ಗಣೇಶ ಹಬ್ಬದ ಹಿನ್ನೆಲೆ ನಗರದ ಪ್ರಮುಖ ರಸ್ತೆ ಬದಿಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಗಣಪನ ಮೂರ್ತಿಗಳ ಸಾಲು ಕಂಡುಬರುತ್ತಿದೆ
ಬಳ್ಳಾರಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯ ನಡುವೆಯೇ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಗಣಿನಾಡು ಬಳ್ಳಾರಿ ಸಜ್ಜಾಗಿದೆ. ಮನೆ ಮನೆಗಳಲ್ಲಿ ಹಬ್ಬದ ಸಿದ್ಧತೆ ಜೋರಾಗಿದ್ದು, ನಗರದ ಪ್ರಮುಖ ಮಾರುಕಟ್ಟೆಗಳು ಗಣಪನ ಮೂರ್ತಿಗಳು, ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಬಂದ ಜನರಿಂದ ಗಿಜಿಗುಡುತ್ತಿವೆ. ಹಬ್ಬದ ಮುನ್ನಾದಿನವಾದ ಭಾನುವಾರ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಜೋರಾಗಿತ್ತು.
ಗಣೇಶನನ್ನು ಮನೆಗೆ ಬರಮಾಡಿಕೊಳ್ಳಲು ಜನರು ವಿವಿಧ ಆಕಾರ, ಗಾತ್ರ ಮತ್ತು ವಿನ್ಯಾಸದ ಮಣ್ಣಿನ ಗಣಪನ ಮೂರ್ತಿ ಆಯ್ಕೆ ಮಾಡುತ್ತಿದ್ದು, ಪರಿಸರ ಸ್ನೇಹಿ ಮಣ್ಣಿನ ಗಣಪನಿಗೆ ಈ ಬಾರಿ ಬೇಡಿಕೆ ಹೆಚ್ಚಾಗಿದೆ. ಮತ್ತೊಂದೆಡೆ, ನಿಷೇಧದ ನಡುವೆಯೂ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳು ಕೆಲವು ಕಡೆ ಮಾರಾಟಕ್ಕೆ ಸಜ್ಜಾಗಿರುವುದು ಕಂಡುಬಂದಿದೆ.ಮಾರುಕಟ್ಟೆಯಲ್ಲಿ ಗಣಪನದ್ದೇ ದರ್ಬಾರ್:ಗಣೇಶ ಹಬ್ಬದ ಹಿನ್ನೆಲೆ ನಗರದ ಪ್ರಮುಖ ರಸ್ತೆ ಬದಿಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಗಣಪನ ಮೂರ್ತಿಗಳ ಸಾಲು ಕಂಡುಬರುತ್ತಿದೆ. ಚಿಕ್ಕ ಗಾತ್ರದ ಮನೆ ಗಣಪನಿಂದ ಹಿಡಿದು ಬೃಹತ್ ಸಾರ್ವಜನಿಕ ಗಣೇಶ ಮೂರ್ತಿಗಳವರೆಗೆ ವಿವಿಧ ಮಾದರಿಯ ಮೂರ್ತಿಗಳು ಜನರ ಗಮನ ಸೆಳೆದವು.
ಪ್ರತಿ ವರ್ಷ ಗಣೇಶನ ಮೂರ್ತಿಗಳ ವಿನ್ಯಾಸದಲ್ಲಿ ಹೊಸತನ ಕಾಣಿಸಿಕೊಳ್ಳುತ್ತಿದ್ದು, ಈ ಬಾರಿಯೂ ಅದೇ ಟ್ರೆಂಡ್ ಮುಂದುವರಿದಿದೆ. ಸಾಂಪ್ರದಾಯಿಕ ಗಣಪನ ಜತೆಗೆ ವಿವಿಧ ಭಂಗಿ, ಅಲಂಕಾರ ಹಾಗೂ ವಿಶಿಷ್ಟ ಪರಿಕಲ್ಪನೆಯ ಮೂರ್ತಿಗಳಿಗೆ ಯುವಕರಲ್ಲಿ ವಿಶೇಷ ಆಸಕ್ತಿ ಕಂಡುಬಂದಿದೆ.ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ ಅಂತಿಮ ಹಂತ ತಲುಪಿವೆ. ವರ್ಷದಿಂದ ವರ್ಷಕ್ಕೆ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬಳ್ಳಾರಿ ನಗರವೊಂದರಲ್ಲೇ 500ಕ್ಕೂ ಅಧಿಕ ಕಡೆ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ.
ತಮ್ಮ ಬಡಾವಣೆಯಲ್ಲಿ ವಿಶಿಷ್ಟವಾಗಿ ಕಾಣಿಸಿಕೊಳ್ಳುವಂತೆ ಗಣಪನ ಮೂರ್ತಿ ಸಿದ್ಧಪಡಿಸಿರುವ ಸಂಘಟನೆ, ಪ್ರಸ್ತುತ ಟ್ರೆಂಡ್‌ಗೆ ತಕ್ಕಂತೆ ವಿಭಿನ್ನ ವೇಷಭೂಷಣ ಮತ್ತು ಪರಿಕಲ್ಪನೆಯ ಗಣಪನನ್ನು ಪ್ರತಿಷ್ಠಾಪಿಸಲು ಮುಂದಾಗಿವೆ. ಕೆಲವು ಸಂಘಗಳು ಸಾಮಾಜಿಕ ಸಂದೇಶ ಸಾರುವ ರೀತಿಯ ಮೂರ್ತಿಗಳು ಹಾಗೂ ಅಲಂಕಾರಕ್ಕೆ ಆದ್ಯತೆ ನೀಡಿದ್ದರೆ ಇನ್ನೂ ಕೆಲವು ಸಂಘಗಳು ಬೃಹತ್ ಮೂರ್ತಿಗಳ ಮೂಲಕ ಗಮನ ಸೆಳೆಯಲು ಸಿದ್ಧತೆ ನಡೆಸಿವೆ.ಗಣೇಶ ಪ್ರತಿಷ್ಠಾಪನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲು ಸಂಘಗಳು ಸಿದ್ಧತೆ ನಡೆಸಿವೆ.
ಮೂರ್ತಿಗಳಿಗೆ ಅಂತಿಮ ಸ್ಪರ್ಶ: ಗಣೇಶ ಹಬ್ಬಕ್ಕಾಗಿ ಮೂರ್ತಿಗಳನ್ನು ಸಿದ್ಧಪಡಿಸುವ ಕಲಾವಿದರಿಗೆ ಕಳೆದ ಎರಡು–ಮೂರು ತಿಂಗಳುಗಳಿಂದ ಬಿಡುವೇ ಇಲ್ಲ. ನಗರದ ವಿವಿಧ ಭಾಗಗಳಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡಿರುವ ಕಲಾವಿದರು ಹಗಲು–ರಾತ್ರಿ ಎನ್ನದೆ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.ಭಾನುವಾರವೂ ಹಲವು ಕಲಾವಿದರು ನಗರದ ಕುಂಬಾರ ಓಣಿಯಲ್ಲಿ ಗಣೇಶನ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯದಲ್ಲಿ ನಿರತರಾಗಿದ್ದರು. ಬಣ್ಣ ಬಳಿಯುವುದು, ಕಿರೀಟ ಅಳವಡಿಸುವುದು, ಆಭರಣ ಜೋಡಿಸುವುದು ಸೇರಿದಂತೆ ಅಂತಿಮ ಹಂತದ ಕೆಲಸಗಳು ಭರದಿಂದ ನಡೆದವು.
ಹಬ್ಬ ಸಮೀಪಿಸುತ್ತಿದ್ದಂತೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಕಲಾವಿದರಿಗೆ ಮೂರ್ತಿ ನಿಗದಿತ ಸಮಯಕ್ಕೆ ಪೂರ್ಣಗೊಳಿಸುವ ಒತ್ತಡವೂ ಹೆಚ್ಚಾಗಿದೆ. ಸಣ್ಣ ಮನೆ ಗಣಪನಿಂದ ಹಿಡಿದು ಸಾರ್ವಜನಿಕ ಪ್ರತಿಷ್ಠಾಪನೆಗೆ ಬೇಕಾದ ಬೃಹತ್ ಮೂರ್ತಿಗಳವರೆಗೆ ವಿವಿಧ ಗಾತ್ರದ ಮೂರ್ತಿ ಮಾರುಕಟ್ಟೆಗೆ ಬಂದಿವೆ.ಗಣೇಶ ಹಬ್ಬದ ಹಿನ್ನೆಲೆ ಪೂಜಾ ಸಾಮಗ್ರಿಗಳಿಗೂ ಬೇಡಿಕೆ ಹೆಚ್ಚಾಗಿದೆ. ಹೂವು, ಹಣ್ಣು, ತೆಂಗಿನಕಾಯಿ, ಬಾಳೆಕಂದು, ಬಾಳೆಹಣ್ಣು, ಅಕ್ಕಿ, ಕಬ್ಬು ಸೇರಿದಂತೆ ಪೂಜೆಗೆ ಅಗತ್ಯವಿರುವ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಹಬ್ಬದ ಬೇಡಿಕೆಗೆ ಅನುಗುಣವಾಗಿ ಹೂವು ಮತ್ತು ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಹಬ್ಬದ ಖರೀದಿ ಹೆಚ್ಚುವರಿ ಹೊರೆಯಾಗಿದೆ. ಆದರೂ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆ ಅಡ್ಡಿಯಾಗಿಲ್ಲ.
