬಸವಂತಪ್ಪ ರೈತರ ಮನವಿ ಆಲಿಸಿ, ಸುಮಾರು ₹5 ಕೋಟಿ ವೆಚ್ಚದಲ್ಲಿ ಮಿನಿ ಜಲಾಶಯ ನಿರ್ಮಿಸುವ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ಬಸವಾಪಟ್ಟಣದ ಹಾಲುವರ್ತಿ ಹಳ್ಳಕ್ಕೆ ಮಿನಿ ಜಲಾಶಯ ನಿರ್ಮಿಸಿದರೆ ಬೇಸಿಗೆ ಕಾಲದಲ್ಲಿ ಅಂತರ್ಜಲ ಮಟ್ಟ ಕುಸಿಯದಂತೆ ನೀರಾವರಿ ಪ್ರದೇಶ ಮತ್ತು ಜನ, ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸಬಹುದು. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಿನಿ ಜಲಾಶಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು. ಅಗತ್ಯ ಅನುದಾನ ತರಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಏತ ನೀರಾವರಿ ಯೋಜನೆಗೆ ಕೋಟ್ಯಂತರ ರು. ಖರ್ಚು ಮಾಡುವುದಕ್ಕಿಂತ ಕೇವಲ ₹5-₹6 ಕೋಟಿ ವೆಚ್ಚದಲ್ಲಿ ಮಳೆ ಬಂದಾಗ ವ್ಯರ್ಥವಾಗಿ ನೀರು ಹರಿದುಹೋಗುವ ಹಳ್ಳಗಳಿಗೆ ಚೆಕ್ ಡ್ಯಾಂ ಅಥವಾ ಮಿನಿ ಜಲಾಶಯ ನಿರ್ಮಿಸಿ, ನೀರು ಸಂಗ್ರಹಿಸಿದರೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ವಿಶೇಷವಾಗಿ ಇಂತಹ ಯೋಜನೆಗಳಿಗೆ ಆದ್ಯತೆ ಕೊಡಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯವೂ ಆಗಿದೆ ಎಂದು ಹೇಳಿದರು.

ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ, ಅಲ್ಪಸಂಖ್ಯಾತರ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಇದಾಯತ್ತುಲ್ಲಾ, ಗ್ರಾಪಂ ಮಾಜಿ ಅಧ್ಯಕ್ಷ ಡೊ.ಇಬ್ರಾಹಿಂ ಸಾಬ್, ಟಿ.ಅಯಾವುಲ್ಲಾ ಸೇರಿದಂತೆ ಗ್ರಾಮಸ್ಥರು ಇದ್ದರು.

- - - -23ಕೆಡಿವಿಜಿ1, 2:

ಚನ್ನಗಿರಿ ತಾಲೂಕು ಬಸವಾಪಟ್ಟಣದ ಶ್ರೀ ಹಾಲಸ್ವಾಮಿಗಳ ಮಠದ ಪಕ್ಕದ ಗುಡ್ಡದ ಬಳಿ ಹರಿಯುವ ಹಾಲುವರ್ತಿ ಹಳ್ಳಕ್ಕೆ ಮಿನಿ ಜಲಾಶಯ ನಿರ್ಮಾಣ ಮಾಡಬೇಕೆಂಬ ಸ್ಥಳೀಯ ಗ್ರಾಮಸ್ಥರು, ರೈತರ ಮನವಿ ಹಿನ್ನೆಲೆ ಗ್ರಾಮಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದರು.