ಸಾರಾಂಶ
ಕಾನೂನು ಪದವಿ ಮುಗಿಸಿದ ಶಾಸಕರ ಸಂಖ್ಯೆ ಕಡಿಮೆ ಇದೆ. ಕಾನೂನಿನ ಬಗ್ಗೆ ಮಾಹಿತಿ ಇದ್ದವರು ಬೆರಳೆಣಿಕೆಯಷ್ಟಿದ್ದಾರೆ. ಪ್ರತಿಷ್ಠೆ ಬಿಟ್ಟು, ಅಭಿವೃದ್ಧಿಪರ ಚಿಂತನೆ ಮಾಡುವವರ ಅವಶ್ಯಕತೆ ಇಂದು ಅಗತ್ಯವಾಗಿದೆ ಎಂದು ಬಸವರಾಜ ರಾಯರಡ್ಡಿ ಹೇಳಿದರು.
ಯಲಬುರ್ಗಾ:
ಪ್ರಸಕ್ತ ರಾಜಕೀಯದಲ್ಲಿ ವಂಶ ಪಾರಂಪರ್ಯ, ಗಣಿ ಉದ್ಯಮಿಗಳು ರಾಜಕೀಯಕ್ಕೆ ಬರುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.ತಾಲೂಕಿನ ಚಿಕ್ಕಮ್ಯಾಗೇರಿಯಲ್ಲಿ ಮಂಗಳವಾರ ನೂತನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಪದವಿ ಮುಗಿಸಿದ ಶಾಸಕರ ಸಂಖ್ಯೆ ಕಡಿಮೆ ಇದೆ. ಕಾನೂನಿನ ಬಗ್ಗೆ ಮಾಹಿತಿ ಇದ್ದವರು ಬೆರಳೆಣಿಕೆಯಷ್ಟಿದ್ದಾರೆ. ಪ್ರತಿಷ್ಠೆ ಬಿಟ್ಟು, ಅಭಿವೃದ್ಧಿಪರ ಚಿಂತನೆ ಮಾಡುವವರ ಅವಶ್ಯಕತೆ ಇಂದು ಅಗತ್ಯವಾಗಿದೆ ಎಂದು ಹೇಳಿದರು.
ಕೃಷ್ಣಾ ಬಿಸ್ಕೀಂ ನೀರಾವರಿ ಯೋಜನೆ ಜಾರಿ ಕುರಿತು ಸುಪ್ರೀಂ ಕೋರ್ಟ್ ವ್ಯಾಜ್ಯ ಇರುವುದರಿಂದ ಯೋಜನೆ ಜಾರಿ ವಿಳಂಬವಾಗಿದೆ. ಆದರೆ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಅವರು ಬೇವೂರಿನಲ್ಲಿ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿ, ಪ್ರಚಾರ ಪಡೆದುಕೊಂಡರು. ನೀರಾವರಿ ಆಯ್ತಾ? ನೀರು ಬಂತಾ? ಅದು ಸುಳ್ಳು ಅಡಿಗಲ್ಲು ಎಂದು ಜರಿದರು.ನ್ಯಾಯಾಲಯದಲ್ಲಿ ವ್ಯಾಜ್ಯ ಬಗೆಹರಿದ ಬಳಿಕ ಭೂಸ್ವಾಧೀನಕ್ಕಾಗಿ ರಾಜ್ಯ ಸರ್ಕಾರ ಅಂದಾಜು ₹೮೦೦೦ ಕೋಟಿ ಅನುದಾನ ಮೀಸಲಿರಿಸಿದೆ ಎಂದು ರಾಯರಡ್ಡಿ ಹೇಳಿದರು.