ನಗರದ ಬೆಂಗಳೂರು ರಸ್ತೆ, ಬ್ರಾಹ್ಮಣಬೀದಿ, ಗ್ರಹಂ ರಸ್ತೆ, ಕಾಳಮ್ಮ ಬೀದಿ, ದೊಡ್ಡ ಮಾರುಕಟ್ಟೆ ಬೀದಿ, ತೇರುಬೀದಿಯಲ್ಲಿ ಹಬ್ಬಕ್ಕಾಗಿ ವಿವಿಧ ವಸ್ತುಗಳ ಖರೀದಿಯಲ್ಲಿ ಜನರು ಮುಗಿಬಿದ್ದಿದ್ದರು. ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿ ವಿವಿಧ ಬಗೆಯ ಗಣಪನ ಮೂರ್ತಿ, ಬಾಳೆಕಂದು, ಹೂವು, ಹಣ್ಣು ಖರೀದಿಯಲ್ಲಿ ಮಹಿಳೆಯರು ತೊಡಗಿಸಿಕೊಂಡಿರುವುದು ಕಂಡು ಬಂತು.ಗ್ರಾಮೀಣ ಭಾಗದಲ್ಲೂ ಹಬ್ಬದ ಕಳೆ: ನಗರಕ್ಕೆ ಮಾತ್ರ ಸೀಮಿತವಾಗದ ಗಣೇಶ ಹಬ್ಬದ ಸಂಭ್ರಮ ಗ್ರಾಮೀಣ ಭಾಗದಲ್ಲೂ ಕಳೆಗಟ್ಟಿದೆ. ಬಳ್ಳಾರಿ ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದ್ದಾರೆ. ಗ್ರಾಮಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳಗಳನ್ನು ಸ್ವಚ್ಛಗೊಳಿಸಿ, ವಿದ್ಯುತ್ ದೀಪಾಲಂಕಾರ ಹಾಗೂ ಶಾಮಿಯಾನಗಳ ವ್ಯವಸ್ಥೆ ಮಾಡಲಾಗಿದೆ. ಯುವ ಸಂಘಗಳು ತಮ್ಮದೇ ಆದ ರೀತಿಯಲ್ಲಿ ಗಣೇಶನ ಮೂರ್ತಿ ಆಯ್ಕೆ ಮಾಡಿಕೊಂಡಿದ್ದು, ಹಬ್ಬದ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಿವೆ.
ಕೆಲವು ಗ್ರಾಮಗಳಲ್ಲಿ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಗಣೇಶ ಪ್ರತಿಷ್ಠಾಪನೆ ನಡೆಯಲಿದ್ದು, ಮನೆ ಮನೆಗಳಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರೂ ಹಬ್ಬದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಬಳ್ಳಾರಿ ನಗರದಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯ ಅವಧಿಯಲ್ಲೂ ವೈವಿಧ್ಯ ಕಂಡುಬರುತ್ತಿದೆ. ಕೆಲವೆಡೆ ಒಂದು ದಿನದಲ್ಲೇ ಗಣೇಶನ ವಿಸರ್ಜನೆ ನಡೆಯಲಿದ್ದರೆ ಇನ್ನೂ ಕೆಲವು ಕಡೆ ಮೂರು, ಐದು ಹಾಗೂ ಒಂಬತ್ತು ದಿನಗಳ ಕಾಲ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ಕೆಲವು ಬಡಾವಣೆಗಳಲ್ಲಿ 21 ದಿನಗಳ ಕಾಲ ಗಣೇಶನಿಗೆ ವಿಶೇಷ ಪೂಜೆ ಹಾಗೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಸಿದ್ಧತೆ ನಡೆದಿದೆ. ಹೀಗಾಗಿ ಮುಂದಿನ ಹಲವು ದಿನಗಳ ಕಾಲ ನಗರದ ವಿವಿಧ ಬಡಾವಣೆಗಳಲ್ಲಿ ಗಣೇಶೋತ್ಸವದ ಸಡಗರ ಮುಂದುವರಿಯಲಿದೆ.ಶಬ್ದಮಾಲಿನ್ಯದ ಬಗ್ಗೆ ಇರಲಿ ಎಚ್ಚರ: ಗಣೇಶ ಹಬ್ಬದ ಸಂಭ್ರಮದ ನಡುವೆ ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವೂ ಇದೆ. ಗಣೇಶ ವಿಸರ್ಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ಭಾರಿ ಧ್ವನಿವರ್ಧಕ ಬಳಸುವ ಸಾಧ್ಯತೆ ಇರುವುದರಿಂದ ಶಬ್ದಮಾಲಿನ್ಯ ಉಂಟಾಗುವ ಆತಂಕವಿದೆ.
ವಿಶೇಷವಾಗಿ ಆಸ್ಪತ್ರೆಗಳು, ಶಾಲಾ–ಕಾಲೇಜುಗಳು, ವೃದ್ಧರು ಹಾಗೂ ಜನನಿಬಿಡ ಪ್ರದೇಶಗಳ ಸುತ್ತಮುತ್ತ ಹೆಚ್ಚಿನ ಶಬ್ದ ಉಂಟಾಗದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ. ಪರಿಸರ ಸ್ನೇಹಿ ಗಣಪನ ಪ್ರತಿಷ್ಠಾಪನೆಗೆ ಆದ್ಯತೆ ನೀಡುವುದರ ಜತೆಗೆ ವಿಸರ್ಜನೆಯ ಸಂದರ್ಭದಲ್ಲೂ ಜಲಮೂಲಗಳು ಕಲುಷಿತವಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಈಗಾಗಲೇ ಹಬ್ಬದ ಸಿದ್ಧತೆಯ ಮೇಲೆ ನಿಗಾ ಇರಿಸಿದ್ದು, ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ.