ಆಯುಧ ಪೂಜೆಯ ಹಿನ್ನೆಲೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬಾಳೆಕಂದು, ಮಾವಿನ ತೋರಣ ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಂದಾಗಿದ್ದಾರೆ
ಬಳ್ಳಾರಿ: ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ದಸರಾ ಮಹೋತ್ಸವದ ಆಯುಧ ಪೂಜೆ ಮಂಗಳವಾರ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲು ಸಿದ್ಧತೆಗಳು ನಡೆದಿವೆ.
ಮನೆಗಳು, ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಆಯುಧ ಪೂಜೆಗೆ ಸಿದ್ಧತೆಗಳು ಜೋರಾಗಿದ್ದು, ಗಣಿನಾಡಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಆಯುಧ ಪೂಜೆಯ ಹಿನ್ನೆಲೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬಾಳೆಕಂದು, ಮಾವಿನ ತೋರಣ ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಂದಾಗಿದ್ದಾರೆ. ವಿಶೇಷವಾಗಿ ವಾಹನಗಳ ಅಲಂಕಾರಕ್ಕೆ ಅಗತ್ಯವಿರುವ ಹೂವಿನ ಹಾರಗಳು, ನಿಂಬೆಹಣ್ಣು, ಕುಂಬಳಕಾಯಿ, ಬಣ್ಣದ ರಿಬ್ಬನ್ಗಳು ಹಾಗೂ ಅಲಂಕಾರಿಕ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ.
ವಾಹನಗಳ ಸ್ವಚ್ಛತೆಗೆ ಆದ್ಯತೆ: ಆಯುಧ ಪೂಜೆ ಎಂದರೆ ವಾಹನಗಳ ಪೂಜೆಗೆ ವಿಶೇಷ ಮಹತ್ವ. ಹೀಗಾಗಿ ಕಾರು, ಬೈಕ್, ಆಟೋ, ಟ್ಯಾಕ್ಸಿ, ಬಸ್, ಲಾರಿ, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳ ಮಾಲೀಕರು ತಮ್ಮ ವಾಹನ ಸ್ವಚ್ಛಗೊಳಿಸಿ, ಅಲಂಕರಿಸಲು ಮುಂದಾಗಿದ್ದಾರೆ. ವಾಹನಗಳ ವಾಷಿಂಗ್ ಸೆಂಟರ್, ಸರ್ವಿಸ್ ಕೇಂದ್ರಗಳಲ್ಲಿಯೂ ಹಬ್ಬದ ಹಿನ್ನೆಲೆ ಚಟುವಟಿಕೆ ಹೆಚ್ಚಾಗಿದೆ.ಆಯುಧ ಪೂಜೆಯ ದಿನ ವಾಹನಗಳಿಗೆ ಹೂವಿನ ಹಾರ ಹಾಕಿ, ಅರಿಶಿಣ, ಕುಂಕುಮ ಹಚ್ಚಿ, ನಿಂಬೆಹಣ್ಣು ಹಾಗೂ ಕುಂಬಳಕಾಯಿ ಬಳಸಿ ಪೂಜೆ ಸಲ್ಲಿಸುವುದು ಸಂಪ್ರದಾಯ. ವಾಹನ ಚಾಲಕರು ತಮ್ಮ ಬದುಕಿಗೆ ಆಸರೆಯಾಗಿರುವ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸುರಕ್ಷಿತ ಸಂಚಾರಕ್ಕಾಗಿ ಪ್ರಾರ್ಥಿಸಲಿದ್ದಾರೆ.
ಕೈಗಾರಿಕೆಗಳಲ್ಲಿ ವಿಶೇಷ ಪೂಜೆ: ಗಣಿಗಾರಿಕೆ ಹಾಗೂ ಕೈಗಾರಿಕೆಗಳಿಗೆ ಹೆಸರಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ಜಿಲ್ಲೆಯ ವಿವಿಧ ಕೈಗಾರಿಕಾ ಘಟಕಗಳು, ಉಕ್ಕು ಕಾರ್ಖಾನೆಗಳು, ಗಣಿಗಾರಿಕೆ ಸಂಸ್ಥೆಗಳು, ವರ್ಕ್ಶಾಪ್ಗಳು ಹಾಗೂ ಸಣ್ಣಪುಟ್ಟ ಉದ್ಯಮಗಳಲ್ಲಿ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಲು ಸಿದ್ಧತೆ ನಡೆದಿದೆ.ಕಾರ್ಖಾನೆಗಳಲ್ಲಿನ ಬೃಹತ್ ಯಂತ್ರಗಳು, ಉತ್ಪಾದನಾ ಉಪಕರಣಗಳು, ಜೆಸಿಬಿ, ಕ್ರೇನ್, ಟಿಪ್ಪರ್ ಸೇರಿದಂತೆ ವಿವಿಧ ಯಂತ್ರೋಪಕರಣ ಸ್ವಚ್ಛಗೊಳಿಸಿ, ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುವುದು ವಾಡಿಕೆ. ಕಾರ್ಮಿಕರು ಹಾಗೂ ಮಾಲೀಕರು ಒಟ್ಟಾಗಿ ಪೂಜೆ ನೆರವೇರಿಸಿ ಉದ್ಯಮದ ಅಭಿವೃದ್ಧಿ ಮತ್ತು ಕಾರ್ಮಿಕರ ಸುರಕ್ಷತೆಗಾಗಿ ಪ್ರಾರ್ಥಿಸಲಿದ್ದಾರೆ.
