ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಲಿ: ಮೂಕಹಳ್ಳಿ ಮಹದೇವಸ್ವಾಮಿ

| Published : Dec 14 2024, 12:47 AM IST

ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಲಿ: ಮೂಕಹಳ್ಳಿ ಮಹದೇವಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಡಿ.೨೩ರಂದು ಮೈಸೂರಿನ ಮುಕ್ತ ವಿಶ್ವವಿದ್ಯಾಲಯ ಶತಮಾನೋತ್ಸವದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬೆಳಗ್ಗೆ ೧೧ ಗಂಟೆಗೆ ರೈತ ದಿನಾಚರಣೆ, ರೈತರ ಹಬ್ಬ, ರಾಜ್ಯಮಟ್ಟದ ರೈತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೂಕಹಳ್ಳಿ ಮಹದೇವಸ್ವಾಮಿ ಚಾಮರಾನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಡಿ.೨೩ರಂದು ಮೈಸೂರಿನ ಮುಕ್ತ ವಿಶ್ವವಿದ್ಯಾಲಯ ಶತಮಾನೋತ್ಸವದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬೆಳಗ್ಗೆ ೧೧ ಗಂಟೆಗೆ ರೈತ ದಿನಾಚರಣೆ, ರೈತರ ಹಬ್ಬ, ರಾಜ್ಯಮಟ್ಟದ ರೈತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಕಹಳ್ಳಿ ಮಹದೇವಸ್ವಾಮಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ವಿ.ಸೋಮಣ್ಣ, ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಭಾಗವಹಿಸಲಿದ್ದಾರೆ ಎಂದರು. ಸಮಾವೇಶದಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಲಿ. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಲಿ. ಕೃಷಿ ಸಾಲ ನೀತಿ ಬದಲಾಗಲಿ, ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಸಾಲ ನೀಡುವಂತಾಗಲಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್, ಕೃಷಿ ಭೂಮಿ ಮುಟ್ಟುಗೋಲು ಕಾಯ್ದೆ ರದ್ದಾಗಬೇಕು ಎಂದು ಆಗ್ರಹಿಸಿದರು.ಕೃಷಿ ಉಪಕರಣಗಳು ರಸಗೊಬ್ಬರ ಕೀಟನಾಶಕ, ಮೊಸರು ಮಜ್ಜಿಗೆ ಇತರೆ ಉತ್ಪನ್ನಗಳ ಮೇಲೆ ವಿಧಿಸಿರುವ ಜಿಎಸ್‌ಟಿ ಸುಂಕ ರದ್ದಾಗಲಿ. ಮಹಿಳಾ ಸಂಘಗಳಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಿರುಕುಳ ನಿಲ್ಲಿಸಲು ಕಠಿಣ ಕಾನೂನು ಜಾರಿ ಮಾಡಿ, ನಕಲಿ ಬಿತ್ತನೆ ಬೀಜ ನಕಲಿ ರಸಗೊಬ್ಬರ ನಕಲಿ ಕೀಟನಾಶಕ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ವಿರುದ್ಧ ಕಠಿಣ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು ಎಂದರು. ಕೃಷಿ ಭೂಮಿ, ನೀರು ಅರಣ್ಯ ಪರಿಸರ ರಕ್ಷಿಸಲು ಜಲಾಶಯಗಳ, ಕೆರೆ ಕಟ್ಟೆಗಳ ಹೂಳು ತೆಗೆಸಲು ಕಾರ್ಯ ಯೋಜನೆ ಜಾರಿ ಮಾಡಿ, ಪರಿಸರ ಸಂರಕ್ಷಿಸಲು ಸಾವಿರಾರು ಮರ ಬೆಳೆಸಿದ ಕಂಪನಿ ಸಂಸ್ಥೆಗಳಿಗೆ ಶೇ.೨೫ ತೆರಿಗೆ ವಿನಾಯಿತಿ ನೀಡಬೇಕು. ಕಬ್ಬಿನ ಎಂಆರ್‌ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡುವ ಮಾನದಂಡ ಜಾರಿಗೊಳಿಸಬೇಕು.

ಫಸಲ್ ಭೀಮಾ ಬೆಳೆ ವಿಮಾ ಪದ್ಧತಿ ನೀತಿ ಬದಲಾವಣೆ, ಪ್ರತಿ ರೈತನ ಹೊಲದ ಬೆಳೆ ವಿಮೆ ನಷ್ಟ ಪರಿಹಾರ ಸಿಗುವಂತಾಗಬೇಕು. ಎಪಿಎಂಸಿಗಳಲ್ಲಿ ದಲ್ಲಾಳಿಗಳು ರೈತರಿಂದ ಶೇ.10 ರಷ್ಟು ಕಮಿಷನ್ ವಸೂಲಿ ನಿಲ್ಲಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅತಿವೃಷ್ಟಿ ಮಳೆಹಾನಿ, ಬರ ಪರಿಹಾರ, ಪ್ರಕೃತಿ ವಿಕೋಪ ಪರಿಹಾರ ಮಾನದಂಡ ಬದಲಾಯಿಸಿ ಸಂಪೂರ್ಣ ನಷ್ಟ ಪರಿಹಾರ ನೀಡಲಿ. ರೈತರ ಮಗನ ಮದುವೆ ಆಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಶೇ.20 ಮೀಸಲಾತಿ ನೀಡುವ ನೀತಿ ಜಾರಿಗೆ ಬರಬೇಕು ಎಂದರು.ತೆಲಂಗಾಣ ಮಾದರಿಯಲ್ಲಿ 60 ವರ್ಷ ತುಂಬಿದ ರೈತರಿಗೆ ₹10,000 ಪಿಂಚಣಿ ನೀಡುವ ಯೋಜನೆ ಜಾರಿಗೆ ತರಲಿ, ರಾಜ್ಯದಲ್ಲಿ ೧೦ ಲಕ್ಷ ರೈತರು ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಕೂಡಲೇ ಅವರಿಗೆ ಸಾಗುವಳಿ ಪತ್ರ ನೀಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ ಹತ್ತು ಗಂಟೆ ಸಮರ್ಪಕ ವಿದ್ಯುತ್ ನೀಡಬೇಕು. ನರ್ಸರಿಗಳಲ್ಲಿ ಕಳಪೆ ಬೀಜ ಬಳಸಿ ಸಸಿಗಳನ್ನು ವಿತರಿಸುವ ಮಾಲೀಕರ ವಿರುದ್ಧ ಕಠಿಣ ಕಾನೂನು ತರಬೇಕು. ಜಿಲ್ಲೆಯ ರೈತರು ಸ್ವಯಂ ಪ್ರೇರಿತರಾಗಿ ರೈತರ ಹಬ್ಬ ಆಚರಿಸಲು ಮೈಸೂರಿಗೆ ಬರಬೇಕು ಈ ಮೂಲಕ ರೈತರ ಕೂಗು ಸರ್ಕಾರಕ್ಕೆ ಮುಟ್ಟಿಸೋಣ ಎಂದು ಮನವಿ ಮಾಡಿದರು.ಗುಂಡ್ಲುಪೇಟೆ ನಾಗಾರ್ಜುನ್, ಉಡಿಗಾಲ ರೇವಣ್ಣ, ಪಟೇಲ್ ಶಿವಮೂರ್ತಿ, ನಂಜೇದೇವನಪುರ ಸತೀಶ್, ಸುಂದ್ರಪ್ಪ, ಹೆಗ್ಗೋಠಾರ ಶಿವಸ್ವಾಮಿ, ರಾಜಶೇಖರ್, ಗುರುಸ್ವಾಮಿ, ಎಂ.ಬಿ. ರಾಜು ಇದ್ದರು.