ಸಾರಾಂಶ
- 1 ಸಾವಿರ ಬೋನಸ್ ಬಗ್ಗೆಯೂ ಚರ್ಚೆ: ಶಾಸಕ ಬಸವಂತಪ್ಪ । ದಾವಣಗೆರೆ ಬಂದ್ ವಾಪಸ್ ಪಡೆದ ರೈತ ಸಂಘ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಕಾಯಿದೆ ಜಾರಿ, ಪ್ರತಿ ಕ್ವಿಂಟಲ್ ಭತ್ತಕ್ಕೆ ರಾಜ್ಯ ಸರ್ಕಾರದ ₹1 ಸಾವಿರ ಬೋನಸ್ ನೀಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಬಂಧಿಸಿದ ಸಚಿವರ ಜೊತೆ ಚರ್ಚಿಸಲು ದಿನಾಂಕ ನಿಗದಿಪಡಿಸಲಾಗುವುದು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು. ಈ ಭರವಸೆ ಮೇರೆಗೆ ಮೇ 25ರಂದು ರಾಜ್ಯ ರೈತ ಸಂಘ, ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣ ಕರೆ ನೀಡಿದ್ದ ದಾವಣಗೆರೆ ಬಂದ್ ಹಿಂಪಡೆಯಲಾಗಿದೆ.ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯ ಶಾಸಕ ಕೆ.ಎಸ್. ಬಸವಂತಪ್ಪ ಜೊತೆಗೆ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರ ಸುದೀರ್ಘ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗೆ ರಾಜ್ಯಮಟ್ಟದಲ್ಲಿ ಸುಗ್ರೀವಾಜ್ಞೆ ಹೊರಡಿಸಬೇಕು. ಇದಕ್ಕಾಗಿ ಸರ್ಕಾರ, ಅಧಿಕಾರಿಗಳ ಸಭೆ ನಡೆಸಬೇಕು, ಸಹಾಯಧನ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ತೆರೆಯುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಎಲ್ಲ ಹಂತದ ತಯಾರಿಯಾಗಿತ್ತು. ಆದರೆ, ಹಿಂಗಾರು ಹಾಗೂ ಪೂರ್ವ ಮುಂಗಾರು ಮಧ್ಯೆ ಭತ್ತದ ಬೆಳೆ ಬೆಳೆದಿರುವುದರಿಂದ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ತೆರೆಯಲು ತಾಂತ್ರಿಕ ಅಡಚಣೆ ಉಂಟಾಗಿತ್ತು. ಇದನ್ನು ಈಗ ಸರಿಪಡಿಸಲಾಗುತ್ತಿದೆ ಎಂದರು.ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಕನಿಷ್ಠ ಬೆಂಬಲ ಬೆಲೆಗೆ ಸುಗ್ರೀವಾಜ್ಞೆ ಜಾರಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನರ ನೇತೃತ್ವದಲ್ಲಿ ಮೇ 23ರಂದು ಸಿಎಂ ಕಚೇರಿಯಲ್ಲಿ ಮುಂದಿನ ಸಭೆಗೆ ದಿನಾಂಕ ನಿಗದಿಯಾಗಲಿದೆ. ಸಭೆಯಲ್ಲಿ ಈ ಎಲ್ಲ ವಿಚಾರಗಳನ್ನು ಸಮಗ್ರವಾಗಿ ಚರ್ಚಿಸೋಣ. ಸಹಾಯಧನ ಕೊಡಿಸುವ ವಿಚಾರ ಚರ್ಚೆ ಮಾಡಲಾಗುವುದು. ಇದಕ್ಕೆ ನಮ್ಮೆಲ್ಲರ ಸಹಕಾರವೂ ಇದೆ. ದಾವಣಗೆರೆ ಬಂದ್ ಬೇಡ ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕುಸಿದಿದ್ದು, ಕೂಡಲೇ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ, ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸದಂತೆ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ನೋಡಿಕೊಳ್ಳಬೇಕು. ಸಿಎಂ ಸಭೆಯಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡುತ್ತೇವೆ. ಕನಿಷ್ಠ ರಾಜ್ಯ ಮಟ್ಟಕ್ಕಾದರೂ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಸಂಬಂಧ ಸಿಎಂ ಮೇಲೆ ಒತ್ತಡ ಹೇರುತ್ತೇವೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿ, ಮಾಯಕೊಂಡ, ದಾವಣಗೆರೆ ಎಪಿಎಂಸಿ ಮಾರುಕಟ್ಟೆ ಆವರಣಗಳಲ್ಲಿ ತಲಾ 1 ಸಾವಿರ ಕ್ವಿಂಟಲ್ ಭತ್ತ ಮತ್ತು ಮೆಕ್ಕೇಜೋಳ ಡ್ರೈಯರ್ ಯಂತ್ರಗಳನ್ನು ಅಳವಡಿಸಿ ಉಚಿತವಾಗಿ ಧಾನ್ಯ ಒಣಗಿಸುವ ವ್ಯವಸ್ಥೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ವಿಸ್ತೃತ ವರದಿ ಸಿದ್ಧಪಡಿಸಲು ಎಪಿಎಂಸಿ ಕಾರ್ಯದರ್ಶಿಗೆ ಸೂಚಿಸಿದರು. ಇದೇ ವಿಚಾರವಾಗಿ ರಾಜ್ಯ ಎಪಿಎಂಸಿ ನಿರ್ದೇಶಕ ಶಿವಾನಂದ ಕಪಾಶಿ ಅವರಿಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಎಪಿಎಂಸಿಯಲ್ಲಿ ಅನುದಾನ ಲಭ್ಯವಿದ್ದು, ಪ್ರಸ್ತಾವನೆ ಸಲ್ಲಿಸಿದರೆ ಈ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.
ಅನಂತರ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಶಾಸಕರು ಮತ್ತು ಜಿಲ್ಲಾಧಿಕಾರಿ ಭರವಸೆ ಮೇರೆಗೆ ಮೇ 25ರಂದು ಉದ್ದೇಶಿತ ದಾವಣಗೆರೆ ಬಂದ್ ಕರೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಆದಷ್ಟು ಬೇಗನೆ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ರೈತರ ಬೇಡಿಕೆಗಳಿಗೆ ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ಮುಖಂಡರಾದ ಆಲೂರು ಪರಶುರಾಮ, ಚಿನ್ನಸಮುದ್ರ ಭೀಮಾನಾಯ್ಕ, ಕುಮಾರಹಳ್ಳಿ ಪ್ರಭು, ರಾಜನಹಟ್ಟಿ ರಾಜು ಚಿಕ್ಕಮಲ್ಲನಹೊಳೆ ಚಿರಂಜೀವಿ, ಹುಚ್ಚವ್ವನಹಳ್ಳಿ ಪ್ರಕಾಶ, ಗಂಡುಗಲಿ, ಕಬ್ಬೂರು ತಿಪ್ಪಣ್ಣ, ಕೊಡಗನೂರು ತಿಮ್ಮಣ್ಣ, ದೇವ್ಲಾನಾಯ್ಕ, ಕುಕ್ಕವಾಡ ಬಸವರಾಜ, ರಾಮಣ್ಣ, ಆನಗೋಡು ಭೀಮಣ್ಣ, ಸುರೇಶ ನಾಯ್ಕ, ಯರವನಾಗತಿಹಳ್ಳಿ ರುದ್ರಣ್ಣ, ಕೋಲ್ಕುಂಟೆ ಬಸವರಾಜ ಇತರರು ಇದ್ದರು.
- - --22ಕೆಡಿವಿಜಿ18:
ದಾವಣಗೆರೆ ಡಿಸಿ ಕಚೇರಿಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ರೈತರನ್ನುದ್ದೇಶಿಸಿ ಮಾತನಾಡಿದರು.