ಅಂಗಡಿ ಮುಂಗಟ್ಟುಗಳಲ್ಲೂ ಸಂಭ್ರಮ: ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಬೆಂಗಳೂರು ರಸ್ತೆ, ಬ್ರೂಸ್ಪೇಟೆ, ಕಾಳಮ್ಮ ಬೀದಿ, ಮೋತಿ ವೃತ್ತ, ರಾಯಲ್ ವೃತ್ತ ಸೇರಿದಂತೆ ವಿವಿಧೆಡೆ ಅಂಗಡಿ ಮುಂಗಟ್ಟುಗಳ ಸ್ವಚ್ಛತೆ ಹಾಗೂ ಅಲಂಕಾರಕ್ಕೆ ವ್ಯಾಪಾರಿಗಳು ಸಿದ್ಧತೆ ನಡೆಸಿದ್ದಾರೆ.ಬಟ್ಟೆ ಅಂಗಡಿಗಳು, ಚಿನ್ನಾಭರಣ ಮಳಿಗೆಗಳು, ಎಲೆಕ್ಟ್ರಾನಿಕ್ಸ್ ಅಂಗಡಿಗಳು, ಹೋಟೆಲ್ಗಳು, ಗ್ಯಾರೇಜ್ಗಳು, ಮುದ್ರಣಾಲಯಗಳು ಸೇರಿದಂತೆ ವಿವಿಧ ವ್ಯಾಪಾರ ಮಳಿಗೆಗಳಲ್ಲಿ ದೇವಿಯ ಪೂಜೆ ನೆರವೇರಿಸಲು ಸಿದ್ಧತೆ ನಡೆದಿದೆ.
ಹೂವು, ಹಣ್ಣುಗಳಿಗೆ ಬೇಡಿಕೆ: ಆಯುಧ ಪೂಜೆ ಹಿನ್ನೆಲೆ ಚೆಂಡು ಹೂವು, ಸೇವಂತಿಗೆ, ಮಲ್ಲಿಗೆ ಸೇರಿದಂತೆ ವಿವಿಧ ಹೂವುಗಳಿಗೆ ಬೇಡಿಕೆಯಿತ್ತು. ಬಾಳೆಕಂದು, ಮಾವಿನ ಎಲೆ, ತೆಂಗಿನಕಾಯಿ, ನಿಂಬೆಹಣ್ಣು, ಕುಂಬಳಕಾಯಿ ಹಾಗೂ ಇತರೆ ಪೂಜಾ ಸಾಮಗ್ರಿಗಳ ಮಾರಾಟವೂ ಚುರುಕಾಗಿ ಕಂಡು ಬಂತು.ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾಗುವುದರಿಂದ ಹೂವು, ಹಣ್ಣುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದ್ದು, ಸಾಮಾನ್ಯ ಗ್ರಾಹಕರಿಗೆ ಹೆಚ್ಚುವರಿ ಹೊರೆ ಬೀಳುವ ಆತಂಕವಿದೆ.
ಗ್ರಾಮೀಣ ಭಾಗದಲ್ಲೂ ಸಡಗರ: ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಕಂಪ್ಲಿ ಹಾಗೂ ಸಂಡೂರು ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿಯೂ ಆಯುಧ ಪೂಜೆಗೆ ಸಿದ್ಧತೆಗಳು ನಡೆದಿವೆ. ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸುವ ಟ್ರ್ಯಾಕ್ಟರ್, ಎತ್ತಿನ ಬಂಡಿ, ನೇಗಿಲು, ಕುಂಟೆ ಹಾಗೂ ಇತರೆ ಕೃಷಿ ಉಪಕರಣಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಿದ್ದಾರೆ.